ತಿತಿಮತಿ ಶಾಲೆಗೆ ಶತಮಾನೋತ್ಸವದ ಸಂಭ್ರಮ

7

ತಿತಿಮತಿ ಶಾಲೆಗೆ ಶತಮಾನೋತ್ಸವದ ಸಂಭ್ರಮ

Published:
Updated:
Prajavani

ಗೋಣಿಕೊಪ್ಪಲು: ವಿದ್ಯಾರ್ಥಿಗಳ ಕೊರತೆಯಿಂದ ಒಂದು ಕಡೆ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುವ ಭೀತಿ ಎದುರಿಸುತ್ತಿದ್ದರೆ ಮತ್ತೊಂದು ಕಡೆ ಕೆಲವು ಶಾಲೆಗಳು ಶತಮಾನದ ಸಂಭ್ರಮದಲ್ಲಿವೆ.

ವಿರಾಜಪೇಟೆ ತಾಲ್ಲೂಕಿನ ತಿತಿಮತಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಫೆ. 23 ಮತ್ತು 24ರಂದು ಶತಮಾಮಾನೋತ್ಸವ ಆಚರಿಸಿಕೊಳ್ಳುತ್ತಿದೆ.

23ರಂದು ಸ್ಥಳೀಯ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ. 24ರಂದು ಹಿಂದೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ 45 ಶಿಕ್ಷಕರಿಗೆ ಸನ್ಮಾನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮಗಳೂ ನಡೆಯಲಿವೆ.

ಸ್ಮರಣ ಸಂಚಿಕೆ: ಶತಮಾನೋತ್ಸವದ ನೆನಪಿಗಾಗಿ ಸ್ಮರಣ ಸಂಚಿಕೆ ಹೊರ ತರಲಾಗುತ್ತಿದೆ. ಈ ಸಂಬಂಧ ಲೇಖಕರಿಂದ ಲೇಖನ, ಕವನಗಳನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ದಾನಿಗಳಿಂದ ಧನ ಸಹಾಯ ಪಡೆಯಲು ತಿತಿಮತಿ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್‌: 99008 18806, 94483 08018 ಸಂಪರ್ಕಿಸಬಹುದು.

ಶಾಲೆ ಬೆಳೆದು ಬಂದ ದಾರಿ: 1916ರಲ್ಲಿ ಕೊಡಗು ಜಿಲ್ಲಾ ಬೋರ್ಡ್ ವತಿಯಿಂದ ಶಾಲೆಯನ್ನು ಆರಂಭಿಸಲಾಯಿತು. ಹುಲ್ಲಿನ ಗುಡಿಸಿನಲ್ಲಿ ಆರಂಭಗೊಂಡ ಶಾಲೆಗೆ 1920ರಲ್ಲಿ ದಾನಿ ಮರಾಠಿ ಮಂಜಮ್ಮ 3.16 ಎಕರೆ ಜಾಗ ದಾನ ಮಾಡಿ 3 ಕೊಠಡಿಗಳನ್ನೂ ಕಟ್ಟಿಸಿಕೊಟ್ಟರು.

ಮಾಯಮುಡಿಯ ಜಪ್ಪದಕಟ್ಟೆ ಮಠದ ಸಮಿತಿ 1 ಎಕರೆ ಗದ್ದೆಯನ್ನು ಶಾಲೆಗೆ ಉದಾರವಾಗಿ ನೀಡಿತು. ಇದೀಗ ಶಾಲೆ 2 ಎಕರೆ ಮೈದಾನ ಹೊಂದಿದ್ದು ಒಟ್ಟು 6.18 ಎಕರೆ ಜಾಗ ಶಾಲೆಯ ಹೆಸರಿನಲ್ಲಿದೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ 1952ರಲ್ಲಿ ಮನೆಯಪಂಡ ಗಣಪತಿ ತಮ್ಮ ಹೆತ್ತವರ ಜ್ಞಾಪಕಾರ್ಥವಾಗಿ ದೊಡ್ಡಮಟ್ಟದ ಕಟ್ಟಡ ನಿರ್ಮಿಸಿಕೊಟ್ಟರು. 1991ರಲ್ಲಿ ಚೆಪ್ಪುಡೀರ ಪೊನ್ನಮ್ಮ ತಮ್ಮ ಪೋಷಕರ ಹೆಸರಿನಲ್ಲಿ ಸಭಾಂಗಣ ನಿರ್ಮಿಸಿಕೊಟ್ಟು ವಿದ್ಯಾರ್ಥಿಗಳ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಪ್ರೋತ್ಸಾಹ ನೀಡಿದರು.

ಶಾಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ದೃಷ್ಟಿಯಲ್ಲಿ ಗುಂಬೀರ ಸುಬ್ಮಯ್ಯ, ಚೆಪ್ಪುಡೀರ ಕುಶಾಲಪ್ಪ ಮುಖ್ಯದ್ವಾರವನ್ನು, ಎಚ್.ಟಿ. ಸುಂದರ ಕಮಾನು ಗೇಟ್ ನಿರ್ಮಾಣ, ಪಾಲೆಂಗಡ ದೇಚಮ್ಮ ಹಾಗೂ ಅಂದಿನ ಸಂಸದ ಧನಜಂಯ ಕುಮಾರ್ ತಡೆಗೋಡೆಯನ್ನು ನಿರ್ಮಿಸಿಕೊಟ್ಟರು. ಇದೀಗ ತಿತಿಮತಿ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ನೀಡಿದ ₹ 5 ಲಕ್ಷ ಅನುದಾನದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ.  

ಶತಮಾನೋತ್ಸವ ಸಮತಿ: ಮಾಜಿ ಸಚಿವೆ ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿದ್ದಾರೆ. ಹಳೆಯ ವಿದ್ಯಾರ್ಥಿಗಳು,ಸ್ಥಳೀಯ ಸಾರ್ವಜನಿಕರು, ಶಿಕ್ಷಕ ವರ್ಗ ಸಮಿತಿಯಲ್ಲಿದ್ದಾರೆ. ಕಾರ್ಯಾಧ್ಯಕ್ಷರಾಗಿ ಚೆಪ್ಪುಡೀರ ರಾಮಕೃಷ್ಣ, ಉಪಾಧ್ಯಕ್ಷರಾಗಿ ಶಿವಕುಮಾರ್, ಖಜಾಂಜಿಯಾಗಿ ಫಿಲೋಮಿನಾ, ಸದಸ್ಯರಾಗಿ ಮನು ನಂಜಪ್ಪ, ಮಹೇಶ್, ಕೃಷ್ಣ, ಮಂಜುಳ ಗಣೇಶ್, ಅನೂಪ್, ಮುಖ್ಯಶಿಕ್ಷಕಿ ಎಚ್.ಎಂ.ಪಾರ್ವತಿ ಹಾಗೂ ಶಿಕ್ಷಕ ವರ್ಗದವರಿದ್ದಾರೆ.

ಶಾಲೆಯಲ್ಲಿ ಇದೀಗ 250 ವಿದ್ಯಾರ್ಥಿಗಳಿದ್ದಾರೆ. ಶತಮಾನೋತ್ಸವದ ನೆನಪಿನ ಭವನ ನಿರ್ಮಾಣ ಮಾಡಲಾಗುವುದು. ಉತ್ಸವಕ್ಕೆ ₹ 3ಲಕ್ಷ ವೆಚ್ಚವಾಗುತ್ತಿದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ ಹೇಳಿದರು.

ಸರ್ಕಾರಿ ಶಾಲೆಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿರುವ  ಇಂದಿನ ದಿನಮಾನದಲ್ಲಿ ಸಾಕಷ್ಟು ವಿದ್ಯಾರ್ಥಿಗಳನ್ನು ಹೊಂದಿದ ಶಾಲೆಯೊಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !