ಬಿಜೆಪಿ ಅಭ್ಯರ್ಥಿಗೆ ಕೊಡಗಿನಲ್ಲಿ ತಕ್ಕಪಾಠ

ಮಂಗಳವಾರ, ಏಪ್ರಿಲ್ 23, 2019
32 °C
ಭಾರತೀಯ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಈ.ರಾ. ದುರ್ಗಾಪ್ರಸಾದ್‌ ಹೇಳಿಕೆ

ಬಿಜೆಪಿ ಅಭ್ಯರ್ಥಿಗೆ ಕೊಡಗಿನಲ್ಲಿ ತಕ್ಕಪಾಠ

Published:
Updated:

ಮಡಿಕೇರಿ: ‘ಕೊಡಗು ಜಿಲ್ಲೆಯ ಜನರನ್ನು ಬಿಜೆಪಿ ವಂಚಿಸುತ್ತಾ ಬಂದಿದ್ದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಜನರು ತಕ್ಕಪಾಠ ಕಲಿಸಲಿದ್ದಾರೆ’ ಎಂದು ಭಾರತೀಯ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಈ.ರಾ. ದುರ್ಗಾಪ್ರಸಾದ್ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮುಖಂಡರು ಚುನಾವಣೆ ಸಮಯದಲ್ಲಿ ಸುಳ್ಳು ಆಶ್ವಾಸನೆಗಳನ್ನೇ ನೀಡಿ ಜನರನ್ನು ಮರಳು ಮಾಡುತ್ತಾರೆ. ಆ ಮೇಲೆ ಜನರಿಗೆ ಸಿಗುವುದಿಲ್ಲ ಎಂದು ದೂರಿದರು.

2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಯಾವುದೇ ಭರವಸೆಯನ್ನೂ ಇದುವರೆಗೂ ಈಡೇರಿಸಲಿಲ್ಲ.  ಕೊಡಗಿನ ಜನರ ಮತ ಗಳಿಸಬಹುದು ಎಂಬ ಕಲ್ಪನೆಯೊಂದಿಗೆ ಜನರೆದುರು ನಾಚಿಕೆಯಿಲ್ಲದೇ ಮತಯಾಚನೆ ಮಾಡುತ್ತಿರುವುದು ನಾಚಿಕೆಗೇಡಿತನದ ವಿಚಾರ ಎಂದು ಕುಟುಕಿದರು.

ಕೊಡಗಿನಲ್ಲಿ ಪರಿಸರ ಸೂಕ್ಷ್ಮ ವಲಯದ ರಚನೆ, ಕಸ್ತೂರಿ ರಂಗನ್ ಸಮಿತಿ ವರದಿಯ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಜನರನ್ನು ನಂಬಿಸಿದ್ದ ಸಂಸದ ಪ್ರತಾಪ ಸಿಂಹ, ನಂತರದ ದಿನದಲ್ಲಿ ಹೇಳಿಕೆ ವಿರುದ್ಧವಾಗಿ ನಡೆದುಕೊಂಡರು. ವಿದೇಶದಿಂದ ಕರಿಮೆಣಸು ಆಮದಿನಿಂದ ಇಲ್ಲಿನ ಕಾಳುಮೆಣಸು ಬೆಳೆಗಾರರ ಜೀವನ ಅಧೋಗತಿಗೆ ತಲುಪಿದೆ. ಗೋಣಿಕೊಪ್ಪಲಿನ ಎಪಿಎಂಸಿಯಲ್ಲಿ ನಡೆದಿದ್ದ ಪ್ರಕರಣವೇ ಹಗರಣಕ್ಕೆ ಸಾಕ್ಷಿಯಾಗಿದ್ದು, ಇದಕ್ಕೆಲ್ಲ ನೇರ ಹೊಣೆ ಬಿಜೆಪಿ ಎಂದು ಆರೋಪಿಸಿದರು.

ಕರಿಮೆಣಸು ಆಮದನ್ನು ತಡೆಹಿಡಿಯಬೇಕಾಗಿದ್ದ ಪ್ರತಾಪ ಸಿಂಹ ಜನರನ್ನು ವಂಚಿಸಿದ್ದಾರೆ. ಜಿಲ್ಲೆಯ ರೈತಾಪಿ ಜನರು ಈ ಬಗ್ಗೆ ಎಚ್ಚರಗೊಂಡು ಮತದಾನದ ಮೂಲಕ ಉತ್ತರ ನೀಡಬೇಕು ಎಂದು ಕೋರಿದರು.

ಕೇಂದ್ರ ಸರ್ಕಾರ ಭತ್ತದ ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಲಿಲ್ಲ. ಸಾಲ ಮನ್ನಾ ಮಾಡದೇ ಅನ್ಯಾಯ ಮಾಡಿತು ಎಂದು ಹೇಳಿದರು.

ಬುಡಕಟ್ಟು ಜನರನ್ನು ಹೊಸ ಅರಣ್ಯ ನೀತಿಯ ಮೂಲಕ ಅರಣ್ಯದಿಂದ ಹೊರದಬ್ಬುವ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರ ಜನ ವಿರೋಧಿ ನೀತಿ ಅನುಸರಿಸಿತ್ತು. ಇಂತಹ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಮತ ವ್ಯರ್ಥವಾಗುವ ಬದಲಿಗೆ ಸೋಲಿಸುವುದೇ ಉತ್ತಮ ಎಂದು ದುರ್ಗಾಪ್ರಸಾದ್ ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಎ.ಸಿ. ಸಾಬು, ಕುಟ್ಟಪ್ಪ, ಎಚ್.ಬಿ. ರಮೇಶ್ ಉಪಸ್ಥಿತರಿದ್ದರು. 

**

ಕೊಡಗಿನ ಜನರು ಬುದ್ಧಿವಂತರು; ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ತಕ್ಕಪಾಠ ಕಲಿಸಲಿದ್ದಾರೆ.  
– ಈ.ರಾ. ದುರ್ಗಾಪ್ರಸಾದ್, ಜಿಲ್ಲಾ ಕಾರ್ಯದರ್ಶಿ, ಭಾರತೀಯ ಕಮ್ಯುನಿಷ್ಟ್ ಪಕ್ಷ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !