ಅಂಗವಿಕಲರ ಮತದಾನಕ್ಕೆ ಸಾರಿಗೆ ವ್ಯವಸ್ಥೆ

ಬುಧವಾರ, ಏಪ್ರಿಲ್ 24, 2019
31 °C
ಲೋಕಸಭಾ ಚುನಾವಣೆ: ‘ಮತಗಟ್ಟೆಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಿ’

ಅಂಗವಿಕಲರ ಮತದಾನಕ್ಕೆ ಸಾರಿಗೆ ವ್ಯವಸ್ಥೆ

Published:
Updated:
Prajavani

ಮಡಿಕೇರಿ: ಲೋಕಸಭೆ ಚುನಾವಣೆಯ ಮತದಾನದಂದು ಅಂಗವಿಕಲರಿಗೆ ಮತಗಟ್ಟೆಗಳಿಗೆ ಹೋಗಿ– ಬರಲು ಸಾರಿಗೆ ವ್ಯವಸ್ಥೆ ಹಾಗೂ ಮತಗಟ್ಟೆಯ ಬಳಿ ವ್ಹೀಲ್‌ಚೇರ್‌ ವ್ಯವಸ್ಥೆ ಮಾಡಬೇಕು ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್ ಕುಮಾರ್ ಸೂಚಿಸಿದರು.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬುಧವಾರ ಅವರು ಮಾತನಾಡಿದರು.   

‘ಜಿಲ್ಲೆಯ ಮತಗಟ್ಟೆ ಕೇಂದ್ರಗಳಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಮೊದಲಾದ ಸೌಲಭ್ಯಗಳಿವೆ. ಇದರ ಜತೆಗೆ ಸರಿಯಾದ ರಸ್ತೆ ಮಾರ್ಗ ಇರಬೇಕು’ ಎಂದು ಹೇಳಿದರು.

ಕೊಡಗು ಜಿಲ್ಲೆ ಮಲೆನಾಡು ಪ್ರದೇಶವಾಗಿದ್ದು, ಜಿಲ್ಲೆಯಲ್ಲಿ ಶಾಲೆಗಳು ಇಳಿಜಾರು ಅಥವಾ ಎತ್ತರ ಪ್ರದೇಶದಲ್ಲಿರುತ್ತವೆ. ಆದ್ದರಿಂದ, ಮುಖ್ಯರಸ್ತೆಯಿಂದ ಮತಗಟ್ಟೆ ಕೇಂದ್ರಗಳಿಗೆ ತೆರಳಲು ಸರಿಯಾದ ರಸ್ತೆ ಮಾರ್ಗ ಇರಬೇಕು. ಅದಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.  

ಚುನಾವಣಾ ಆಯೋಗವು ಈ ಬಾರಿ ಅಂಗವಿಕಲರು ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತದಾನ ಮಾಡುವಂತಾಗಲು ವಿಶೇಷ ಗಮನ ಹರಿಸಬೇಕು. ಜತೆಗೆ, ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದ್ದು, ಅದನ್ನು ಪಾಲಿಸುವಂತೆ ಅನಿಲ್ ಕುಮಾರ್ ಸೂಚಿಸಿದರು.  

‘ಸ್ವೀಪ್’ ಸಮಿತಿ ಅಧ್ಯಕ್ಷೆ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ, ‘ಕೊಡಗಿನಲ್ಲಿ 3,090 ಅಂಗವಿಕಲರಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,696 ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,394 ಅಂಗವಿಕಲರಿದ್ದು, ಇವರಲ್ಲಿ 1,978 ಪುರುಷರು, 1,112 ಮಹಿಳಾ ಅಂಗವಿಕಲರಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ 543 ಮತಗಟ್ಟೆಗಳಲ್ಲಿ ರ‍್ಯಾಂಪ್‌ ವ್ಯವಸ್ಥೆ ಕಲ್ಪಿಸಲಾಗುವುದು. 357 ವ್ಹೀಲ್‌ಚೇರ್‌, 463 ಕಡೆ ಭೂತ ಕನ್ನಡಿ, 380 ಮತಗಟ್ಟೆಗಳಲ್ಲಿ ಬ್ರೈಲ್ ಲಿಪಿ ಹಾಗೂ ಬ್ರೈಲ್ ಮತ ಚೀಟಿ, 146 ಜೀಪು ಮತ್ತು ಆಟೊರಿಕ್ಷಾ ವ್ಯವಸ್ಥೆ ಮಾಡಲಾಗಿದೆ. 670 ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಗ್ರಾ.ಪಂ ಮಟ್ಟದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ವಿವಿಧ ಪುನರ್ವಸತಿ ಕಾರ್ಯಕರ್ತರನ್ನು ಕರೆದೊಯ್ಯಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮತದಾನದ ಮಹತ್ವ ಕುರಿತು ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ನಾಗರಿಕರಿಂದ ಕ್ಯಾಂಡಲ್ ಮಾರ್ಚ್, ಇ.ವಿ.ಎಂ ಮತ್ತು ವಿವಿ ಪ್ಯಾಟ್ ಬಗ್ಗೆ ಅರಿವು, ಜಾಥಾ, ರ‍್ಯಾಲಿ, ಓಟ, ಬೀದಿ ನಾಟಕ, ಮತದಾನದ ಮಹತ್ವ ಕುರಿತು ಸಂದೇಶ ಸಾರಲು ಅಂಗವಿಕಲರನ್ನು ರಾಯಭಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮತಗಟ್ಟೆ ಕೇಂದ್ರಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರ‍್ಯಾಂಪ್ ವ್ಯವಸ್ಥೆ ಮತ್ತಿತರ ಸೌಲಭ್ಯಗಳ ಜತೆಗೆ ಮುಖ್ಯರಸ್ತೆಯಿಂದ ಮತಗಟ್ಟೆ ಕೇಂದ್ರಗಳಿಗೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಜಿ.ಪಂ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಅಧಿಕಾರಿ ದೇವರಾಜು, ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಮೋಹನ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆಂಚಪ್ಪ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೊ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅರುಂಧತಿ, ಪೌರಾಯುಕ್ತ ಎಂ.ಎಲ್.ರಮೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ, ಶಿವಣ್ಣ, ನವೀನ್, ಅನಿಲ್ ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !