ಕೊಡಗು ಮರು ನಿರ್ಮಾಣ ‍ಪ್ರಾಧಿಕಾರ ರಚನೆ ಅಗತ್ಯ: ಎಚ್‌.ವಿಶ್ವನಾಥ್‌

7

ಕೊಡಗು ಮರು ನಿರ್ಮಾಣ ‍ಪ್ರಾಧಿಕಾರ ರಚನೆ ಅಗತ್ಯ: ಎಚ್‌.ವಿಶ್ವನಾಥ್‌

Published:
Updated:
Deccan Herald

ಮಡಿಕೇರಿ: ‘ಕೊಡಗು ಜಿಲ್ಲೆಯ ಭೂಕುಸಿತ ಹಾಗೂ ಮಹಾಮಳೆಯಿಂದ ತತ್ತರಿಸಿದ್ದು, ಮರು ನಿರ್ಮಾಣ ಪ್ರಾಧಿಕಾರ ರಚಿಸುವುದು ಅಗತ್ಯವಿದೆ. ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌ ಭರವಸೆ ನೀಡಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಆಗಿರುವ ಅನಾಹುತ ವೀಕ್ಷಿಸಿದರೆ ಶಾಶ್ವತವಾದ ‍ಪ್ರಾಧಿಕಾರ ಅಗತ್ಯವಿದೆ. ಭವಿಷ್ಯದಲ್ಲಿ ಆಗುವ ಅನಾಹುತಗಳನ್ನೂ ತಡೆಯಲು ಪ್ರಾಧಿಕಾರದಿಂದ ಮಾತ್ರ ಸಾಧ್ಯ’ ಎಂದು ಪ್ರಸ್ತಾಪಿಸಿದರು.

‘ಜಿಲ್ಲಾಡಳಿತ ಹಾಗೂ ಸರ್ಕಾರದ ಅನುಮತಿಯಂತೆ ಎಂಜಿನಿಯರ್‌ ತಂಡವು ಪರಿಶೀಲನೆ ನಡೆಸಿ, ವರದಿ ತಯಾರಿಸಲಾಗಿದೆ. ಜಿಲ್ಲೆಯಲ್ಲಿ ಸೇತುವೆ ಹಾಗೂ ರಸ್ತೆಗಳ ಅಭಿವೃದ್ಧಿಗೆ ಆದಷ್ಟು ಶೀಘ್ರವೇ ಕ್ರಮ ಕೈಗೊಳ್ಳಬೇಕು. ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಅದಕ್ಕೆ ಸಮಯಾವಕಾಶ ಬೇಕು’ ಎಂದು ಹೇಳಿದರು.

ಕೊಡಗಿನಲ್ಲಿ ಜಾತಿ, ಧರ್ಮವೆಂದು ಗಲಾಟೆ ಮಾಡಿಕೊಳ್ಳಲಾಗುತ್ತಿತ್ತು. ಇಂತಹ ವಿಚಾರದಲ್ಲಿ ಪಕ್ಷಾತೀತವಾಗಿ ದುಃಖ ಪರಿಹರಿಸಿಕೊಳ್ಳುವ ಕೆಲಸವಾಗಬೇಕು. ಕೆಟ್ಟ ದಿನಗಳನ್ನು ಜನರು ಸವಾಲಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ನಿಯೋಗ ತೆರಳಲಿ: ಕೊಡಗಿನಲ್ಲಿ ಬಿಜೆಪಿಯ ಸಂಸದರು, ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರಿದ್ದಾರೆ. ಜಿಲ್ಲೆಯ ಬಿಜೆಪಿ ನಿಯೋಗವು ಕೇಂದ್ರ ಸರ್ಕಾರದ ಬಳಿಗೆ ತೆರಳಿ ವಿಶೇಷ ಪ್ಯಾಕೇಜ್‌ಗೆ ಮನವಿ ಮಾಡಲಿ. ಜಿಲ್ಲೆಯ ಮರು ನಿರ್ಮಾಣಕ್ಕೆ ರಾಜಕೀಯ ಬದಿಗಿಟ್ಟು ಕೆಲಸ ಮಾಡಬೇಕು ಎಂದು ಕೋರಿದರು.

ಭೂಕುಸಿತದ ಬಳಿಕ ಜಲಮೂಲದ ಕಣ್ಣುಗಳು ಮುಚ್ಚಿದ್ದು ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ ಉಂಟಾಗಲಿದೆ. ಜಿಲ್ಲೆಯ ಜನರು ಅದನ್ನು ಧೈರ್ಯದಿಂದ ಎದುರಿಸಬೇಕು. ಮಾನವೀಯ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಪ್ರೆಸ್‌ಕ್ಲಬ್‌ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಆರ್‌. ಸುಬ್ರಮಣಿ ಹಾಜರಿದ್ದರು.

‘ಏಕಕಾಲದಲ್ಲಿ ಚುನಾವಣೆ: ವಿಶ್ವಾಸಕ್ಕೆ ತೆಗೆದುಕೊಳ್ಳಲಿ’ 
ಭಾರತದಲ್ಲಿ ಚುನಾವಣೆಗೇ ಸಾಕಷ್ಟು ಹಣ ಖರ್ಚಾಗುತ್ತಿದ್ದು ಇಡೀ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗೆ ನಡೆಯುವುದಾದರೆ ಸ್ವಾಗತಿಸುತ್ತೇನೆ. ಆರ್ಥಿಕ ಹೊರೆಯೂ ತಗ್ಗಲಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ವಿಶ್ವನಾಥ್‌ ಹೇಳಿದರು.

ಜಿಲ್ಲಾ ಸಮಿತಿಗಳಿಗೆ ನೇಮಕ
ಜೆಡಿಎಸ್‌ನ ರಾಜ್ಯ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ. ಮುಂದಿನ ವಾರ ಜಿಲ್ಲಾ ಸಮಿತಿಗಳನ್ನು ವಿಸರ್ಜಿಸಿ, ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಕೊಡಗಿಗೂ ನೂತನ ಅಧ್ಯಕ್ಷರ ಆಯ್ಕೆ ಆಗಲಿದ್ದು, ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

‘ಒಳಜಗಳ ಎಲ್ಲ ಪಕ್ಷದಲ್ಲೂ ಇರುವುದೆ. ಜೆಡಿಎಸ್‌ನಲ್ಲೂ ಸಣ್ಣಪುಟ್ಟ ವ್ಯತ್ಯಾಸಗಳಿದ್ದು ಅದನ್ನು ಸರಿ ಪಡಿಸಲಾಗುವುದು’ ಎಂದು ಭರವಸೆ ನೀಡಿದರು.     

 

 
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !