ಭಗ್ನಪ್ರೇಮಿಯಿಂದ ಮಾರಣಾಂತಿಕ ಹಲ್ಲೆ

7
ಪೊಲೀಸ್‌ ತನಿಖೆಯಿಂದ ಕೃತ್ಯ ಬೆಳಕಿಗೆ: ಮಕ್ಕಳಗುಡಿ ಬೆಟ್ಟದಲ್ಲಿ ನಡೆದಿದ್ದ ಪ್ರಕರಣ

ಭಗ್ನಪ್ರೇಮಿಯಿಂದ ಮಾರಣಾಂತಿಕ ಹಲ್ಲೆ

Published:
Updated:
Prajavani

ಸೋಮವಾರಪೇಟೆ: ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳಗುಡಿ ಪ್ರವಾಸಿ ತಾಣ ವೀಕ್ಷಣೆಗೆ ಮಂಗಳವಾರ ಆಗಮಿಸಿದ್ದ ಮೈಸೂರಿನ ಯುವಕನ ಮೇಲೆ ನಡೆದಿದ್ದ ಹಲ್ಲೆ ಪ್ರಕರಣವು ತಿರುವು ಪಡೆದಿದುಕೊಂಡಿದೆ. ಅಪ್ರಾಪ್ತ ಭಗ್ನಪ್ರೇಮಿಯೇ ಹಲ್ಲೆ ನಡೆಸಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆಯ ರಾಯಪುರ ನಿವಾಸಿಯೂ ಆಗಿರುವ ಮೈಸೂರಿನ ಎಸ್‌ಬಿಐ ಶಾಖೆ ಫೀಲ್ಡ್ ಆಫೀಸರ್‌ ಆಗಿರುವ ರಾಕೇಶ್‌ಗೌಡ (26) ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಹಲ್ಲೆ ನಡೆಸಿದ ಆರೋಪಿಗೆ 17 ವರ್ಷ.

ಹಲ್ಲೆಗೆ ಕಾರಣ?: 2016ರಲ್ಲಿ ಸೋಮವಾರಪೇಟೆ ಕಾಲೇಜ್‌ನಲ್ಲಿ ಪಿಯುಸಿ ಓದುವಾಗ, ತನ್ನದೇ ತರಗತಿಯ ಹುಡುಗಿಯ ಮೇಲೆ ಹುಟ್ಟಿದ ಪ್ರೀತಿಯನ್ನು ವಿದ್ಯಾರ್ಥಿನಿ ತಿರಸ್ಕರಿಸಿದ್ದಳು. ಆಕೆ ಪ್ರಾಂಶುಪಾಲರಿಗೂ ದೂರು ನೀಡಿದ್ದಳು.

ನಂತರ ಪೋಷಕರನ್ನು ಕರೆಸಿ ತಿಳಿ ಹೇಳಲಾಗಿತ್ತು. ನಂತರವೂ ಭಗ್ನಪ್ರೇಮಿಯ ಕಾಟ ಮುಂದುವರಿದಾಗ, ಮೈಸೂರಿನಲ್ಲಿರುವ ರಾಕೇಶ್‌ನಿಗೆ ಹೇಳಿ ನಿನಗೆ ಬುದ್ಧಿ ಕಲಿಸುತ್ತೇನೆ ಎಂದು ಎಚ್ಚರಿಸಿದ್ದಳು ಎಂದು ಪೊಲೀಸ್‌ ವಿಚಾರಣೆಯ ವೇಳೆ ಗೊತ್ತಾಗಿದೆ.

‘ತಾನು ಪ್ರೀತಿಸಿದ ಹುಡುಗಿಯ ಮೇಲೆ ರಾಕೇಶ್ ಕಣ್ಣು ಹಾಕಿದ್ದಾನೆ’ ಎಂದು ಕೋಪಗೊಂಡು, ಸಮಯಕ್ಕಾಗಿ ಆರೋಪಿ ಕಾದು ಕುಳಿತಿದ್ದಾನೆ. ಆಕಸ್ಮಿಕ ಎಂಬಂತೆ ಮಕ್ಕಳಗುಡಿಯ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಆರೋಪಿಯಿರುವ ಸಂದರ್ಭದಲ್ಲೇ ಬೈಕ್‌ನಲ್ಲಿ ರಾಕೇಶ್ ಆಗಮಿಸಿದ್ದಾನೆ. ಮಕ್ಕಳಗುಡಿ ಬೆಟ್ಟದ ದಾರಿ ಕೇಳಿದ್ದಾನೆ. ಇದೆಲ್ಲವೂ ಹೊಟೇಲ್‌ನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಕೇಶ್‌ನನ್ನು ಹಿಂಬಾಲಿಸಿದ ಆರೋಪಿ, ವ್ಯೂಪಾಯಿಂಟ್‌ಗೆ ಹೋಗುತ್ತಿದ್ದಂತೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಶಿವಣ್ಣ ಬಾಬು ಎಂಬುವರು ಬೆಟ್ಟದಲ್ಲಿದ್ದ ವಾಟರ್‌ ಟ್ಯಾಂಕ್ ಹತ್ತಿರ ಬರುವಾಗ ಭಯಗೊಂಡ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಗಾಯಗೊಂಡ ರಾಕೇಶ್‌ನನ್ನು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿತ್ತು. 

ಹೋಟೆಲ್‌ ಸಿ.ಸಿ.ಟಿ.ವಿ ದೃಶ್ಯಾವಳಿ ಹಾಗೂ ಸ್ಥಳೀಯರ ಮಾಹಿತಿ ಪಡೆದು ಬಾಲ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ನಂತರ ಮಡಿಕೇರಿಯ ಬಾಲನ್ಯಾಯ ಮಂಡಳಿಗೆ ಹಾಜರು ಪಡಿಸಲಾಗಿದೆ. 

ಡಿವೈಎಸ್‌ಪಿ ಮುರಳೀಧರ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ನಂಜುಂಡೇಗೌಡ, ಪಿಎಸ್‌ಐ ಶಿವಶಂಕರ್, ಸಿಬ್ಬಂದಿಗಳಾದ ಪ್ರವೀಣ್, ಜಗದೀಶ್, ಮಹಾದೇವ್, ಶಿವಕುಮಾರ್, ಕುಮಾರ್, ಮಂಜುನಾಥ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !