ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯ ರಂಗು, ಮೆರವಣಿಗೆ ಸೊಬಗು: ಪ್ರಕೃತಿ ಮಡಿಲಲ್ಲಿ ಸಂಭ್ರಮದ ‘ಕಿಡ್ಡಾಸ ಹಬ್ಬ’

Last Updated 7 ಮಾರ್ಚ್ 2019, 12:35 IST
ಅಕ್ಷರ ಗಾತ್ರ

ಮಡಿಕೇರಿ: ಸುತ್ತಲೂ ಹಸಿರು ಸಿರಿ... ಕಂಗೊಳಿಸುವ ಬೆಟ್ಟದ ಸಾಲುಗಳು... ನಡುವೆ ವಿಶಾಲವಾದ ಮೈದಾನ, ಮೈದಾನದಲ್ಲಿ ಪುಟಾಣಿಗಳು, ಮಹಿಳೆಯರು ಹಾಗೂ ವೃದ್ಧರು ಆಡಿ, ಹಾಡಿ ನಲಿದು ಸಂಭ್ರಮಿಸಿದರು.

ಇದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಗಾಳಿಬೀಡಿನ ಸ್ನೇಹಿತರ ಯುವಕ ಸಂಘದ ಆಶ್ರಯದಲ್ಲಿ ಈಚೆಗೆ ನಡೆದ ಅರೆಭಾಷೆ ಸಂಸ್ಕೃತಿಯ ಕಿಡ್ಡಾಸ್‌ ಹಬ್ಬದಲ್ಲಿ ದೃಶ್ಯಗಳು.

ಜಾತಿ, ಮತ, ಬೇಧವಿಲ್ಲದೇ ಎಲ್ಲರೂ ಒಂದಾಗಿ ಬೆರೆತು ಸಂಭ್ರಮಿಸಿದರು. ಸಾಂಪ್ರದಾಯಿಕ ಮೆರವಣಿಗೆ ಸೊಬಗು ನೀಡಿತು. ಕಳಸ ಹೊತ್ತ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಪುರುಷರೊಂದಿಗೆ, ಅತಿಥಿಗಳೂ ಹೆಜ್ಜೆ ಹಾಕಿದರು.

ರಂಗೋಲಿ ಚಿತ್ತಾರ: ಮಹಿಳೆಯರಿಗಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಬಣ್ಣಬಣ್ಣದ ರಂಗೋಲಿ ಬಿಡಿಸಿದರು. ಕಾರ್ಯಕ್ರಮದ ಅಂಗಳದಲ್ಲಿ ಬಣ್ಣದ ಚಿತ್ತಾರ ಹರಡಿದಂತಿತ್ತು.

ಗ್ರಾಮೀಣ ಕ್ರೀಡೆಯ ಸೊಗಡು: ಗ್ರಾಮೀಣ ಕ್ರೀಡೆಗಳು ಜನಮನ ಸೂರೆಗೊಂಡವು. ಪುಟಾಣಿ ಮಕ್ಕಳಿಗೆ ಏರ್ಪಡಿಸಿದ್ದ ಕೈಕಟ್ಟಿ ಬಿಸ್ಕತ್‌ ಕಚ್ಚಿ ತಿನ್ನುವ ಸ್ಪರ್ಧೆ ರಂಜಿಸಿತು.

ಮಕ್ಕಳೇ ಗಾದೆ ಬರೆದು, ಓದಿ ಬಹುಮಾನ ಗೆದ್ದುಕೊಂಡರು. ಕ್ಯಾಟರ್ ಪಿಲ್ಲರ್ (ಬಿಲ್ಲು)ನಿಂದ ಗುರಿ ನೋಡುವ ಸ್ಪರ್ಧೆ, ಮಹಿಳೆಯರು ನೀರಿನ ಚೆಂಬು ಹೊತ್ತು ಓಡುವ ಸ್ಪರ್ಧೆ, ದಂಪತಿ ಹಾಳೆ ಮೇಲಿನ ಸವಾರಿ... ಎಲ್ಲರನ್ನೂ ಮನಸೂರೆಗೊಳಿಸಿತು. ಹಳೇ ಕಾಲದ ಪದ್ಧತಿಯ ರುಮಾಲು ಸುತ್ತುವ ಸ್ಪರ್ಧೆ ಎಲ್ಲರಿಗೂ ಸವಾಲಾಗಿತ್ತು.

‘ಭಾಷಾ ಸಾಮರಸ್ಯವಿರಲಿ’: ನಿವೃತ್ತ ಡಿವೈಎಸ್‌ಪಿ ಯಾಲದಾಳು ಡಿ. ಕೇಶವಾನಂದಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು, ಭಾಷೆ ಬೆಳೆಯಲು ಎಲ್ಲರ ಸಹಕಾರ ಅತ್ಯಗತ್ಯ. ಭಾಷೆ ಬೆಳೆಸಲು ಅಕಾಶವಾಣಿಯಲ್ಲಿ ಅರೆಭಾಷೆ ವಾರ್ತೆ ಅರಂಭಿಸಿದ್ದು, ಇದಕ್ಕೆ ಅಕಾಡೆಮಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿದ್ದ ಶಾಸಕ ಕೆ.ಜಿ.ಬೋಪಯ್ಯ, ಭಾಷಾ ಬೆಳವಣಿಗೆಯೊಂದಿಗೆ ಸಾಮರಸ್ಯವಿರಬೇಕು. ಮಾತೃ ಭಾಷೆಯನ್ನು ಮರೆಯಬಾರದು. ಅದರೊಂದಿಗೆ ಇತರ ಭಾಷೆಗಳನ್ನೂ ಗೌರವಿಸಬೇಕು. ಅಕಾಡೆಮಿ ಸ್ಥಾಪನೆಯಾದ ಬಳಿಕ ಸಾಕಷ್ಟು ಉತ್ತಮ ಕಾರ್ಯಕ್ರಮಗಳಾಗಿವೆ. ಭಾಷೆಯೊಂದಿಗೆ ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ್ ಮಾತನಾಡಿ, ‘ಕಿಡ್ಡಾಸ ಹಬ್ಬಕ್ಕೆ ಎಲ್ಲರ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲು ಯೋಚಿಸಲಾಗಿದೆ. ನಾವು ನಮ್ಮ ಭಾಷೆಯನ್ನು ಮನೆಯಿಂದಲೇ ಬೆಳೆಸಬೇಕು. ಭಾಷಾ ಸಾಮರಸ್ಯ ಮೂಡಿಸಬೇಕು’ ಎಂದು ಕರೆ ನೀಡಿದರು.

ಸುಳ್ಯದ ನೆಹರೂ ಸ್ಮಾರಕ ಪದವಿ ಕಾಲೇಜಿನ ಪ್ರಾಧ್ಯಾಪಕ ಸಂಜೀವ ಕುದ್ಪಾಜೆ ಅವರು ಕಿಡ್ಡಾಸ ಹಬ್ಬದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.

ಗಾಳಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯತಂಡ ಸುಭಾಷ್ ಸೋಮಯ್ಯ, ಉಪಾಧ್ಯಕ್ಷೆ ಬದಲೇರ ರಾಣಿ ಮುತ್ತಣ್ಣ, ಸುಭಾಷ್‌ಚಂದ್ರ ಅಳ್ವ, ಏಲಕ್ಕಿ ಮಾರಾಟ ಸಂಘದ ಉಪಾಧ್ಯಕ್ಷ ಕೋಳುಮುಡಿಯನ ಆರ್. ಅನಂತಕುಮಾರ್, ದವಸಭಂಡಾರದ ಅಧ್ಯಕ್ಷ ಕೊಂಬಾರನ ಪಿ. ಲಿಂಗರಾಜು, ಮಹಿಳಾ ಸಮಾಜದ ಅಧ್ಯಕ್ಷೆ ಅಚ್ಚಪಟ್ಟೀರ ಜಿ. ಕವಿತಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಯಲಾದಾಳು ಪದ್ಮಾವತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮುದ್ದಂಡ ರಾಯ್ ತಮ್ಮಯ್ಯ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಪಿ. ಜಯಾನಂದ ಹಾಜರಿದ್ದರು.ರಾತ್ರಿ ನಡೆದ ಸಾಂಸ್ಕೃತಿ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT