‘ಪ್ರವಾಸಿ ಉತ್ಸವ’ಕ್ಕೆ ಉತ್ತಮ ಸ್ಪಂದನೆ

ಮಡಿಕೇರಿ: ಕೊಡಗು ಪ್ರವಾಸೋದ್ಯಮದ ಉತ್ತೇಜನಕ್ಕೆ ಆಯೋಜಿಸಿದ್ದ ‘ಕೊಡಗು ಪ್ರವಾಸಿ ಉತ್ಸವ’ವು ಅಭೂತಪೂರ್ವ ಯಶಸ್ಸು ಕಂಡಿದ್ದು ಮುಂದಿನ ದಿನಗಳಲ್ಲಿಯೂ ವ್ಯವಸ್ಥಿತ ರೀತಿಯಲ್ಲಿ ಪ್ರವಾಸಿಗರನ್ನು ಕೊಡಗಿಗೆ ಸೆಳೆಯುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಪ್ರಭಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದರು.
‘ಕೊಡಗು ಪ್ರವಾಸಿ ಉತ್ಸವ’ದ ಯಶಸ್ಸಿನ ಹಿನ್ನೆಲೆಯಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರವಾಸಿ ಉತ್ಸವ ಯಾವುದೇ ಸಮಸ್ಯೆ ಇಲ್ಲದಂತೆ ಮುಕ್ತಾಯವಾಯಿತು. ಜನರ ಸ್ಪಂದನೆಯೂ ನಿರೀಕ್ಷೆಗೆ ಮೀರಿತ್ತು. ಮುಂದಿನ ದಿನಗಳಲ್ಲಿಯೂ ಇಂಥ ಕಾರ್ಯಕ್ರಮಗಳ ಮೂಲಕ ಕೊಡಗಿಗೆ ಪ್ರವಾಸಿಗರು ಬರುವಂತೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಕೊಡಗು ಹೋಟೆಲ್ ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ‘ಕೊಡಗು ಸುರಕ್ಷಿತ’ವಾಗಿದೆ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ಸಾರುವಲ್ಲಿ ಈ ಉತ್ಸವ ಸಫಲವಾಗಿದೆ. ಸಾವಿರಾರು ಜನರು ಮೂರು ದಿನಗಳ ಪ್ರವಾಸಿ ಉತ್ಸವದಲ್ಲಿ ಪಾಲ್ಗೊಂಡಿದ್ದು, ತಮ್ಮೆಲ್ಲರ ಶ್ರಮ ಸಾರ್ಥಕಗೊಳಿಸಿದೆ ಎಂದು ಹೇಳಿದರು.
‘ಪ್ರವಾಸಿ ಉತ್ಸವ’ವು ಪ್ರವಾಸೋದ್ಯಮದ ಚೇತರಿಕೆಗೆ ಸಾಕಷ್ಟು ಕೊಡುಗೆ ನೀಡಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಫಲಪುಪ್ಪ ಪ್ರದರ್ಶನ, ಆಹಾರ ಮೇಳದೊಂದಿಗೆ ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಆಯೋಜಿಸಿದ್ದ ಸ್ಟ್ರೀಟ್ ಫೆಸ್ಟಿವಲ್ ಕೂಡ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಜಿ.ಚಿದ್ವಿಲಾಸ್ ಮಾತನಾಡಿ, ಪ್ರವಾಸೋದ್ಯಮ ಚಟುವಟಿಕೆ ಸಂಬಂಧಿತ ನಾನಾ ಕಾರ್ಯಕ್ರಮಗಳನ್ನು ಕೊಡಗಿನಲ್ಲಿ ಆಯೋಜಿಸಲು ಅವಕಾಶಗಳಿವೆ. ಕೊಡಗಿನ ಜನರು ಇಂಥ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಾರೆ ಎಂಬುದಕ್ಕೆ ಗಾಂಧಿ ಮೈದಾನಕ್ಕೆ ಬಂದ ಜನಸ್ತೋಮವೇ ಸಾಕ್ಷಿ. ಈಗಾಗಲೇ ಜಿಲ್ಲಾಡಳಿತದಲ್ಲಿನ ಕೊಡಗು ಉತ್ಸವ ಮತ್ತು ಗಡಿ ಉತ್ಸವದ ಅನುದಾನ ಬಳಸಿಕೊಂಡು ಮುಂದಿನ ಏಪ್ರಿಲ್- ಮೇನಲ್ಲಿ ಸರ್ಕಾರದಿಂದ ಹಬ್ಬದ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯಬೇಕು ಎಂದು ಮನವಿ ಮಾಡಿದರು.
ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಡಿವೈಎಸ್‌ಪಿ ಸುಂದರರಾಜ್, ಕೂರ್ಗ್ ಟ್ರಾವಲ್ ಅಸೋಸಿಯೇಷನ್ ಅಧ್ಯಕ್ಷ ಚಿಯ್ಯಂಡ ಸತ್ಯ, ಪೌರಾಯುಕ್ತ ರಮೇಶ್, ಪೊಲೀಸ್ ಅಧಿಕಾರಿಗಳಾದ ಅನೂಪ್ ಮಾದಪ್ಪ, ಷಣ್ಮುಗ, ಚೇತನ್, ಛೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ನಿರ್ದೇಶಕ ಎ.ಕೆ. ನವೀನ್, ಪಶುವೈದ್ಯಕೀಯ ಇಲಾಖೆಯ ಅಧಿಕಾರಿ ತಮ್ಮಯ್ಯ, ತೋಟಗಾರಿಕಾ ಇಲಾಖಾಧಿಕಾರಿ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖಾಧಿಕಾರಿ ದರ್ಶನ್ ಹಾಜರಿದ್ದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All