ತಲಕಾವೇರಿ ವನ್ಯಜೀವಿ ಧಾಮದಲ್ಲಿ ಸಿನಿಮಾ ಚಿತ್ರೀಕರಣ; ಪರಿಸರ ಪ್ರೇಮಿಗಳ ಆಕ್ರೋಶ

ಗುರುವಾರ , ಏಪ್ರಿಲ್ 25, 2019
21 °C
ಪ್ಯಾಕ್‌ ಅಪ್‌ ಮಾಡಲು ಆಗ್ರಹ, ಅರಣ್ಯ ಇಲಾಖೆಯಿಂದಲೇ ಅವಕಾಶ

ತಲಕಾವೇರಿ ವನ್ಯಜೀವಿ ಧಾಮದಲ್ಲಿ ಸಿನಿಮಾ ಚಿತ್ರೀಕರಣ; ಪರಿಸರ ಪ್ರೇಮಿಗಳ ಆಕ್ರೋಶ

Published:
Updated:
Prajavani

ಮಡಿಕೇರಿ: ತಾಲ್ಲೂಕಿನ ತಲಕಾವೇರಿ ಹಾಗೂ ಭಾಗಮಂಡಲ ವ್ಯಾಪ್ತಿಯ ವನ್ಯಜೀವಿ ಧಾಮದಲ್ಲಿ ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿದ್ದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಮಲಯಾಳಂನ ‘ನಲ್ಪತ್ತಿಒನ್‌’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ವನ್ಯಜೀವಿ ವಲಯದಲ್ಲಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿರುವ ಕ್ರಮಕ್ಕೆ ಅರಣ್ಯಾಧಿಕಾರಿಗಳ ವಿರುದ್ಧವೇ ಪರಿಸರ ಪ್ರೇಮಿಗಳು ತಿರುಗಿ ಬಿದ್ದಿದ್ದು, ಇದು ವಿವಾದ ಸ್ವರೂಪ ಪಡೆದುಕೊಂಡಿದೆ.  

ವನ್ಯಧಾಮದಲ್ಲಿ ಚಿತ್ರೀಕರಣದಿಂದ ವನ್ಯಪ್ರಾಣಿಗಳಿಗೆ ಕಂಟಕವಾಗಲಿದೆ. ಫೆಬ್ರುವರಿಯಿಂದಲೇ ಈ ವ್ಯಾಪ್ತಿಯ ಅರಣ್ಯಕ್ಕೆ ಚಾರಣ ನಿಷೇಧಿಸಲಾಗಿದೆ. ಈ ಆದೇಶವನ್ನೂ ಗಾಳಿಗೆ ತೂರಿ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ತಲಕಾವೇರಿ ವ್ಯಾಪ್ತಿಯಲ್ಲಿ ಅಪರೂಪದ ಕಾಡು ಪ್ರಾಣಿಗಳಿವೆ. ವಾಹನಗಳ ಓಡಾಟ ಹಾಗೂ ಜನರೇಟರ್‌ ಶಬ್ದದಿಂದ ಪ್ರಾಣಿಗಳಿಗೆ ತೊಂದರೆ ಆಗುವ ಆತಂಕ ಎದುರಾಗಿದೆ.

ತಲಕಾವೇರಿ ಹಾಗೂ ಭಾಗಮಂಡಲ ನಡುವೆಯ ಮೂಲೆಮೊಟ್ಟೆ ಎಂಬ ಸ್ಥಳದಲ್ಲಿ ಚಿತ್ರೀಕರಣ ನಡೆಯುತ್ತಿದೆ. ವನ್ಯಧಾಮದಲ್ಲಿ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಆದರೆ, ಇಡೀ ವನ್ಯಧಾಮದ ಸುತ್ತೆಲ್ಲ ಸಂಚರಿಸುತ್ತ ಚಿತ್ರೀಕರಣ ಮಾಡಲಾಗುತ್ತಿದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಇಲಾಖೆಯಿಂದಲೇ ಆದೇಶ: ನಿರ್ಬಂಧಿತ ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಇಲ್ಲದಿದ್ದರೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಒಬ್ಬರು ಅನುಮತಿ ನೀಡಿರುವುದು ಬೆಳಕಿಗೆ ಬಂದಿದೆ.

ಹಿರಿಯ ಅಧಿಕಾರಿಯ ಸೂಚನೆಯ ಮೇರೆಗೆ ಮಡಿಕೇರಿ ವನ್ಯಜೀವಿ ವಿಭಾಗದಿಂದ ಮಾರ್ಚ್‌ 30ರಂದು ಚಿತ್ರತಂಡಕ್ಕೆ ಅನುಮತಿ ನೀಡಲಾಗಿದೆ. ಏ. 2ರಿಂದ 6ರ ತನಕ ತಂಡಕ್ಕೆ ಅನುಮತಿ ಸಿಕ್ಕಿದೆ. ವನ್ಯಧಾಮದಲ್ಲಿ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಶನಿವಾರ ಬೆಳಿಗ್ಗೆ ಚಿತ್ರ ತಂಡವು ಪ್ಯಾಕ್‌ಅಪ್‌ ಆಗುವ ಸಾಧ್ಯತೆಯಿದೆ. ಅಷ್ಟರಲ್ಲಿ ಅನುಮತಿ ನೀಡಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ಚಿತ್ರೀಕರಣದ ಸಲುವಾಗಿ ಅರಣ್ಯ ಇಲಾಖೆಗೆ ಚಿತ್ರತಂಡವು ಶುಲ್ಕವನ್ನೂ ಪಾವತಿಸಿದೆ. ಈ ಸಂಬಂಧ ಸಮಗ್ರ ತನಿಖೆ ಆಗಬೇಕು ಎಂಬ ಆಗ್ರಹಗಳು ಕೇಳಿಬಂದಿವೆ.

‘ಅವಕಾಶ ನೀಡಿರುವುದು ವನ್ಯಜೀವಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಬೆಂಕಿ ಆತಂಕದಿಂದ ಚಾರಣವನ್ನೇ ನಿಷೇಧಿಸಲಾಗಿದೆ. ಇನ್ಮುಂದೆ ಇಂತಹ ಅಚಾತುರ್ಯಗಳು ನಡೆಯದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲೆಯ ಪರಿಸರ ಹೋರಾಟಗಾರರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !