ಅನುಕಂಪ ಬಿಡಿ ನೆರವು ಕೊಡಿ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕರೆ

7
ಸಂತ್ರಸ್ತರ ಸಮಾಲೋಚನಾ ಸಭೆ

ಅನುಕಂಪ ಬಿಡಿ ನೆರವು ಕೊಡಿ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕರೆ

Published:
Updated:
Prajavani

ಮಡಿಕೇರಿ: ‘ಸಂತ್ರಸ್ತರ ಬಗ್ಗೆ ಅನುಕಂಪ ವ್ಯಕ್ತಪಡಿಸುವ ಬದಲಿಗೆ ನೆರವು ಕಲ್ಪಿಸಬೇಕು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕರೆ ನೀಡಿದರು.

ನಗರದ ಗಾಂಧಿ ಮೈದಾನದಲ್ಲಿ ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರವೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಇಂತಹ ಸಂಕಷ್ಟದ ವೇಳೆ ಸಂಘ–ಸಂಸ್ಥೆಗಳೂ ನೆರವಾಗಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತಾಯಿ ಇದ್ದಂತೆ. ಸದಸ್ಯರೆಲ್ಲರೂ ಮಕ್ಕಳು. ಈ ಯೋಜನೆಯ ಮೂಲಕ ಸದಸ್ಯರಲ್ಲಿ ಆತ್ಮವಿಶ್ವಾಸ, ಉಳಿತಾಯ ಮನೋಭಾವ, ಬಂಡವಾಳ ಹೂಡಿಕೆ, ಜೀವನ ಭದ್ರತೆಯ ಅರಿವು ಮೂಡಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ₹ 450 ಕೋಟಿಯನ್ನು ಐಡಿಬಿಐ ಬ್ಯಾಂಕ್‌ ಮೂಲಕ ವಿತರಿಸಿದ್ದೇವೆ. ನಾವು ಜವಾಬ್ದಾರಿ ಹೊತ್ತುಕೊಂಡಿದ್ದೇವೆ’ ಎಂದು ಹೇಳಿದರು.

‘ಸಂತಸದ ವೇಳೆ ಎಲ್ಲರೂ ಒಟ್ಟಿಗಿರುತ್ತಾರೆ. ಸಂಕಷ್ಟದ ವೇಳೆ ಯಾರೂ ಇರುವುದಿಲ್ಲ. ಆದರೆ, ಕೊಡಗಿನ ದುರಂತದ ವೇಳೆ ಪ್ರಪಂಚದ ಎಲ್ಲ ಕಡೆಯಿಂದಲೂ ಜನರು ಸ್ಪಂದಿಸಿದ್ದು ವಿಶೇಷ. ಜಪಾನ್‌ನ ಎರಡು ಮಹಾನಗರಗಳ ಮೇಲೆ ಬಾಂಬ್‌ ಹಾಕಲಾಗಿತ್ತು. ಲಕ್ಷಾಂತರ ಜನರು ಸಾವನ್ನಪ್ಪಿದ್ದರು. ಈಗ ಜಪಾನ್‌ ಅತ್ಯಂತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ. ಅದರಂತೆ ಕೊಡಗು ಸಹ ಮೇಲೆದ್ದು ಬರಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ‘ಜಿಲ್ಲೆಯ 34 ಗ್ರಾಮಗಳಲ್ಲಿ ಎಂದೂ ಕಾಣದ ಸಂಕಷ್ಟಕ್ಕೆ ಸಿಲುಕಿದ್ದವು. ಹಲವು ಗ್ರಾಮಗಳ ಜನರು ಸಂಕಲ್ಪ ಮಾಡಿದ್ದಾರೆ. ಅವರಿಗೆ ಹಲವು ಸಂಘ ಸಂಸ್ಥೆಗಳು ಆರ್ಥಿಕ ಬಲ ತುಂಬುತ್ತಿವೆ’ ಎಂದು ಹೇಳಿದರು.

ಆರಂಭದಲ್ಲಿ ರಾಜ್ಯ ಸರ್ಕಾರ ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿತ್ತು. ಆದರೆ, ಈಗ ಮನೆ ನಿರ್ಮಾಣ ಕಾರ್ಯ ನೋಡಿದರೆ   ವರ್ಷವಾದರೂ ಮನೆ ನಿರ್ಮಾಣ ಆಗುವುದಿಲ್ಲ ಎಂಬುದು ಅರಿವಿಗೆ ಬಂದು’ ಎಂದು ನೋವು ತೋಡಿಕೊಂಡರು.

ಭೂಕುಸಿತಕ್ಕೆ ವೈಜ್ಞಾನಿಕ ಕಾರಣ ಹುಡುಕಬೇಕು. ಅದನ್ನು ಬಿಟ್ಟು ರೆಸಾರ್ಟ್‌ನಿಂದ ಈ ದುರಂತ ಸಂಭವಿಸಿದೆ ಎಂಬುದು ಸಲ್ಲದು. ರೆಸಾರ್ಟ್ ಇರುವ ಪ್ರದೇಶದಲ್ಲಿ ಏನೂ ಆಗಿಲ್ಲ ಎಂದು ತಿಳಿಸಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಮಾತನಾಡಿ, ‘ಸಂತ್ರಸ್ತರು ಮನಸ್ಸು ಗಟ್ಟಿ ಮಾಡಿಕೊಂಡು ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಬಿ.ಎ. ಹರೀಶ್‌, ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಐಡಿಬಿಐ ಬ್ಯಾಂಕ್‌ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಎಸ್‌. ರಾಮಸ್ವಾಮಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !