ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಂಗಿ ಜಲಾಶಯ ಈಗ ಭಣಭಣ

ನೀರಿನ ಪ್ರಮಾಣದಲ್ಲಿ ಗಣನೀಯ ಕುಸಿತ
Last Updated 19 ಜನವರಿ 2019, 14:18 IST
ಅಕ್ಷರ ಗಾತ್ರ

ಕುಶಾಲನಗರ: ಉತ್ತರ ಕೊಡಗಿನ ‘ರೈತರ ಜೀವನಾಡಿ’ ಹಾರಂಗಿ ಜಲಾಶಯದಲ್ಲಿ ಈ ಬಾರಿ ಚಳಿಗಾಲ ಮುಗಿಯುವ ಮುನ್ನವೇ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಕಳೆದ ವರ್ಷದ ಮಹಾಮಳೆಗೆ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಿದ್ದರಿಂದ ಕುಶಾಲನಗರದ ಭಾಗಶಃ ಪಟ್ಟಣ, ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿಯಂಡೆಯ ಮೇಲಿದ್ದ ಬಹುತೇಕ ಮನೆಗಳು ಮುಳುಗಡೆ ಆಗಿದ್ದವು.

ನೆರೆ ಪ್ರವಾಹವನ್ನು ಸೃಷ್ಟಿ ಮಾಡಿದ್ದ ಹಾರಂಗಿ ಜಲಾಶಯ ಈಗ ನೀರಿಲ್ಲದೇ ಭಣಗುಡುತ್ತಿದೆ. ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ಹರಿದು ಬಂದ ನೀರನ್ನು ನದಿ ಮೂಲಕ ಕೆಆರ್‌ಎಸ್‌ ಜಲಾಶಯಕ್ಕೆ ಬಿಡಲಾಗಿದೆ. ಈ ಬಾರಿ ಜಲಾಶಯದಿಂದ ನದಿಗೆ 76.62 ಟಿಎಂಸಿ ಅಡಿ ಹಾಗೂ ಕಾಲುವೆಗೆ 60.32 ಟಿಎಂಸಿ ಅಡಿ ಪ್ರಮಾಣದ ನೀರನ್ನು ಹರಿಸಲಾಗಿದೆ ಎಂದು ಇಲಾಖೆಯ ಅಂಕಿ–ಅಂಶಗಳಿಂದ ತಿಳಿದು ಬಂದಿದೆ.

ಐದು ತಿಂಗಳ ಹಿಂದೆ ಜಲಮಯವಾಗಿದ್ದ ಪ್ರದೇಶಗಳಲ್ಲಿ ಈಗ ಕುಡಿಯುವ ನೀರಿಗೆ ಹಾಹಾಕಾರ ಪಡಬೇಕಾದ ಸ್ಥಿತಿ ಎದುರಾಗಿದೆ. ಬೇಸಿಗೆ ಆರಂಭದ ದಿನಗಳಲ್ಲಿ ಖಾಲಿಯಾಗುತ್ತಿದ್ದ ಜಲಾಶಯದಲ್ಲಿ ಈ ಬಾರಿ ಚಳಿಗಾಲ ಮುಗಿಯುವ ಮುನ್ನವೇ ಗಣನೀಯ ಪ್ರಮಾಣದಲ್ಲಿ ನೀರಿನ ಪ್ರಮಾಣ ಕುಸಿತವಾಗಿದೆ.

8.5 ಟಿಎಂಸಿ ಅಡಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಕೇವಲ 2 ಟಿಎಂಸಿ ಅಡಿ ನೀರು ಸಂಗ್ರಹವಿದೆ. ರೈತಾಪಿ ವರ್ಗ ಕೈಗೊಂಡಿದ್ದ ಕೃಷಿ ಮಹಾಮಳೆಯಿಂದ ನೆಲಕಚ್ಚಿ ಹೋಯಿತು. ಇದರಿಂದ ರೈತರು ತೀವ್ರ ಆರ್ಥಿಕ ತೊಂದರೆಗೆ ಸಿಲುಕಿದ್ದರು. ಅತಿವೃಷ್ಟಿಯಿಂದ ತೊಂದರೆಗೆ ಒಳಗಾದ ರೈತರ ಜಮೀನಿಗೆ ಬೇಸಿಗೆ ಹಂಗಾಮಿಗೆ ನೀರು ಪೂರೈಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ರೈತರಲ್ಲಿ ಆತಂಕ ಉಂಟು ಮಾಡಿದೆ.

ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಬಹುತೇಕ ಕೆರೆಕಟ್ಟೆಗಳಿಗೆ ಈ ಬಾರಿ ಜಲಾಶಯದಿಂದ ನೀರು ಪೂರೈಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೆರೆಕಟ್ಟೆಗಳಲ್ಲಿ ಈಗ ಇರುವ ಅಲ್ಪಪ್ರಮಾಣದ ನೀರು ಬೇಸಿಗೆ ಅವಧಿಗೆ ಪೂರ್ಣವಾಗಿ ಬತ್ತಿ ಹೋಗುವ ಸಾಧ್ಯತೆ ಇದೆ. ಜಾನುವಾರುಗಳಿಗೂ ಕುಡಿಯುವ ನೀರಿನ ತೊಂದರೆ ಉಂಟಾಗಲಿದೆ. ಹಾರಂಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕ್ಷೀಣಗೊಂಡಿರುವ ಕಾರಣ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೇಸಿಗೆ ಬೆಳೆಗೆ ನೀರು ಹರಿಸುವುದಾಗಲಿ ಅಥವಾ ಕೆರೆ–ಕಟ್ಟೆಗಳಿಗೆ ನೀರು ಬಿಡಲು ಸಾಧ್ಯವಾಗುವುದಿಲ್ಲ ಎಂದು ಎಂಜಿನಿಯರ್ ತಿಳಿಸಿದ್ದಾರೆ.

2,859 ಗರಿಷ್ಠ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2,809.05 ಅಡಿಗಳಷ್ಟು ನೀರು ಇದೆ. ಜಲಾಶಯಕ್ಕೆ 85 ಕ್ಯುಸೆಕ್‌ ಒಳಹರಿವು ಇದ್ದು, ನದಿ ಮತ್ತು ಕಾಲುವೆಗೆ ತಲಾ 10 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಗೆ 2,819 ಅಡಿಗಳಷ್ಟು ನೀರಿನ ಸಂಗ್ರಹ ಇದ್ದು, 2.63 ಟಿಎಂಸಿ ಅಡಿ ನೀರು ಲಭ್ಯವಿತ್ತು. 115 ಕ್ಯುಸೆಕ್‌ ಒಳಹರಿವು ಹಾಗೂ 70 ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿತ್ತು.

ಜಲಾಶಯದ ಡೆಡ್‌ ಸ್ಟೋರೇಜ್ 0.75 ಟಿಎಂಸಿ ಅಡಿ ನೀರು ಹೊರತು ಪಡಿಸಿ ಉಳಿದ ನೀರನ್ನು ಮುಂದಿನ ಬೇಸಿಗೆ ಅವಧಿಯಲ್ಲಿ ಕುಡಿಯುವ ಸಮಸ್ಯೆ ಉಂಟಾಗದಂತೆ ಅಣೆಕಟ್ಟೆಯಲ್ಲಿ ಕಾಯ್ದಿರಿಸಲು ನೀರಾವರಿ ಇಲಾಖೆ ಕ್ರಮ ಕೈಗೊಂಡಿದೆ.

ಹಾರಂಗಿ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಶೂನ್ಯವಾಗಿದೆ. ಹಾರಂಗಿ ಅಣೆಕಟ್ಟೆಯಿಂದ ಕೊಡಗು ಜಿಲ್ಲೆಯ ಅಚ್ಚುಕಟ್ಟು ಪ್ರದೇಶ ಸೇರಿದಂತೆ ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳ ಗಡಿಭಾಗದ ತನಕ ನೀರು ಹರಿಸಲಾಗುತ್ತಿತ್ತು. ಆದರೆ, ಈ ವರ್ಷದಲ್ಲಿ ಅವಧಿಗೂ ಮುನ್ನ ಅಣೆಕಟ್ಟೆಯಲ್ಲಿ ನೀರು ಕಡಿಮೆಯಾಗುವುದರಿಂದ ಈ ವರ್ಷದ ಬೇಸಿಗೆ ಹಂಗಾಮಿಗೆ ನೀರು ಹರಿಸುವು ಕಷ್ಟ ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT