ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದೂಕು ಹಕ್ಕು ರದ್ದು ಮಾಡದಿರಲು ಮನವಿ

ಪಿಐಎಲ್‌ಗೆ ನೆಲಜಿ ಫಾಮರ್ಸ್ ಕ್ಲಬ್ ವಿರೋಧ, ಜಿಲ್ಲಾಡಳಿತ ಮಾಹಿತಿ ನೀಡಲು ಆಗ್ರಹ
Last Updated 26 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವರ ಬಂದೂಕು ಹಕ್ಕು ರದ್ದು ಮಾಡುವಂತೆ ಸಾರ್ವಜನಿಕರೊಬ್ಬರು, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿರುವುದಕ್ಕೆ ನೆಲಜಿ ಫಾಮರ್ಸ್ ಕ್ಲಬ್ ವಿರೋಧ ವ್ಯಕ್ತಪಡಿಸಿದೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ ಅಧ್ಯಕ್ಷ ಎಂ.ಕೆ.ನಂಜಪ್ಪ ಮಾತನಾಡಿ, ‘ಭಾರತದ ಶಸ್ತ್ರಾಸ್ತ್ರ ಕಾಯ್ದೆ 1959ರ ಸೆಕ್ಷನ್ 3 ಮತ್ತು 4ರ ಅನ್ವಯ ಬಂದೂಕು ಪರವಾನಗಿ ಹೊಂದಲು ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ವಿಶೇಷ ಹಕ್ಕಿದೆ. ಈಗ ಕೊಡವರ ಹಕ್ಕು ಕಸಿಯಲು ಪಿತೂರಿ ನಡೆದಿದೆ’ ಎಂದು ಆರೋಪಿಸಿದರು.

ಹಿಂದಿನಿಂದಲೂ ಕೊಡವರು ಬಂದೂಕನ್ನು ಪೂಜಾ ಪರಿಕರವೆಂದು ಪರಿಗಣಿಸಿ, ನೆಲ್ಲಕ್ಕಿಯಲ್ಲಿಟ್ಟು ಪೂಜಿಸುತ್ತಿದ್ದಾರೆ. ಹೀಗಿರುವಾಗ ಇದನ್ನು ಪ್ರಶ್ನಿಸಿರುವುದು ಸೂಕ್ತವಲ್ಲ. ಬಂದೂಕನ್ನು ಕೊಡವ ಕುಟುಂಬಗಳಲ್ಲಿ ಗಂಡುಮಗು ಜನಿಸಿದರೆ ಸಾಂಕೇತಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸುವುದರ ಮೂಲಕ ಯೋಧನೊಬ್ಬ ಭೂಮಿಗೆ ಬಂದನೆಂದು ಶುಭ ಸಂಕೇತವಾಗಿ ಬಳಸುತ್ತೇವೆ. ಹೀಗಾಗಿ, ಕೋವಿ ಕೊಡವರು ಹುಟ್ಟಿನಿಂದ ಸಾವಿನವರೆಗೂ ಬಳಸುವ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.

ಹೈಕೋರ್ಟ್‌ನಲ್ಲಿದ್ದ ಅರ್ಜಿ ಸರ್ಕಾರಕ್ಕೆ ವರ್ಗಾವಣೆಯಾಗಿದೆ. ಸರ್ಕಾರವು ಜಿಲ್ಲಾಡಳಿತದಿಂದ ಮಾಹಿತಿ ಕೇಳಿದೆ. ಜಿಲ್ಲಾಡಳಿತ, ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಸೂಕ್ತ ರೀತಿಯಲ್ಲಿ ಮಾಹಿತಿ ನೀಡಿ ಕೊಡವರ ಹಕ್ಕನ್ನು ರಕ್ಷಿಸಲು ಸಹಕರಿಸಬೇಕು ಎಂದು ಅವರು ವಿನಂತಿಸಿದರು.

ಕೊಡವರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಲಾಂಛನ ಕೋವಿ. ಅದಕ್ಕೆ ಆಕ್ಷೇಪಿಸಿರುವುದು ಸರಿಯಲ್ಲ. ಬಂದೂಕು ಹೊಂದಿರುವ ಕೊಡವರು, ಅದನ್ನು ಸಂವಿಧಾನ ವಿರೋಧವಾಗಿ ಬಳಸಿಲ್ಲ ಎಂದು ನೆಲಜಿ ಫಾಮರ್ಸ್‌ ಕ್ಲಬ್‌ಅಧ್ಯಕ್ಷ ಎಂ.ಕೆ.ನಂಜಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್‌ ಕಾರ್ಯದರ್ಶಿ ಸಚಿನ್ ಗಣಪತಿ, ನಿರ್ದೇಶಕರಾದ ವಿಜು ಅಪ್ಪಚ್ಚು, ನವೀನ್ ನಾಚಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT