ಭಾನುವಾರ, ಡಿಸೆಂಬರ್ 8, 2019
21 °C

ದೇಗುಲ ಪ್ರವೇಶಿಸಿದ ಮುಸ್ಲಿಮರು, ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಹಿಂದೂಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶನಿವಾರಸಂತೆ: ಪಟ್ಟಣದಲ್ಲಿ ಗುರುವಾರ ನಡೆದ ಬೀರಲಿಂಗೇಶ್ವರ, ಪ್ರಬಲಭೈರವಿ ಹಾಗೂ 9 ಪರಿಹಾರ ದೇವರ ಜೀರ್ಣೋದ್ಧಾರ ಮಹೋತ್ಸವವು ಹಿಂದೂ, ಮುಸ್ಲಿಮರ ಸಾಮರಸ್ಯಕ್ಕೆ ಸಾಕ್ಷಿಯಾಯಿತು.

ಹಿಂದೂ– ಮುಸ್ಲಿಂ ಧರ್ಮದ ಮುಖಂಡರು ಸಹಭಾಗಿಗಳಾಗಿ ವಂತಿಗೆ ಸಂಗ್ರಹಿಸಿ ಜೀರ್ಣೋದ್ಧಾರ ಮಹೋತ್ಸವ ನಡೆಸಿದರು. ದೇಗುಲಕ್ಕೆ ಬಂದ 13 ಮಂದಿ ಮುಸ್ಲಿಂ ಮುಖಂಡರು ತೀರ್ಥ ಪ್ರಸಾದ ಸ್ವೀಕರಿಸಿದರು. ಅದೇ ರೀತಿ ಹಿಂದೂಗಳು ಜಾಮೀಯ ಮಸೀದಿ ಪ್ರವೇಶಿಸಿದಾಗ ಪುಷ್ಪಾರ್ಚನೆ ಮಾಡಲಾಯಿತು. ಪನ್ನೀರು ಹಾಕಿ ಸ್ವಾಗತಿಸಿದರು. ಮುಸ್ಲಿಮರೊಂದಿಗೆ ಜೊತೆಗೂಡಿ ಪ್ರಾರ್ಥನೆಯಲ್ಲೂ ಭಾಗವಹಿಸಿದ್ದರು.

ಗಣಪತಿ ದೇವಾಲಯದ ಅರ್ಚಕರಾದ ಮಾಲತೇಶ್ ಭಟ್, ಶೇಷಾಚಲಭಟ್ ಅವರು ಪ್ರಸಾದ ಹಂಚಿದರೆ, ಮಸೀದಿ ಧರ್ಮಗುರುಗಳಾದ ತಾಸೀಕ್ ಝಾಕಿನ್, ಸಾಹುದ್ ಅಲ್ಲಾಮ್ ಮಂತ್ರ ಪಠಿಸಿದರು.

‘ಬೀರಲಿಂಗೇಶ್ವರ, ಪ್ರಬಲ ಭೈರವಿ ದೇವರಿಗೆ ಹಲವು ವರ್ಷಗಳಿಂದ ಪೂಜೆ ನಿಂತು ಹೋಗಿತ್ತು. ಗ್ರಾಮಸ್ಥರೆಲ್ಲಾ ಸೇರಿ ಸಮಿತಿ ರಚಿಸಿಕೊಂಡು ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಂಡಿದ್ದೆವು. ವಂತಿಗೆ ಸಂಗ್ರಹಿಸುವ ಕಾರ್ಯಕ್ಕೆ ನಾವೂ ಕೈಜೋಡಿಸಿದ್ದೆವು’ ಎಂದು ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್‌ ಗೌಸ್‌ ತಿಳಿಸಿದರು.  

ಮಂಗಳೂರಿನ ಕದ್ರಿಯ ಶ್ರೀರಂಗ ತಾಳ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಗಣಪತಿ, ಪಾರ್ವತಿ, ಚಂದ್ರಮೌಳೇಶ್ವರ ದೇವಾಲಯದಲ್ಲಿ ಮಹಾಸಂಕಲ್ಪ, ಪ್ರಾರ್ಥನೆ ಬಳಿಕ ಪೂಜೆಗೆ ಚಾಲನೆ ನೀಡಲಾಯಿತು.

ನಂತರ, ಜೀರ್ಣೋದ್ಧಾರ ಕಾರ್ಯ ನಡೆದಿರುವ ಬೀರಲಿಂಗೇಶ್ವರ, ಪ್ರತಿಷ್ಠಾಪಿಸಲ್ಪಟ್ಟ ಪ್ರಬಲ ಭೈರವಿ ಸನ್ನಿಧಿಯಲ್ಲಿ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಬೈಕ್ ಜಾಥಾದಲ್ಲೂ ಎರಡೂ ಧರ್ಮದ ಮುಖಂಡರು ಪಾಲ್ಗೊಂಡಿದ್ದರು.


ಬೀರಲಿಂಗೇಶ್ವರ ಪ್ರಬಲಭೈರವಿ ಹಾಗೂ ಶ್ರೀಪರಿಹಾರ ದೇವರ ಜೀರ್ಣೋದ್ಧಾರ ಮಹೋತ್ಸವ ಪ್ರಯುಕ್ತ ಜಾಮೀಯಾ ಮಸೀದಿಯಲ್ಲಿ ಪ್ರಾರ್ಥನೆ ಹಾಗೂ ಧಾರ್ಮಿಕ ಪಠಣ ನಡೆಯಿತು.    

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು