ಗುರುವಾರ , ಸೆಪ್ಟೆಂಬರ್ 19, 2019
29 °C
ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆ

ಪ್ರಬುದ್ಧ ಭಾರತ ನಿರ್ಮಾಣಕ್ಕೆ ಪಣ ತೊಡಿ: ಮಹೇಶ ಚಂದ್ರಗುರು ಕರೆ

Published:
Updated:
Prajavani

ಮಡಿಕೇರಿ: ‘ಶಿಕ್ಷಣ, ಸಮಾನತೆ, ಸೌಹಾರ್ದದಿಂದ ಮಾತ್ರ ಪ್ರಬುದ್ಧ ಭಾರತ ನಿರ್ಮಿಸಲು ಸಾಧ್ಯ’ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್‌ ಚಂದ್ರಗುರು ಅಭಿಪ್ರಾಯಪಟ್ಟರು.

ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ, ಪಂಗಡದ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಅಂಬೇಡ್ಕರ್ ಅವರ 128ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು. 

‘ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು ಮುಖ್ಯವಾಹಿನಿಗೆ ತರಲು ಅಂಬೇಡ್ಕರ್‌ ಅವರು ಹಗಲಿರುಳು ಹೋರಾಟ ನಡೆಸಿದ್ದರ ಫಲವಾಗಿಯೇ ‌ದಲಿತರು ಹಾಗೂ ಮಹಿಳೆಯರಿಗೆ ಸೌಲಭ್ಯ ದೊರೆಯುವಂತಾಯಿತು’ ಎಂದರು.

‌ದಲಿತ ಶಕ್ತಿಯನ್ನು ಯಾರೂ ಕಡೆಗಣಿಸಬಾರದು. ಜತೆಗೆ ಅಂಬೇಡ್ಕರ್‌ ಅವರನ್ನು ದಲಿತರಿಗೆ ಸೀಮಿತವಾಗಿರುವ ನಾಯಕ ಎಂದು ಗುರುತಿಸಿ ಅಪಮಾನ ಮಾಡಬಾರದು. ಏಕೆಂದರೆ ಅವರು ವಿಶ್ವ ಮಾನವ. ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷರಂತೆ ಸರಿ ಸಮಾನವಾಗಿ ದುಡಿಯುತ್ತಿರಲು ಅಂಬೇಡ್ಕರ್ ಅವರ ಹೋರಾಟವೇ ಕಾರಣ ಎಂದು ತಿಳಿಸಿದರು.

ಹುಟ್ಟಿನಿಂದ ಯಾರೂ ಕನಿಷ್ಠರೂ ಅಲ್ಲ; ಶ್ರೇಷ್ಠರೂ ಅಲ್ಲ. ಹಿಂದೆ ದೇವಾಲಯ ಕಟ್ಟಲು ದಲಿತರ ಪರಿಶ್ರಮ ಬಯಸುತ್ತಿದ್ದವರು, ಇಂದು ದೇವಾಲಯಕ್ಕೆ ಪ್ರವೇಶ ನೀಡಲು ನಿರಾಕರಿಸುತ್ತಾರೆ. ಆದರೆ, ಪ್ರತಿಯೊಬ್ಬರು ಪ್ರಕೃತಿ, ಕಾನೂನು ದತ್ತವಾಗಿ ಎಲ್ಲರೂ ಒಂದೇ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ದೇವದಾಸ್ ಮಾತನಾಡಿ, ‘ಅಂಬೇಡ್ಕರ್‌ ಅವರು ಕಾರ್ಮಿಕರ ಕೆಲಸದ ಅವಧಿ ನಿಗದಿ, ಮಹಿಳೆಯರಿಗೆ ಆಸ್ತಿ ಹಕ್ಕು, ಸಮಾನ ಶಿಕ್ಷಣ ಸೇರಿದಂತೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ತತ್ವಾದರ್ಶ ಮತ್ತು ವಿಚಾರಗಳನ್ನು ಮರೆತರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಮೈಸೂರಿನ ಶಿವಯೋಗಿ ಉರಿಲಿಂಗ ಪೆದ್ದಿಮಠ ಪೀಠಾಧ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಅಂಬೇಡ್ಕರ್ ರಚಿಸಿದ ಸಂವಿಧಾನವು ದೇಶದ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ದಲಿತರು ಸಂವಿಧಾನ ತಮಗೆ ಮಾತರ ಸೀಮಿತ ಎಂಬ ಮನಸ್ಧಿತಿಯಿಂದ ಹೊರಬರಬೇಕು ಎಂದರು.

ಈ ಸಂದರ್ಭ ವಿಭಾಗಮಟ್ಟದಲ್ಲಿ ಬೆಳ್ಳಿ ಪದಕ ಪಡೆದ ಬಸ್‌ ಚಾಲಕರಾದ ಕಾರ್ಯಪ್ಪ, ಕೆ.ಪಿ.ದಿನೇಶ್‌, ಪಾಪು ಶಿವಯಾನ ಗೊಳ, ಸಂತೋಷ್ ಅನಿನಾಳ, ಸೀನಾ ನಾಯಕ್‌ ಅವರನ್ನು ಸನ್ಮಾನಿಸಲಾಯಿತು.

ಕರಾರಸಾ ನಿಗಮ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್, ಸಾರಿಗೆ ನಿಗಮ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರವಣಪ್ಪ, ಉಪಾಧ್ಯಕ್ಷ ಅಶೋಕ್ ರಾ. ಭಜಂತಿ, ವೇಣುಗೋಪಾಲ್, ದಿವಾಕರ್, ಎಂ. ಸಿದ್ದಪ್ಪ ನೇಗಲಾಲ, ಎಂ. ಶಾರದಯ್ಯ, ರಾಮದಾಸ್, ರವಿಪ್ರಕಾಶ್‌, ಶ್ರೀನಿವಾಸ್, ವಿನಯ್ ಕುಮಾರ್, ಹುಸೇನ ಸಾಹೇಬ್‌ ಹಾಜರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಕಂಠನಾಯಕ ತಂಡದವರು 2 ಗಂಟೆಗಳ ಕಾಲ ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿದರು.

Post Comments (+)