ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಯಲ್ಲಿ ರೈತಸಂತೆ ಆರಂಭ, ತಪ್ಪಿದ ಮಧ್ಯವರ್ತಿಗಳ ಹಾವಳಿ,ರೈತರಿಂದ ಗ್ರಾಹಕರಿಗೆ

Last Updated 21 ಡಿಸೆಂಬರ್ 2018, 12:39 IST
ಅಕ್ಷರ ಗಾತ್ರ

ಮಡಿಕೇರಿ: ಭೂಕುಸಿತ ಹಾಗೂ ಪ್ರವಾಹದ ಬಳಿಕ ಸ್ಥಗಿತವಾಗಿದ್ದ ‘ರೈತ ಸಂತೆ’ ಶುಕ್ರವಾರದಿಂದ ಪುನರ್‌ ಆರಂಭಗೊಂಡಿತು.

ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೊ ಬಳಿಯ ಎಪಿಎಂಸಿ ಆವರಣದಲ್ಲಿ ಸಂತೆ ಆರಂಭವಾಗಿದ್ದು, ರೈತರು ಹಾಗೂ ಗ್ರಾಹಕರಲ್ಲಿ ಸಂತಸ ಕಂಡುಬಂತು.

ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜನವರಿಯಲ್ಲಿ ರೈತ ಸಂತೆಗೆ ಚಾಲನೆ ನೀಡಿತ್ತು. ನಾಲ್ಕೈದು ತಿಂಗಳು ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಜುಲೈ ಹಾಗೂ ಆಗಸ್ಟ್‌ನಲ್ಲಿ ಉಂಟಾಗಿದ್ದ ಪ್ರತಿಕೂಲ ಪರಿಸ್ಥಿತಿಯಿಂದ ಸಂತೆ ಸ್ಥಗಿತವಾಗಿತ್ತು.

ಶುಕ್ರವಾರ 12 ಮಳಿಗೆಗಳಲ್ಲಿ ವ್ಯಾಪಾರ ನಡೆಯಿತು. ಜಿಲ್ಲೆಯ ರೈತರು ತಮ್ಮ ತೋಟಗಳಲ್ಲಿ ಬೆಳೆದ ತರಕಾರಿಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ವ್ಯಾಪಾರ ನಡೆಸಿದರು. ಸೌತೆಕಾಯಿ, ನವಿಲುಕೋಸು, ಬಾಳೆಕಾಯಿ, ಬೀನ್ಸ್, ಟೊಮೆಟೊ, ಸೊಪ್ಪು, ನಾಟಿಕೋಳಿ, ಎಲೆಕೋಸು, ಮೂಲಂಗಿಯನ್ನು ರೈತರು ತಂದಿದ್ದರು. ಮಧ್ಯಾಹ್ನದ ವೇಳೆಗೆ ತರಕಾರಿಗಳು ಖಾಲಿಯಾದವು.

ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ದಲ್ಲಾಳಿಗಳು ಕಡಿಮೆ ಬೆಲೆಗೆ ವಂಚಿಸಿ ಖರೀದಿಸುತ್ತಿದ್ದರು. ಆದರೆ, ಇಲ್ಲಿ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಗ್ರಾಹಕರಿಗೂ ಕಡಿಮೆ ಬೆಲೆಗೆ ತರಕಾರಿ ಲಭ್ಯವಾಗಲಿದೆ ಎಂದು ಎಪಿಎಂಸಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ತಿಳಿಸಿದರು.

ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಬುಧವಾರ ಕೂಡ ಸಂತೆ ನಡೆಯಲಿದ್ದು, ವಾರದಲ್ಲಿ ಎರಡು ದಿನ ಸಂತೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮಡಿಕೇರಿ ತಾಲ್ಲೂಕಿನ ರೈತರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶವಿತ್ತು. ಆದರೆ, ಇದೀಗ ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬರುವ ರೈತರಿಗೂ ಅವಕಾಶ ನೀಡಲಾಗಿದೆ ಎಂದರು.

ಮಾಜಿ ಅಧ್ಯಕ್ಷ ಕಾಂಗೀರ ಸತೀಶ್ ಮಾತನಾಡಿ, ‘ರೈತ ಸಂತೆ ಪುನಃ ಆರಂಭವಾಗಿದ್ದು, ವ್ಯಾಪಾರಸ್ಥಲ್ಲಿ ಉತ್ಸಾಹ ಹೆಚ್ಚಾಗಿದೆ. ಜಾನುವಾರು, ಕೋಳಿ, ಹಂದಿ, ಕುರಿ, ಮೀನು ಮಾರಾಟಕ್ಕೂ ಅವಕಾಶವಿದೆ. ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರು ತಯಾರಿಸಿದ ಸಾಂಬಾರ್‌ ಪದಾರ್ಥಗಳನ್ನು ಮಾರಾಟ ಮಾಡಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಂದು ಖರೀದಿಸಿದರೆ ಸಂತೆ ಶಾಶ್ವತವಾಗಿ ಮುಂದುವರಿಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT