ಚಾವಣಿ ಹಂತದಲ್ಲಿ ಸಂತ್ರಸ್ತರ 55 ಮನೆ

ಭಾನುವಾರ, ಮಾರ್ಚ್ 24, 2019
34 °C
ಪ್ರಕೃತಿ ವಿಕೋಪ: ಕಾಮಗಾರಿ ಪ್ರಗತಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ

ಚಾವಣಿ ಹಂತದಲ್ಲಿ ಸಂತ್ರಸ್ತರ 55 ಮನೆ

Published:
Updated:
Prajavani

ಮಡಿಕೇರಿ: ‘ಕೊಡಗು ಜಿಲ್ಲೆಯ ಐದು ಸ್ಥಳಗಳಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು 55 ಮನೆಗಳು ಚಾವಣಿ ಹಂತಕ್ಕೆ ತಲುಪಿವೆ’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ‘770 ಮನೆ ನಿರ್ಮಿಸಲಾಗುತ್ತಿದೆ. ಐದೂ ಸ್ಥಳಗಳಲ್ಲೂ ಕಾಮಗಾರಿ ವಿವಿಧ ಹಂತದಲ್ಲಿವೆ. ಮಳೆಗಾಲಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸಿ ಸಂತ್ರಸ್ತರಿಗೆ ಹಸ್ತಾಂತರ ಮಾಡಲಾಗುವುದು. 242 ಮಂದಿ ಸಂತ್ರಸ್ತರು ತಾವೇ ಮನೆ ನಿರ್ಮಿಸಿಕೊಳ್ಳಲು ಮುಂದೆ ಬಂದಿದ್ದು ಅವರಿಗೆ ಆರ್ಥಿಕ ನೆರವು ನೀಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

‘ಮೊದಲ ಹಂತದಲ್ಲಿ ಸಂಪೂರ್ಣ ಮನೆ ಕಳೆದುಕೊಂಡ 414 ಕುಟುಂಬಗಳಿಗ ಪ್ರತಿಮನೆಗೆ ₹ 9.85 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಜಂಬೂರು, ಮದೆ, ಕರ್ಣಂಗೇರಿ ಗ್ರಾಮದಲ್ಲಿ ನಿರ್ಮಾಣ ನಡೆಯುತ್ತಿದೆ. ಚಾವಣಿ ಹಂತದಲ್ಲಿರುವ 55 ಮನೆಗಳ ಕಾಮಗಾರಿ ಅಂತಿಮ ಹಂತದಲ್ಲಿದೆ’ ಎಂದು ಮಾಹಿತಿ ನೀಡಿದರು.

ಜಂಬೂರು ಗ್ರಾಮದಲ್ಲಿ 83 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವಂತೆ ಇನ್ಫೋಸಿಸ್‌ನವರಿಗೆ ಜಾಗ ಹಸ್ತಾಂತರ ಮಾಡಲಾಗಿದೆ. ಮತ್ತೊಂದು ಸಂಸ್ಥೆ ಮುಂದೆ ಬಂದಿದ್ದು, ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.

ಆರಂಭದಲ್ಲಿ 840 ಮನೆಗಳನ್ನು ತೀವ್ರ ಹಾನಿಯೆಂದು ಗುರುತಿಸಲಾಗಿತ್ತು. ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ 501 ಮನೆಗಳು ತೀವ್ರ, 662 ಭಾಗಶಃ ಹಾನಿಯಾಗಿದೆ ಎಂದು ವರದಿ ಸಲ್ಲಿಸಿದ್ದಾರೆ. ಮೂರನೇ ವ್ಯಕ್ತಿಯಿಂದ ಪರಿಶೀಲನೆ ನಡೆಸಿದ್ದು, 414 ಮನೆಗಳು ಮಾತ್ರ ತೀವ್ರ ಹಾನಿ ಎಂದು ವರದಿ ಬಂದಿದೆ. ಭಾಗಶಃ ಹಾನಿ ಆಗಿರುವ ಮನೆಗಳ ಪರಿಶೀಲನೆ ಮತ್ತೆ ನಡೆಯಲಿದೆ ಎಂದು ತಿಳಿಸಿದರು.

ಗೃಹೋಪಯೋಗಿ ವಸ್ತುಗಳು ಹಾನಿಯಾದ 4,564 ಕುಟುಂಬಗಳಿಗೆ ತಲಾ ₹ 3,800ರಂತೆ ಒಟ್ಟು ₹ 1.73 ಕೋಟಿ ಪರಿಹಾರ ವಿತರಿಸಲಾಗಿದೆ. ಭಾಗಶಃ ಮನೆ ಹಾನಿಯಾದ 2,871 ಕುಟುಂಬಗಳಿಗೆ ₹ 4.29 ಕೋಟಿ ಪರಿಹಾರ ನೀಡಲಾಗಿದೆ. ಸಂಪೂರ್ಣ ಹಾಗೂ ತೀವ್ರ ಹಾನಿಯಾದ 1,045 ಕುಟುಂಬಗಳಿಗೆ ತಲಾ ₹ 1.3 ಲಕ್ಷದಂತೆ ₹ 6.31 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಮನೆ ನಿರ್ಮಾಣವಾಗುವ ತನಕ ಸಂತ್ರಸ್ತರಿಗೆ ₹ 10 ಸಾವಿರ ಬಾಡಿಗೆ ವಿತರಣೆ ಮಾಡಲಾಗುತ್ತಿದೆ. ಬ್ಯಾಂಕ್‌ ಕೋಡ್ ಹಾಗೂ ದಾಖಲೆಗಳು ಸಮರ್ಪಕವಿಲ್ಲದ ಕಾರಣ ಕೆಲವು ಕುಟುಂಬಕ್ಕೆ ಬಾಡಿಗೆ ಹಣ ಸಿಕ್ಕಿಲ್ಲ. ಇನ್ನೆರಡು ದಿನಗಳಲ್ಲಿ ಆ ಹಣವೂ ಪಾವತಿಯಾಗಲಿದೆ ಎಂದು ಮಾಹಿತಿ ನೀಡಿದರು.

ಲೋಕೋಪಯೋಗಿ ಇಲಾಖೆ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಲೋಕೋಪಯೋಗಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳ ಮೇಲೆ ಮಣ್ಣು ಜರಿದು ಹಾಗೂ ರಸ್ತೆ ಕುಸಿದು ತೀವ್ರ ಹಾನಿಯಾಗಿತ್ತು. ಮುಖ್ಯಮಂತ್ರಿ ವಿಶೇಷ ಮಳೆ ಹಾನಿ ದುರಸ್ತಿ ಅನುದಾನದಲ್ಲಿ ₹ 44.35 ಕೋಟಿ ದೊರೆತಿದ್ದು ಆಡಳಿತಾತ್ಮಕ ಅನುಮೋದನೆ ನೀಡಲಾದ 81 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ 51 ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಉಳಿದ 30 ಕಾಮಗಾರಿ ಪ್ರಗತಿಯಲ್ಲಿವೆ. ಹಾನಿಗೊಳಗಾದ ರಸ್ತೆಗಳ ಸುರಕ್ಷತಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತಜ್ಞರನ್ನು ಸಂಪರ್ಕಿಸಿದ್ದು ಅವರಿಂದ ಸ್ಥಳ ಪರಿಶೀಲನೆ ಮಾಡಿಸಿ ಸಲಹೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ: ಮಳೆ– ಭೂಕುಸಿತಕ್ಕೆ ರಸ್ತೆಗಳು, ಅಂಗನವಾಡಿ ಕಟ್ಟಡಗಳು, ಶಾಲಾ ಕಟ್ಟಡಗಳು, ಮೋರಿಗಳು ಹಾಳಾಗಿದ್ದು ಇದರ ದುರಸ್ತಿಗಾಗಿ ಒಟ್ಟಾರೆ ₹ 10.28 ಕೋಟಿ ಜಿಲ್ಲಾಡಳಿತದಿಂದ ಮಂಜೂರಾಗಿದೆ. ಮೇಲಿನ ದುರಸ್ತಿ ಕಾಮಗಾರಿಗಳನ್ನು ಪಂಚಾಯತ್‌ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿವರಿಸಿದರು.    

ನಗರಾಭಿವೃದ್ಧಿ ಇಲಾಖೆ (ಸ್ಥಳೀಯ ಸಂಸ್ಥೆಗಳು): ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ರಸ್ತೆ, ತಡೆಗೋಡೆ ಹಾಗೂ ಇತರೆ ದುರಸ್ತಿಗೆ ಒಟ್ಟು ₹ 2.62 ಕೋಟಿ 17 ಕಾಮಗಾ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಕೃಷಿ–ತೋಟಗಾರಿಕಾ ಇಲಾಖೆ: ಅತಿವೃಷ್ಟಿಯಿಂದ 7,109 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 695 ಹೆಕ್ಟೇರ್ ಪ್ರದೇಶದಲ್ಲಿ ಹೂಳು ತುಂಬಿ ಬೆಳೆ ಹಾನಿಯಾಗಿದೆ. 68,092 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಫಿ, ಕರಿಮೆಣಸು, ಬಾಳೆ, ಶುಂಠಿ ಮತ್ತು ಏಲಕ್ಕಿ ಬೆಳೆಗಳಲ್ಲಿ ಹೆಚ್ಚು ಹಾನಿಯಾಗಿತ್ತು ಎಂದು ಮಾಹಿತಿ ನೀಡಿದರು.

ಕಾವೇರಿ ನೀರಾವರಿ ನಿಗಮ: ಪ್ರಕೃತಿ ವಿಕೋಪ ಪ್ರವಾಹ ಭೂಕುಸಿತದಿಂದ ನದಿಗಳು, ಕೆರೆ ಹಾಗೂ ಜಲಾಶಯದಲ್ಲಿ ತುಂಬಿರುವ ಹೂಳನ್ನು ಎತ್ತುವ ಕಾರ್ಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಹಾರಂಗಿ ನದಿ ಪಾತ್ರದಲ್ಲಿ ಹೂಳು ತೆಗೆಯಲು ₹ 75 ಕೋಟಿ ಅನುದಾನ ನೀಡಿದ್ದು, ಈಗಾಗಲೇ ಕೆಆರ್‌ಎಸ್ ಎಂಜಿನಿಯರ್‌ ತಂಡದಿಂದ ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !