ಈ ಊರಲ್ಲಿ ಅಮ್ಮ, ಮಗನ ಜಾತ್ರೆ

7
ಬಾಣಂತಮ್ಮ, ಕುಮಾರಲಿಂಗೇಶ್ವರ ಜಾತ್ರೆ ಸಂಭ್ರಮ

ಈ ಊರಲ್ಲಿ ಅಮ್ಮ, ಮಗನ ಜಾತ್ರೆ

Published:
Updated:
Prajavani

ಶನಿವಾರಸಂತೆ: ನಾಲ್ಕುನೂರು ವರ್ಷಗಳ ಇತಿಹಾಸವಿರುವ ಶನಿವಾರಸಂತೆ ಸಮೀಪದ ಬೆಂಬಳೂರಿನ ‘ಬಾಣಂತಮ್ಮ ಮತ್ತು ಕುಮಾರಲಿಂಗೇಶ್ವರ ಜಾತ್ರೆ’ ಸಂಪ್ರದಾಯದಂತೆ ಪ್ರತಿವರ್ಷ ಮಕರ ಸಂಕ್ರಾತಿ ಮರು ದಿವಸ ನಡೆಯುತ್ತದೆ. ಈ ಜಾತ್ರೆ ರಾಜ್ಯದಲ್ಲಿಯೇ ವಿಶಿಷ್ಟವಾದುದು.

ಕುಮಾರಲಿಂಗೇಶ್ವರ, ಬಾಣಂತಮ್ಮನ ಏಳು ಮಕ್ಕಳಲ್ಲಿ ಒಬ್ಬ. ಬಾಣಂತಮ್ಮನ ಜಾತ್ರೆಯ ಅರ್ಧ ಭಾಗವನ್ನು ಮಗನಿಗೂ ಬಿಟ್ಟುಕೊಡಲಾಗಿದೆ. ಹೀಗಾಗಿ, ಬೆಳಿಗ್ಗೆ ಬಾಣಂತಮ್ಮನ ಉತ್ಸವ ನಡೆದರೆ ಮಧ್ಯಾಹ್ನದ ನಂತರ ಕುಮಾರಲಿಂಗನ ಮೆರವಣಿಗೆ ನಡೆಯುತ್ತದೆ.

ಕುಮಾರಲಿಂಗ ಅಂಗವಿಕಲನಾಗಿದ್ದರಿಂದ ಆತನ ಮೂರ್ತಿ ಮೆರವಣಿಗೆಯನ್ನೂ ಕುಂಟುತ್ತಲೇ ಮಾಡುವುದು ಇಲ್ಲಿನ ವಿಶೇಷ. ಈ ರೀತಿ ಕುಂಟುತ್ತಲೇ ಮೆರವಣಿಗೆ ನಡೆಯುವುದು ರಾಜ್ಯದ ಬೇರೆ ಯಾವ ಉತ್ಸವಗಳಲ್ಲೂ ಕಾಣಸಿಗುವುದಿಲ್ಲ. ಜಾತ್ರೆಗೆ ಶನಿವಾರಸಂತೆ, ಕೊಡ್ಲಿಪೇಟೆ, ಯಸಳೂರಿನಿಂದಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ.

ಬಾಣಂತಮ್ಮನ ಇತಿಹಾಸ: ಬೆಂಬಳೂರಿನ ಬಾಣಂತಮ್ಮ ದೇವಿಗೆ ಏಳು ಗಂಡು ಮಕ್ಕಳು. ಈಕೆಯ ಪತಿ ಗೋಪಾಲಕೃಷ್ಣ ದೇವರನ್ನು ಶನಿವಾರಸಂತೆ ಸಮೀಪದ ಕೆರೆಹಳ್ಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಏಳು ಮಕ್ಕಳಲ್ಲಿ ಹಿರಿಯವನಾದ ದೊಡ್ಡಯ್ಯನನ್ನು ಕೊಂಗಳ್ಳೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಪ್ರತಿವರ್ಷ ಅಲ್ಲಿ ಸಂಕ್ರಾಂತಿ ಹಬ್ಬದ ನಂತರ ದೊಡ್ಡಯ್ಯನ ಜಾತ್ರೆ ನಡೆಯುತ್ತದೆ. 2ನೇ ಮಗನನ್ನು ಶಾಂತಳ್ಳಿ, 3ನೇ ಮಗನನ್ನು ಹುಲುಕೋಡು, 4ನೇ ಮಗ ದೊಡ್ಡಕುಂದೂರು, 5ನೇ ಮಗನನ್ನು ಹೆತ್ತೂರು, 6ನೇ ಮಗನನ್ನು ಕಿತ್ತೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದೆ. ಎಲ್ಲೆಡೆ ಕುಮಾರಲಿಂಗೇಶ್ವರ ಹೆಸರಿನಲ್ಲಿ ಜಾತ್ರೆ ನಡೆಯುತ್ತದೆ.

ಬಾಣಂತಮ್ಮನ ಕೊನೇ ಮಗ ಅಂಗವಿಕಲ ಕುಮಾರಲಿಂಗೇಶ್ವರ. ಈತ ತನ್ನನ್ನು ತೊರೆದು ಬೇರೆಡೆಗೆ ಹೋಗುತ್ತಾನೆ ಎಂದು ಭಾವಿಸಿ ತಾಯಿ ಬಾಣಂತಮ್ಮನೇ ಕಳ್ಳಿದೊಣ್ಣೆಯಿಂದ ಮಗನ ಕಾಲಿಗೆ ಹೊಡೆದು ಒಂದು ಕಾಲನ್ನು ಮುರಿದು ಕೂರಿಸಿದಳಂತೆ. ಆತನ ಕೋರಿಕೆಯಂತೆ ಒಪ್ಪೊತ್ತಿನ ಜಾತ್ರೆಯನ್ನು ಬಿಟ್ಟುಕೊಡುವುದಾಗಿ ಮಾತು ಕೊಟ್ಟಳು ಎಂಬುದು ಇಲ್ಲಿನ ಪ್ರತೀತಿ. ಕುಮಾರೇಶ್ವರ ಅಂಗವಿಕಲನಾದ್ದರಿಂದ ಮೂರ್ತಿಯನ್ನು ಪಲ್ಲಕಿಯಲ್ಲಿ ಹೊತ್ತು ಕುಂಟುತ್ತಲೇ ತರಲಾಗುತ್ತದೆ. ಇದು ಇತಿಹಾಸದಲ್ಲೂ ದಾಖಲಾಗಿದೆ.  

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !