ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲ ಕೋಟೆಯಲ್ಲಿ ‘ಮೈತ್ರಿ’ ಲೆಕ್ಕಾಚಾರ

ಪ್ರತಾಪ ಸಿಂಹಗೆ ಬಿಜೆಪಿ ಶಾಸಕರ ‘ಬಲ’,
Last Updated 22 ಮಾರ್ಚ್ 2019, 14:24 IST
ಅಕ್ಷರ ಗಾತ್ರ

ಮಡಿಕೇರಿ: ಕಮಲದ ಭದ್ರಕೋಟೆ ಕೊಡಗು ಜಿಲ್ಲೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ‘ಮೈತ್ರಿ’ಯು, ತಮ್ಮ ಭದ್ರನೆಲೆ ಕೊಡಗಿನಲ್ಲೇ ಬಿಜೆಪಿಗೆ ನಿದ್ದೆಗೆಡಿಸಿದೆ.

ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ ಸಿಂಹ ಅವರು ಮೈಸೂರು–ಕೊಡಗು ಕ್ಷೇತ್ರದಿಂದ 2ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಅವರು ತಮ್ಮ ಕೋಟೆಯಲ್ಲೇ ಈ ಬಾರಿ ಲೀಡ್‌ ಪಡೆಯಲು ಸಾಕಷ್ಟು ಬೆವರು ಹರಿಸಬೇಕೆಂಬುದು ಅಂಕಿಅಂಶಗಳಿಂದಲೇ ದೃಢಪಡಿಸುತ್ತಿವೆ. ‘ಮೈತ್ರಿ’ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಸಿ.ಎಚ್‌. ವಿಜಯಶಂಕರ್‌ ಅವರ ಸ್ಪರ್ಧೆ ಖಚಿತವಾಗಿದೆ. ನಾನೂ ಸಹ ಊರಿನ ಅಳಿಯ ಎಂದು ಪ್ರಚಾರಕ್ಕೆ ಇಳಿದಿದ್ದಾರೆ.

ವಿಧಾನಸಭೆ ಚುನಾವಣೆಗಿಂತ ಲೋಕಸಭಾ ಚುನಾವಣೆ ವಿಭಿನ್ನ. ಆದರೂ, ಕಳೆದೆರಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಪಡೆದಿದ್ದ ಮತಗಳ ಆಧಾರದ ಮೇಲೆ ಮಿತ್ರರಲ್ಲಿ ‍ಲೆಕ್ಕಾಚಾರಗಳು ಗರಿಗೆದರಿವೆ.

ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕೊಡಗು, ಎಂ.ಪಿ. ಅಪ್ಪಚ್ಚು ರಂಜನ್‌ ಹಾಗೂ ಕೆ.ಜಿ. ಬೋಪಯ್ಯ ಅವರು ಚುನಾವಣೆ ಕಣಕ್ಕೆ ಇಳಿದ ನಂತರ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್‌–ಜೆಡಿಎಸ್‌ ಅಭ್ಯರ್ಥಿಗಳಿಗೆ ಗೆಲುವಿನ ಹೊಸ್ತಿಲಿಗೆ ಬಂದರೂ ಜಯದ ಮಾಲೆ ಧರಿಸಲು ಸಾಧ್ಯವಾಗಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸತತವಾಗಿ ಗೆಲುವು ಸಾಧಿಸುತ್ತಿದ್ದರೂ, ಲೋಕಸಭಾ ಕ್ಷೇತ್ರದಲ್ಲಿ ಜಯ ಮಾತ್ರ ಅತ್ತಿತ್ತ ವಾಲುತ್ತಿದೆ.

ಬಿಜೆಪಿ ಅಭ್ಯರ್ಥಿಗೆ ಯಾವೆಲ್ಲಾ ಲಾಭ:
ಪ್ರತಾಪ ಸಿಂಹ ಅವರಿಗೆ ಕೊಡಗಿನಲ್ಲಿ ಬಿಜೆಪಿ ಶಾಸಕರು ಇರುವುದು ‘ಆನೆ ಬಲ’ ಎಂಬಂತಾಗಿದೆ. ಒಳಗೊಳಗೆ ಆತಂಕವೂ ಇದೆ. 1994, 1999, 2008, 2013 ಹಾಗೂ 2018ರಲ್ಲಿ ಗೆದ್ದಿರುವ ಅಪ್ಪಚ್ಚು ರಂಜನ್‌ ಒಂದೆಡೆ, ಮತ್ತೊಂದೆಡೆ 2004, 2008, 2013 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಕೆ.ಜಿ. ಬೋಪಯ್ಯ. ರಂಜನ್‌ ಸಹೋದರ ಎಂ.ಪಿ. ಸುನಿಲ್‌ ಸುಬ್ರಮಣಿ ಅವರೂ ವಿಧಾನ ಪರಿಷತ್‌ ಸದಸ್ಯರು.

ಜತೆಗೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯಲ್ಲೂ ಬಿಜೆಪಿಯದ್ದೇ ಆಡಳಿತ. ಇಷ್ಟಿದ್ದರೂ ಎರಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ನ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳ ಮೇಲೆ ‘ಮೈತ್ರಿ’ ಅಭ್ಯರ್ಥಿಯ ಭವಿಷ್ಯದ ಲೆಕ್ಕಾಚಾರ ನಡೆಯುತ್ತಿದೆ. ಕಾಂಗ್ರೆಸ್‌ನಿಂದ ಏಕೈಕ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಇದ್ದಾರೆ. ಹೀಗಾಗಿ, ಕಾಂಗ್ರೆಸ್‌ ಅಭ್ಯರ್ಥಿ ವಿಜಯಶಂಕರ್‌ ಅವರು ಮಾಜಿ ಸಚಿವರು ಹಾಗೂ ಪಕ್ಷದ ಹಿರಿಯ ಮುಖಂಡರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.

ಯಶಸ್ವಿಯಾಗಿದ್ದ ‘ಮೈತ್ರಿ’ ಪ್ರಯೋಗ:
ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಪ್ರಯೋಗ ನಡೆಸಿತ್ತು. ಅದರಲ್ಲಿ ಬಹುಪಾಲು ಮೈತ್ರಿ ಅಭ್ಯರ್ಥಿಗಳೇ ಗೆದ್ದು ಬೀಗಿದ್ದರು. ಹೊಸ ಪ್ರಯೋಗವು ಜಿಲ್ಲೆಯಲ್ಲಿ ಯಶಸ್ವಿಯೂ ಆಗಿತ್ತು. ಆ ಭಯ ಬಿಜೆಪಿ ಅಭ್ಯರ್ಥಿಗೆ ಕಾಡುತ್ತಿದೆ.

ಹೇಗಿದೆ ಲೆಕ್ಕಾಚಾರ: 2013ರ ವಿಧಾನಸಭೆ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಿಂದ ಬಿಜೆಪಿ ಎಂ.ಪಿ. ಅಪ್ಪಚ್ಚು ರಂಜನ್‌ 56,696 ಮತ ಪಡೆದು ಗೆದ್ದಿದ್ದರು. ಅಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳಿಗೆ ಬಿದ್ದಿದ್ದ ಮತಗಳನ್ನು ಒಟ್ಟುಗೂಡಿಸಿದರೆ 84,380. ಆ ಚುನಾವಣೆಯಲ್ಲಿ ರಂಜನ್‌ ಅವರಿಗೆ 4,629 ಮತಗಳ ಅಂತರದ ಗೆಲುವು ಲಭಿಸಿತ್ತು.

ಅದೇ 2018ರ ಚುನಾವಣೆಯಲ್ಲಿ ರಂಜನ್ ತಮ್ಮ ಬ್ಯಾಂಕ್‌ ಅನ್ನು ಹಿಗ್ಗಿಸಿಕೊಂಡು 70,631 ಮತ ಪಡೆದಿದ್ದರು. ಕಾಂಗ್ರೆಸ್‌–ಜೆಡಿಎಸ್‌ ಅಭ್ಯರ್ಥಿಗಳಿಗೆ ಬಿದ್ದ ಒಟ್ಟು ಮತ 92,835.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲೂ ಸಿ.ಎಚ್‌. ವಿಜಯಶಂಕರ್‌ ಬೆಂಬಲಿಗರು ಕೂಡಿ–ಕಳೆಯುವ ಲೆಕ್ಕಾಚಾರದಲ್ಲಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಕೆ.ಜಿ.ಬೋಪಯ್ಯ 67,250 ಮತ ಪಡೆದಿದ್ದರು. ಅಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳಿಗೆ ಬಿದ್ದಿದ್ದ ಮತಗಳನ್ನು ಒಟ್ಟುಗೂಡಿಸಿದಾಗ 69,716.

ಅದೇ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೋಪಯ್ಯಗೆ 77,944. ಕಾಂಗ್ರೆಸ್‌–ಜೆಡಿಎಸ್‌ ಅಭ್ಯರ್ಥಿಗಳು ಒಟ್ಟು ಪಡೆದ ಮತ 75,815. ಮಿತ್ರಪಕ್ಷಗಳಿಗೆ ಬಿದ್ದ ಮತಕ್ಕಿಂತಲೂ ಬೋಪಯ್ಯ ಅವರು 2,129 ಮತದಲ್ಲಿ ಮುಂದಿದ್ದರು. ದಕ್ಷಿಣ ಕೊಡಗು ಭಾಗದಲ್ಲಿ ಬಿಜೆಪಿಗೆ ಭದ್ರ ನೆಲೆಯಿದೆ. ಈ ಭಾಗದ ಮತಗಳನ್ನೇ ಲೋಕಸಭಾ ಚುನಾವಣೆಯಲ್ಲೂ ಪ್ರತಾಪ ಸಿಂಹ ಅವರು ನಂಬಿಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಪ್ರತಾಪ ಸಿಂಹ ಅವರು ದಕ್ಷಿಣ ಕೊಡಗು ಭಾಗದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT