ಕಾಡುಹಂದಿ ಕಾಟಕ್ಕೆ ಬೇಸತ್ತ ರೈತರು

7

ಕಾಡುಹಂದಿ ಕಾಟಕ್ಕೆ ಬೇಸತ್ತ ರೈತರು

Published:
Updated:
Prajavani

ನಾಪೋಕ್ಲು: ಕಾಡುಹಂದಿಯ ಉಪಟಳ ತಾಳಲಾರದೆ ಇಲ್ಲಿನ ರೈತರು ಭತ್ತದ ಪೈರು ಹಣ್ಣಾಗುವ ಮೊದಲೇ ಕಟಾವು ಮಾಡಿದ್ದಾರೆ. ತಡವಾಗಿ ಬೇಸಾಯ ಆರಂಭಿಸಿದ ರೈತರು ಬೆಳೆ ಸಂಪೂರ್ಣವಾಗಿ ಹಣ್ಣಾಗಲಿ ಎಂದು ಕಾದು ಕೈಸುಟ್ಟುಕೊಂಡಿದ್ದಾರೆ.

ಪ್ರತಿದಿನ ರಾತ್ರಿ ಭತ್ತದ ಗದ್ದೆಗಳಿಗೆ ಧಾಳಿ ಇಡುತ್ತಿರುವ ಕಾಡುಹಂದಿಗಳು ರೈತರು ಬೆಳೆದ ಬೆಳೆಯನ್ನು ಹಾಳುಗೆಡವುತ್ತಿದ್ದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಕಾಡುಹಂದಿಗಳ ನಿಯಂತ್ರಣಕ್ಕೆ ನಾನಾ ಉಪಾಯಗಳನ್ನು ಕೈಗೊಳ್ಳುತ್ತಿದ್ದರೂ ಪರಿಹಾರ ಸಿಗದೇ ಪರಿತಪಿಸುತ್ತಿದ್ದಾರೆ.

ಇಲ್ಲಿಗೆ ಸಮೀಪದ ಬೇತು ಗ್ರಾಮದ ರೈತರ ಬವಣೆ ಇದು.ಇಲ್ಲಿನ ಬಹುತೇಕ ರೈತರು ಕಾಡುಹಂದಿಗಳ ಕಾಟಕ್ಕೆ ಬೇಸಾಯ ಕೈಬಿಟ್ಟಿದ್ದಾರೆ.ಮತ್ತೆ ಕೆಲವರು ಹಠಕ್ಕೆ ಬಿದ್ದು ಭತ್ತದ ಬೇಸಾಯ ಮಾಡಿ ಇಳುವರಿ ಕೈಗೆ ಸಿಗದೇ ನಷ್ಟ ಅನುಭವಿಸಿದ್ದಾರೆ.

ಮಳೆ,ಪ್ರವಾಹ ಮತ್ತಿತರ ಕಾರಣಗಳಿಂದ ತಡವಾಗಿ ಭತ್ತದ ನಾಟಿ ಮಾಡಿದ ಇಲ್ಲಿನ ರೈತ ಕೀಕಂಡ ಪೂಣಚ್ಚ ದಿನದಿಂದ ದಿನಕ್ಕೆ ನಷ್ಟ ಅನುಭವಿಸುತ್ತಿದ್ದಾರೆ.

ಸುತ್ತಮುತ್ತಲ ರೈತರ ಬೆಳೆ ಕಟಾವು ಆಗಿದ್ದು ಉಳಿದಿರುವ ಪೂಣಚ್ಚ ಅವರ ಗದ್ದೆಯಲ್ಲಿ ಕಾಡುಹಂದಿಗಳು ಬೆಳೆಯ ಧ್ವಂಸ ಕಾರ್ಯಕ್ಕೆ ಹೊರಟಿವೆ. ಕಾಡುಹಂದಿಗಳನ್ನು ಬೆದರಿಸಲು ಅವರು ಕೈಗೊಂಡ ಉಪಾಯಗಳೆಲ್ಲವೂ ಪ್ರಯೋಜನ ನೀಡಿಲ್ಲ. ಭತ್ತ ಕುಯ್ಲು ಮಾಡುವ ಸಮಯಕ್ಕೆ ಅಲ್ಪ ಇಳುವರಿ ದೊರೆತರೆ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಈಚಿನ ವರ್ಷಗಳಲ್ಲಿ ಹೋಬಳಿ ವ್ಯಾಪ್ತಿಯಲ್ಲಿ ಹಲವು ರೈತರು ಭತ್ತದ ಬೇಸಾಯಕ್ಕೆ ಮನಸ್ಸು ಮಾಡುತ್ತಿಲ್ಲ.ಕಾರ್ಮಿಕರ ಸಮಸ್ಯೆ,ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಮತ್ತಿತರ ಸಮಸ್ಯೆಗಳಿಂದ ಭತ್ತದ ಕೃಷಿಯಿಂದ ರೈತರು ದೂರ ಉಳಿದಿದ್ದಾರೆ. ಇದೀಗ ಕಾಡುಪ್ರಾಣಿಗಳ ಉಪಟಳದ ಕಾರಣದಿಂದ ಮತ್ತಷ್ಟು ರೈತರು ಭತ್ತದ ಬೇಸಾಯ ಕೈಗೊಳ್ಳುತ್ತಿಲ್ಲ. ಕೆಲವು ವರ್ಷಗಳಿಂದ ಬೇತು ಗ್ರಾಮ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಉಪಟಳ ಹೆಚ್ಚಾಗಿದ್ದು ಬೆಳೆ ಬರುವ ಸಮಯದಲ್ಲಿ ಫಸಲು ನಷ್ಟಗೊಳ್ಳುವ ಭೀತಿಯಿಂದ ಗದ್ದೆಗಳ ಉಳುಮೆ ಮಾಡುತ್ತಿಲ್ಲ. ಸೆಗಣಿ ಗೊಬ್ಬರವನ್ನು ತೋಟಗಳಿಗೆ ಹಾಕಲೂ ರೈತರು ಭಯ ಪಡುತ್ತಿದ್ದಾರೆ.

ರಾತ್ರಿವೇಳೆಯಲ್ಲಿ ಕಾಡುಹಂದಿಗಳು ಗದ್ದೆಬಯಲು,ತೋಟಗಳಿಗೆ ಧಾಳಿ ಇಡುತ್ತಿದ್ದು ಗಿಡಗಳನ್ನು ನಾಶಪಡಿಸುತ್ತಿವೆ.ಕಾಳು ಮೆಣಸಿನ ಬಳ್ಳಿಗಳನ್ನು ಅಗೆದುಹಾಕುತ್ತಿವೆ ಎಂಬುದಾಗಿ ಬೇತು ಗ್ರಾಮದ ರೈತರು ಅಳಲು ತೋಡಿಕೊಳ್ಳುತ್ತಾರೆ. ಹಿಂದೆ ಕುಟುಂಬಸ್ಥರೆಲ್ಲ ಒಟ್ಟಾಗಿ ಭತ್ತದ ಬೇಸಾಯ ಮಾಡುತ್ತಿದ್ದರು. ಇತ್ತೀಚೆಗೆ ಕಾಡುಹಂದಿಗಳ ಉಪಟಳದಿಂದ ಫಸಲೇ ಕೈಗೆಟುಕುತ್ತಿಲ್ಲ. ಶ್ರಮಕ್ಕೆ ಪ್ರತಿಫಲ ದೂರದ ಮಾತಾಯಿತು.ಹೀಗಾಗಿ ಭತ್ತದ ಬೇಸಾಯವನ್ನು ಕೈಬಿಡಬೇಕಾಗಿ ಬಂತು' ಎನ್ನುತ್ತಾರೆ ಗ್ರಾಮದ ರೈತ ಪೊನ್ನಣ್ಣ.

ಮನೆ ಖರ್ಚಿಗೆ ಅಗತ್ಯವಿರುವಷ್ಟು ಮಾತ್ರ ಬಿತ್ತನೆ ಮಾಡಿ ನಾಟಿ ಮಾಡಿದ್ದೆ. ಇಳುವರಿ ಕೈಗೆ ಸಿಗುವ ವೇಳೆಗೆ ಕಾಡುಹಂದಿ ಬಿಡದೇ ಕಾಡುತ್ತಿದೆ. ಅನವಶ್ಯಕ ನಷ್ಟ ಭರಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಪೂಣಚ್ಚ. ಒಟ್ಟಿನಲ್ಲಿ ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವವರ ಸಂಖ್ಯೆ ಇಳಿಮುಖಗೊಳ್ಳುತ್ತಿದೆ.ಭತ್ತದ ಗದ್ದೆಗಳು ಬೇಸಾಯ ಇಲ್ಲದೇ ಬೀಳುಬಿಟ್ಟಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !