ಸದ್ಯದಲ್ಲಿಯೇ ಕೊಡಗಿನಲ್ಲಿ ಮುಂಗಾರು ಮಳೆ: 'ಸೂಕ್ಷ್ಮ ಪ್ರದೇಶದಲ್ಲಿ ನಿಗಾ ವಹಿಸಿ'

ಭಾನುವಾರ, ಜೂನ್ 16, 2019
28 °C

ಸದ್ಯದಲ್ಲಿಯೇ ಕೊಡಗಿನಲ್ಲಿ ಮುಂಗಾರು ಮಳೆ: 'ಸೂಕ್ಷ್ಮ ಪ್ರದೇಶದಲ್ಲಿ ನಿಗಾ ವಹಿಸಿ'

Published:
Updated:
Prajavani

ಮಡಿಕೇರಿ: ಜೂನ್‌ ಮೊದಲ ವಾರ ಮುಂಗಾರು ಮಳೆ ಆರಂಭವಾಗಲಿದ್ದು ಈಗಾಗಲೇ ಗುರುತಿಸಿರುವ ಸೂಕ್ಷ್ಮ ಪ್ರದೇಶಗಳ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ನೋಡಲ್‌ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮುಂಗಾರು ಮಳೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.   

‘ಸೂಕ್ಷ್ಮ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳು ಹಾಗೂ ಪರಿಹಾರ ಬಗ್ಗೆ ಮಾಹಿತಿ ಪಡೆಯಬೇಕು. ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಮತ್ತಿತರ ಸಮಸ್ಯೆ ಇವೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ತಿಳಿಸಿದರು.

‘ಕಂಟ್ರೋಲ್ ರೂಂಗೆ ಒಂದೇ ಟೆಲಿಫೋನ್‌ ಸಂಖ್ಯೆಯಿದ್ದರೂ ಸಹ ನಾಲ್ಕೈದು ಟೆಲಿಪೋನ್ ಬಾಕ್ಸ್ ಇಟ್ಟಿರಬೇಕು. ಅಷ್ಟೇ ಸಿಬ್ಬಂದಿಗಳು ಮತ್ತು ಕಂಪ್ಯೂಟರ್ ಇರಬೇಕು. ದೂರವಾಣಿ ಕರೆಗಳು ಬಂದಾಗ ಸ್ವೀಕರಿಸಿ ಮಾಹಿತಿ ನೀಡಬೇಕು. ಯಾವ ಊರು, ಅವರ ಹೆಸರು ಪಡೆದುಕೊಳ್ಳಬೇಕು’ ಎಂದು ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಲೋಕೋಪಯೋಗಿ, ಪಂಚಾಯತ್ ರಾಜ್ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಬಾಕಿಯಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅನ್ಬುಕುಮಾರ್ ಸೂಚಿಸಿದರು.

ಕಳೆದ ಬಾರಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಾಕಷ್ಟು ನಷ್ಟ ಉಂಟಾಯಿತು. ಆದ್ದರಿಂದ ಈ ಬಾರಿ ಮುಂಗಾರು ಅವಧಿಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದಲ್ಲಿ ಉಂಟಾಗಬಹುದಾದ ಅನಾಹುತ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಜತೆಗೆ ಜನಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಇತರರಿಂದ ಸಲಹೆ, ಮಾಹಿತಿ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲಹೆ ಮಾಡಿದರು.  

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಸದ್ಯದಲ್ಲೇ ಜನಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು, ಹಾಗೂ ಇತರರ ಸಭೆ ಆಹ್ವಾನಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಹಲವು ಕಡೆಗಳಿಗೆ ಭೇಟಿ ನೀಡಲಾಗುತ್ತಿದೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ ಆಗಮಿಸಲಿದ್ದು ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಮೇ 28 ಹಾಗೂ 29ರಂದು ಭಾರತೀಯ ಸೇನೆ, ಪೊಲೀಸ್, ಅಗ್ನಿಶಾಮಕ ಇಲಾಖೆ ಇತರೆ ತಂಡದವರು ಭೂಕುಸಿತ ಪ್ರದೇಶವೆಂದು ಗುರ್ತಿಸಲಾಗಿರುವ ಹೆಬ್ಬೆಟಗೇರಿ ಹಾಗೂ ಪ್ರವಾಹ ಪೀಡಿತ ಪ್ರದೇಶವೆಂದು ಗುರ್ತಿಸಲಾಗಿರುವ  ಹಟ್ಟಿಹೊಳೆಯಲ್ಲಿ ‘ಅಣಕು ಪ್ರದರ್ಶನ’ ನಡೆಸಲಿದ್ದಾರೆ ಎಂದು ಹೇಳಿದರು. 

ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಸೂಕ್ಷ್ಮ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನೋಡಲ್ ಅಧಿಕಾರಿಗಳು ಅಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.

ಜಿ.ಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಷಂಶುದ್ದೀನ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಇಬ್ರಾಹಿಂ, ಜಿ.ಪಂ ಕುಡಿಯುವ ನೀರು ವಿಭಾಗದ ಎಂಜಿನಿಯರ್ ರೇವಣ್ಣವರ್, ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ಹೊಳ್ಳ ಹಾಜರಿದ್ದರು.  

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !