ತಡೆಗೋಡೆ, ಚರಂಡಿ ನಿರ್ಮಿಸಲು ಸೂಚನೆ

7
ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್

ತಡೆಗೋಡೆ, ಚರಂಡಿ ನಿರ್ಮಿಸಲು ಸೂಚನೆ

Published:
Updated:
Deccan Herald

ಮಡಿಕೇರಿ: ಮುಂದಿನ ಮುಂಗಾರು ಮಳೆಯ ಅವಧಿಯಲ್ಲಿ ಮಣ್ಣು ಕುಸಿಯದಂತೆ ರಸ್ತೆಗೆ ತಡೆಗೋಡೆ ಹಾಗೂ ಚರಂಡಿ ನಿರ್ಮಾಣ ಕಾರ್ಯಗಳನ್ನು ಶೀಘ್ರ ಆರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾತನಾಡಿ, ಪ್ರಸಕ್ತ ವರ್ಷ ಸುರಿದ ಅರ್ಧದಷ್ಟು ಮಳೆಯಾದರೂ ಬರೆ ಕುಸಿಯುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

‘ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಚುರುಕಾಗಿ ಕೆಲಸ ನಡೆಯಿತು. ಆದರೆ, ಈಚೆಗೆ ಅಧಿಕಾರಿಗಳು ಆಮೆಗತಿಯಲ್ಲಿ ಕಾಮಗಾರಿಗಳನ್ನು ಆರಂಭಿಸುವ ಬಗ್ಗೆ  ದೂರುಗಳಿವೆ. ಇದಕ್ಕೆ ಆಸ್ಪದ ಕೊಡದಂತೆ ಎಚ್ಚರಿಕೆ ವಹಿಸಬೇಕಿದೆ’ ಎಂದು ತಾಕೀತು ಮಾಡಿದರು.  

‘ಸರ್ಕಾರ ತಮ್ಮ ಇಲಾಖೆಗಳಿಗೆ ಹಣ ಬಿಡುಗಡೆ ಮಾಡಿದೆ. ಕಾಮಗಾರಿ ಚುರುಕು ಪಡೆಯದಿದ್ದರೆ ಹೊಣೆ ಯಾರು? ಪಾರದರ್ಶಕವಾಗಿ ಮತ್ತು ನಿಯಮಾನುಸಾರ ಹಣ ಬಳಕೆ ಮಾಡಬೇಕು. ಯಾವುದೇ ರೀತಿಯ ಲೋಪ ಕಂಡು ಬರದಂತೆ ಎಚ್ಚರಿಕೆ ವಹಿಸಬೇಕಿದೆ’ ಎಂದು ಸೂಚಿಸಿದರು.

ಮುಂದಿನ ಐದು ತಿಂಗಳಲ್ಲಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಂಜಿನಿಯರ್‌ಗಳಿಗೆ ಅನ್ಬುಕುಮಾರ್ ಸೂಚಿಸಿದರು.

ರಸ್ತೆ, ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು ಯಾವುದೇ ಕಾಮಗಾರಿಗಳನ್ನು ವಿಳಂಬ ಮಾಡದೆ ಶೀಘ್ರದಲ್ಲಿ ಮಾಡಬೇಕು. ಸಣ್ಣ ಮತ್ತು ಬೃಹತ್ ನೀರಾವರಿ ಕಾಮಗಾರಿಗಳು, ನಗರಾಭಿವೃದ್ಧಿ ವ್ಯಾಪ್ತಿಯ ಕಾಮಗಾರಿಗಳ ಚಿತ್ರಣ ಸಹಿತ ಮಾಹಿತಿಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ) ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಬೇಕು ಎಂದು ಸೂಚಿಸಿದರು.

ಪ್ರಕೃತಿ ವಿಕೋಪದಿಂದ ಎಷ್ಟು ಮನೆಗಳು ಹಾನಿಯಾಗಿವೆ. ಪೂರ್ಣ ಮನೆ ಹಾನಿ, ಭಾಗಶಃ ಮನೆ ಹಾನಿಗಳು ಎಷ್ಟು, ಈಗಾಗಲೇ ಎಷ್ಟು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಬಾಕಿ ಎಷ್ಟು ಎಂಬ ನಿಖರ ಮಾಹಿತಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸಲಹೆ ಮಾಡಿದರು.  

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ  ಮಾತನಾಡಿ, ಬೆಳೆ ಹಾನಿ ಸಂಬಂಧಿಸಿದಂತೆ ಈಗಾಲೇ ಸರ್ವೇ ಕಾರ್ಯ ನಡೆದಿದ್ದು, ಬೆಳೆ ಹಾನಿ ಬಗ್ಗೆ ಬಿಟ್ಟು ಹೋಗಿದ್ದಲ್ಲಿ ಸರ್ವೇ ಮಾಡಿ ಅವರು ಸಲಹೆ ಮಾಡಿದರು.  

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮಿಪ್ರಿಯಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ಜಯ, ಲೋಕೋಪಯೋಗಿ ಇಲಾಖೆ ಎಇಇ ನಟೇಶ್, ಜಿಲ್ಲಾ ಪಂಚಾಯಿತಿ ಇಇ ರೇವಣ್ಣವರ್, ಸೆಸ್ಕ್ ಇಇ ಸೋಮಶೇಖರ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಗೋಪಾಲಕೃಷ್ಣ,  ಡಿಎಚ್‌ಒ ರಾಜೇಶ್, ಜಗದೀಶ್ ಹಾಜರಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !