ಭೂಕುಸಿತ: ಮಾನವ ನಿರ್ಮಿತವಲ್ಲ

7
ಕೊಡಗು ಕೃಷಿ ವಿಜ್ಞಾನಿಗಳ ವೇದಿಕೆ ಅಧ್ಯಯನ ವರದಿಯಲ್ಲಿ ಉಲ್ಲೇಖ

ಭೂಕುಸಿತ: ಮಾನವ ನಿರ್ಮಿತವಲ್ಲ

Published:
Updated:
Deccan Herald

ಮಡಿಕೇರಿ: ಕೊಡಗಿನಲ್ಲಿ ಉಂಟಾಗಿದ್ದ ಭೂಕುಸಿತವು ಮಾನವ ನಿರ್ಮಿತ ಅಲ್ಲ. ಭೂಕಂಪನ, ಭಾರೀ ಮಳೆ ಹಾಗೂ ಹಾರಂಗಿ ಜಲಾಶಯದಲ್ಲಿ ಅತಿ ಹೆಚ್ಚು ಪ್ರಮಾಣದ ನೀರಿನ ಸಂಗ್ರಹದ್ದೇ ಭೂಕುಸಿತ ಉಂಟಾಗಲು ಪ್ರಮುಖ ಕಾರಣವೆಂದು ಕೊಡಗು ಕೃಷಿ ವಿಜ್ಞಾನಿಗಳ ವೇದಿಕೆಯು ತಮ್ಮ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದೆ.

ಕೊಡಗು ಕೃಷಿ ವಿಜ್ಞಾನಿಗಳ ವೇದಿಕೆ ಮತ್ತು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ವಿಜ್ಞಾನಿಗಳು ಈ ಅಧ್ಯಯನ ನಡೆಸಿದ್ದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಕೆ.ಆರ್‌.ಬಾಬು ರಾಘವನ್ ಮಾತನಾಡಿ, ‘‌ಕ್ಷೇತ್ರ ಅಧ್ಯಯನ, ಉಪಗ್ರಹ ಚಿತ್ರ ಆಧರಿಸಿ ಭೂಕುಸಿತಕ್ಕೆ ಕಾರಣವಾಗಿರುವ ಅಂಶಗಳನ್ನು ಪತ್ತೆ ಹಚ್ಚಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಕೃತಿ ವಿಕೋಪಕ್ಕೂ ಒಂದು ತಿಂಗಳು ಮೊದಲು ಕೊಡಗಿನಲ್ಲಿ ಭೂಕಂಪನ ಸಂಭವಿಸಿತ್ತು. ಅದೇ ದೊಡ್ಡ ಅನಾಹುತಕ್ಕೆ ಕಾರಣ. ಇನ್ನು ಇಲ್ಲಿನ ಭೂಪ್ರದೇಶ ಕಲ್ಲಿನ ರಚನೆಗಳಿಂದ ಬಿರುಕುಗಳು ಉಂಟಾಗಿದ್ದವು. ಇದರಿಂದ ಮಣ್ಣಿನ ಪದರ ಸಡಿಲಗೊಂಡು ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗಿತ್ತು. ಮಣ್ಣು ಶಿಥಿಲಗೊಂಡು ಸಣ್ಣ ಕಣಿವೆ ಪ್ರದೇಶವಾಗಿ ಮಾರ್ಪಟ್ಟು ಭೂಕುಸಿತವಾಗಿದೆ ಎಂದು ವಿಶ್ಲೇಷಿಸಿದರು. 

ಭೂವಿಜ್ಞಾನಿ ಡಾ.ರವಿಕುಮಾರ್ ಮಾತನಾಡಿ, ಜೂನ್‌ನಿಂದ ಸೆಪ್ಟೆಂಬರ್‌ ಅಂತ್ಯಕ್ಕೆ 3,463 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಇದು ಸಾಧಾರಣ ಮಳೆಗಿಂತ ಶೇ 59 ಹೆಚ್ಚು. ಆಗಸ್ಟ್‌ 13ರಿಂದ 19ರವರೆಗೆ ಜಿಲ್ಲೆಯಲ್ಲಿ 594 ಮಿ.ಮೀ. ಮಳೆಯಾಗಿದ್ದೇ ಭೂಕುಸಿತಕ್ಕೆ ಕಾರಣ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ಡಾ.ಸತೀಶ್, ಜಿ.ಎಂ. ದೇವಗಿರಿ, ಸದಸ್ಯೆ ಡಾ.ಶೋಭಾ ಹಾಜರಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !