ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರು ಸಿಕ್ಕಿದ ಸಂಭ್ರಮದಲ್ಲಿ ಸಂತ್ರಸ್ತರು

ರೋಟರಿಯಿಂದ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರ, ಇನ್ನೂ 25 ಮನೆ ನಿರ್ಮಾಣದ ಭರವಸೆ
Last Updated 18 ಜೂನ್ 2019, 14:49 IST
ಅಕ್ಷರ ಗಾತ್ರ

ಮಡಿಕೇರಿ: ಅಲ್ಲಿ ಸಂಭ್ರಮವಿತ್ತು, ಹೊಸ ಮನೆಯ ಮುಂದೆ ರಂಗೋಲಿ, ಬಾಳೆಕಂದಿನ ಸಿಂಗಾರ, ಮತ್ತೊಂದು ಮನೆಯಲ್ಲಿ ಗೃಹಪ್ರವೇಶದ ಸಡಗರ, ಹೋಮ ಸೇರಿದಂತೆ ಧಾರ್ಮಿಕ ಪೂಜೆ, ಮತ್ತೊಬ್ಬರು ಊರಿನವರಿಗೆಲ್ಲ ಸಿಹಿ ಹಂಚಿದರು... ನೋವು ಮರೆತು ಆಶ್ರಯ ಸಿಕ್ಕಿದ ಸಂತಸದಲ್ಲಿ ಎಲ್ಲರೂ ಅಲ್ಲಿ ಸೇರಿದ್ದರು.

– ಇದು ಸೋಮವಾರಪೇಟೆ ತಾಲ್ಲೂಕಿನ ಇಗ್ಗೋಡ್ಲು ಗ್ರಾಮದಲ್ಲಿ ಕಂಡುಬಂದ ದೃಶ್ಯ. ಅದಕ್ಕೆ ಕಾರಣವಾಗಿದ್ದು ರೋಟರಿ ಸಂಸ್ಥೆಯಿಂದ ಮನೆ ಹಸ್ತಾಂತರ ಕಾರ್ಯಕ್ರಮ.

ಕಳೆದ ವರ್ಷ ಸುರಿದ ಭಾರೀ ಮಳೆ ಹಾಗೂ ಭೂಕುಸಿತದಿಂದ ಆಶ್ರಯ ಕಳೆದುಕೊಂಡ 25 ಕುಟುಂಬಕ್ಕೆ ರೋಟರಿ ಸಂಸ್ಥೆಯು ಮನೆ ನಿರ್ಮಿಸಿದ್ದು ಮಂಗಳವಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ ನಿವೇಶನ ನೀಡಿದರೆ ಕೆಲವು ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡುತ್ತೇವೆ ಎಂದು ಜಿಲ್ಲಾಡಳಿತಕ್ಕೆ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಮನವಿ ಮಾಡಿದ್ದರು. ಆದರೆ, ಜಿಲ್ಲಾಡಳಿತ ಅದಕ್ಕೆ ಸ್ಪಂದಿಸಿರಲಿಲ್ಲ. ‘ನಾವೇ ಮನೆ ನಿರ್ಮಿಸಿಕೊಡುತ್ತೇವೆ’ ಎಂದು ಹೇಳಿತ್ತು. ಬಳಿಕ ರೋಟರಿ ಸಂಸ್ಥೆಯ ಪದಾಧಿಕಾರಿಗಳೇ ಸರ್ವೆ ನಡೆಸಿ ಭಾಗಶಃ ಹಾನಿ, ಸೂಕ್ಷ್ಮ ಪ್ರದೇಶದಲ್ಲಿ ವಾಸವಿದ್ದವರನ್ನು ಗುರುತಿಸಿ ಪ್ರಥಮ ಹಂತದಲ್ಲಿ ಅವರದ್ದೇ ಜಾಗದಲ್ಲಿ ಮನೆ ನಿರ್ಮಿಸಲಾಗಿದೆ. ಮನೆಗಳೂ ಸುಂದರವಾಗಿವೆ. ಮೂಲಸೌಕರ್ಯವನ್ನೂ ಕಲ್ಪಿಸಲಾಗಿದೆ. ಇಗ್ಗೋಡ್ಲು ಗ್ರಾಮದಲ್ಲಿ ನಡೆದ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಫಲಾನುಭವಿಗಳ ಕಣ್ಣಲ್ಲಿ ಆನಂದಭಾಷ್ಪ. ಜಿಲ್ಲಾಡಳಿತ ಪಟ್ಟಿಯಿಂದ ಕೈಬಿಟ್ಟಿದ್ದವರಿಗೆ ಈಗ ಸೂರು ಲಭಿಸಿದೆ. ಸರ್ಕಾರ ಸಂತ್ರಸ್ತರಿಗೆ ಸೂರು ಕಲ್ಪಿಸುವುದಕ್ಕೂ ಮೊದಲೇ ರೋಟರಿ ಸಂಸ್ಥೆ ಮನೆ ಹಸ್ತಾಂತರ ಮಾಡಿರುವುದು ಮತ್ತೊಂದು ವಿಶೇಷ.

ಕಾರ್ಯಕ್ರಮದಲ್ಲಿ ರೋಟರಿ ಅಂತರರಾಷ್ಟ್ರೀಯ ಸಂಸ್ಥೆಯ ಮಾಜಿ ಅಧ್ಯಕ್ಷ ಕಲ್ಯಾಣ್‌ ಬ್ಯಾನರ್ಜಿ ಮಾತನಾಡಿ, ‘ಕೊಡಗಿನಲ್ಲಿ ಪ್ರಕೃತ್ತಿ ವಿಕೋಪ ಸಂತ್ರಸ್ತರಿಗೆ ಮೊದಲ ಹಂತದಲ್ಲಿ 25 ಮನೆ ನಿರ್ಮಿಸಿಕೊಡಲಾಗಿದೆ. ರೋಟರಿ ಕ್ಲಬ್‌ಗಳ ನೆರವಿನಿಂದ ಇನ್ನೂ 25 ಮನೆ ನಿರ್ಮಿಸಿಕೊಡಲಾಗುವುದು’ ಎಂದು ಹೇಳಿದರು.

ರೋಟರಿ ಜಿಲ್ಲಾ ಗವರ್ನರ್‌ ಪಿ.ರೋಹಿನಾಥ್ ಮಾತನಾಡಿ, ‘ಕೊಡಗಿನಲ್ಲಿ ಜಲಪ್ರಳಯ ಸಂಭವಿಸಿದಾಗ ಸಂತ್ರಸ್ತರಿಗೆ ಅಗತ್ಯವಿದ್ದ ಮನೆ ನಿರ್ಮಾಣಕ್ಕೆ ರೋಟರಿ ಜಿಲ್ಲೆ 3181 ಮುಂದಾಗಿತ್ತು. ಕೇವಲ 3 ತಿಂಗಳಲ್ಲಿ 25 ಮನೆಗಳನ್ನು ತಲಾ ₹ 5 ಲಕ್ಷ ವೆಚ್ಚದಲ್ಲಿ ನಿಮಿ೯ಸಲಾಗಿದೆ. ಸಂತ್ರಸ್ತರಿಗೆ ಯೋಗ್ಯ ಮನೆಗಳನ್ನು ನಿಗದಿತ ಅವಧಿಯಲ್ಲಿಯೇ ನೀಡಿದ ತೃಪ್ತಿ ತನಗಿದೆ’ ಎಂದು ಹೇಳಿದರು.

ಭಾರತದಲ್ಲಿ ಶೇ 40 ಜನರು ವಿಕೋಪ ವಿಕೋಪ ಸಂಭವಿಸಿದಾಗ ಸಂತ್ರಸ್ತರಾಗಿರುತ್ತಾರೆ. ಕೊಡಗಿನಲ್ಲಿ ರೋಟರಿ ಸಂಸ್ಥೆ ವತಿಯಿಂದ ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯು 25 ಮನೆಗಳನ್ನು ತಲಾ ₹ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು 10 ಕುಟುಂಬಗಳಲ್ಲಿ ಮಹಿಳೆಯರೇ ನಿರ್ವಹಿಸುತ್ತಿದ್ದು ಐವರು ವಿಧವೆಯರೂ ಮನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿದೇ೯ಶಕ ರಾಜನ್ ಸ್ಯಾಮುವೆಲ್ ಹೇಳಿದರು.

ರೋಟರಿ ರೀಬಿಲ್ಡ್ ಕೊಡಗು ಯೋಜನೆಯ ಅಧ್ಯಕ್ಷ ಡಾ.ರವಿ ಅಪ್ಪಾಜಿ, ಒಂದು ಬೆಡ್ ರೂಮ್, ಅಡುಗೆ ಕೋಣೆ, 1 ಹಾಲ್, ಶೌಚಾಲಯವನ್ನು ಹೊಂದಿರುವ 320 ಚದರ ಅಡಿ ವಿಸ್ತೀಣ೯ದ ತಲಾ ₹ 5 ಲಕ್ಷ . ವೆಚ್ಚವಾಗಿರುವ ಮನೆಗಳಿಗೆ ಮಾಚ್೯ 28ರಂದು ಕಾಮಗಾರಿ ಪ್ರಾರಂಭಿಸಲಾಗಿದ್ದು ಕೇವಲ ಮೂರು ತಿಂಗಳಲ್ಲಿ ಮನೆ ನಿಮಿ೯ಸಿ ಫಲಾನುಭವಿಗಳಿಗೆ ಮಳೆಗಾಲಕ್ಕೂ ಮುನ್ನ ನೀಡಿದ ತೃಪ್ತಿಯಿದೆ ಎಂದರು.

ರೋಟರಿ ಮಾಜಿ ಗವರ್ನರ್‌ ಕೃಷ್ಣಶೆಟ್ಟಿ ಹಾಗೂ ಮಾದಾಪುರ ಗ್ರಾ.ಪಂ ಅಧ್ಯಕ್ಷೆ ಲತಾ ಮಾತನಾಡಿದರು.

ರೋಟರಿ ಜಿಲ್ಲೆಯ ಮಾಜಿ ಗವರ್ನರ್‌ಗಳಾದ ಡಾ.ನಾಗಾಜು೯ನ್, ದೇವದಾಸರೈ, ಮಾತಂಡ ಸುರೇಶ್ ಚಂಗಪ್ಪ, ಆರ್.ಕೃಷ್ಣ, ನಾಗೇಂದ್ರಪ್ರಸಾದ್, ಮುಂದಿನ ಸಾಲಿನ ರೋಟರಿ ಗವನ೯ರ್ ಜ್ಯೊಸೆಫ್ ಮ್ಯಾಥ್ಯು, ನಿಯೋಜಿತ ಗವನ೯ರ್ ರಂಗನಾಥ ಭಟ್ ಹಾಜರಿದ್ದರು.

ಕಾಯ೯ಕ್ರಮದ ನೆನಪಿಗಾಗಿ ಸಸಿಯನ್ನೂ ಕಲ್ಯಾಣ್ ಬ್ಯಾನಜಿ೯ ನೆಟ್ಟರು. ಕುಶಾಲನಗರ ಇನ್ನರ್ ವೀಲ್ ಸಂಸ್ಥೆಯಿಂದ 25 ಫಲಾನುಭವಿಗಳಿಗೆ ಗ್ಯಾಸ್ ಸ್ಟ್ವೌ ಮತ್ತು ವಾಟರ್ ಫಿಲ್ಟರ್ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT