ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆಗೆ ಸೆರೆಯಾದ ಹೆಣ್ಣು ಪುಂಡಾನೆ

ಮೇರಿ ಲ್ಯಾಂಡ್‌ ತೋಟದಲ್ಲಿ ಸೆರೆ
Last Updated 3 ಜೂನ್ 2019, 13:31 IST
ಅಕ್ಷರ ಗಾತ್ರ

ಸಿದ್ದಾಪುರ: ನೆಲ್ಯಹುದಿಕೇರಿಯಲ್ಲಿ ಇತ್ತೀಚೆಗೆ ಸೆರೆ ಹಿಡಿಯಲಾಗಿದ್ದ ಪುಂಡಾನೆಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಗಿದೆ ಎಂದು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ತಿಳಿಸಿದ್ದಾರೆ.

ನೆಲ್ಯಹುದಿಕೇರಿ, ಅಭ್ಯತ್ ಮಂಗಲ ಗ್ರಾಮದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾಡಾನೆ ಹಿಂಡು ಬೀಡುಬಿಟ್ಟು, ಕಾಫಿ ತೋಟದಲ್ಲಿ ದಾಂಧಲೆ ನಡೆಸುತ್ತಿತ್ತು. ಮಾತ್ರವಲ್ಲದೇ ಹಿಂಡಿನಲ್ಲಿ ಪುಂಡಾನೆಗಳು ಕೂಡ ಇದ್ದು, ಮನೆಗಳ ಬಳಿ ಬಂದು ಸಾರ್ವಜನಿಕರಿಗೆ ಉಪಟಳ ನೀಡುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನೆಲ್ಯಹುದಿಕೇರಿಯ ಮೇರಿ ಲ್ಯಾಂಡ್ ತೋಟದಲ್ಲಿದ್ದ ಅಂದಾಜು 20 ವರ್ಷ ಪ್ರಾಯದ ಹೆಣ್ಣಾನೆ ಹಾಗೂ ಚೆಟ್ಟಳ್ಳಿಯ ಕಾಫಿ ಬೋರ್ಡ್ ಕಾಫಿ ತೋಟದಲ್ಲಿದ್ದ ಅಂದಾಜು 30 ವರ್ಷ ಪ್ರಾಯದ ಸಲಗವನ್ನು ಸೆರೆ ಹಿಡಿದಿದ್ದರು.

ನೆಲ್ಯಹುದಿಕೇರಿಯಲ್ಲಿ ಪುಂಡಾನೆಯನ್ನು ಸೆರೆಹಿಡಿದ ಬಳಿಕ ಅರಣ್ಯ ಇಲಾಖಾಧಿಕಾರಿಗಳು ಪುಂಡಾನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸಾಗಿಸಿ, ಪಳಗಿಸುವುದಾಗಿ ಮಾಹಿತಿ ನೀಡಿದ್ದರು. ಆದರೇ ಪುಂಡಾನೆಯು ದುಬಾರೆಗೆ ಸಾಗಿಸದೇ ಬೇರೆಡೆಗೆ ಕೊಂಡೊಯ್ಯಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸ್ಥಳೀಯರು ಆರೋಪಿಸಿದ್ದು, ಇದೀಗ ಪುಂಡಾನೆಯನ್ನು ನಾಗರಹೊಳೆ ಅರಣ್ಯಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್, ನೆಲ್ಯಹುದಿಕೇರಿಯಲ್ಲಿ ಸೆರೆ ಹಿಡಿಯಲಾದ ಪುಂಡಾನೆಯು ಅಲ್ಲಿನ ಸ್ಥಳೀಯರಿಗೆ ಉಪಟಳ ನೀಡುತ್ತಿತ್ತು. ಮೇಲಧಿಕಾರಿಗಳ ಸಲಹೆಯನ್ನು ಪಡೆದು, ನಾಗರಹೊಳೆಯ ಅರಣ್ಯಕ್ಕೆ ಬಿಡಲಾಗಿದೆ. ಅಲ್ಲಿನ ಕಾಡಾನೆಗಳ ಹಿಂಡಿನ ಜೊತೆ ಸೆರೆ ಹಿಡಿದ ಕಾಡಾನೆ ಸೇರಿಕೊಳ್ಳಲಿದೆ. ಅರಣ್ಯಕ್ಕೆ ಬಿಟ್ಟರೂ ನಾಡಿಗೆ ಬರುವ ಹಾಗೂ ಸಾರ್ವಜನಿಕರಿಗೆ ಉಪಟಳ ನೀಡುವ ಪುಂಡಾನೆಗಳನ್ನು ಕ್ರಾಲ್ ನಲ್ಲಿ ಬಂಧಿಸಿ, ಪಳಗಿಸಲಾಗುತ್ತದೆ. ಆದರೆ, ನೆಲ್ಯಹುದಿಕೇರಿಯಲ್ಲಿ ಹಿಡಿದ ಪುಂಡಾನೆಯು ಹೆಣ್ಣಾನೆಯಾಗಿದ್ದು, ಅರಣ್ಯದಲ್ಲಿರುವ ಕಾಡಾನೆಗಳೊಂದಿಗೆ ಇರಲಿದೆ ಎಂದರು.

ಹಲಸು, ಬಿದಿರು ಬಿತ್ತನೆ: ಅರಣ್ಯದಲ್ಲಿ ಕಾಡಾನೆಗಳು ಸೇರಿದಂತೆ ವನ್ಯ ಮೃಗಗಳಿಗೆ ಬೇಕಾದ ಹಲಸು, ಬಿದಿರು ಸೇರಿದಂತೆ ಹಣ್ಣುಗಳ ಬೀಜವನ್ನು ಬಿತ್ತಲಾಗುವುದು ಎಂದು ಸಂತೋಷ್ ತಿಳಿಸಿದರು. ಪ್ರತಿ ವರ್ಷವೂ ಕೂಡ ಮಣ್ಣಿನ ಉಂಡೆಯಲ್ಲಿ ಹಲವು ಬಗೆಯ ಗಿಡಗಳ ಬೀಜವನ್ನು ಹಾಕಿ, ಅರಣ್ಯಕ್ಕೆ ಎಸೆಯಲಾಗುತ್ತಿದೆ. ಪ್ರಸಕ್ತ ವರ್ಷದಲ್ಲೂ ಇದನ್ನು ಮಾಡಲಾಗುವುದು. ಮಾತ್ರವಲ್ಲದೇ ಅರಣ್ಯದಲ್ಲಿ ಖಾಲಿ ಇರುವ ಜಾಗಗಳಲ್ಲಿ ಕಾಡು ಪ್ರಾಣಿಗಳ ಆಹಾರಕ್ಕೆ ಬೇಕಾಗಿರುವ ಗಿಡಗಳನ್ನು ನೆಡಲಾಗುವುದು ಎಂದರು. ಅದರೊಂದಿಗೆ ಪ್ರತಿ ವರ್ಷವೂ ಕೂಡ ಅರಣ್ಯದ ಕೆರೆಗಳ ಹೂಳೆತ್ತುವ ಕೆಲಸವನ್ನು ಮಾಡಲಾಗುತ್ತಿದ್ದು, ಈ ವರ್ಷವೂ ಹೂಳೆತ್ತುವ ಮೂಲಕ ಮಳೆಗಾಲದಲ್ಲಿ ನೀರು ಶೇಖರಣೆಯಾಗಲು ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ರೈತ ಸಂಘ ಒತ್ತಾಯ: ಅರಣ್ಯ ಇಲಾಖೆಯು ನೆಲ್ಯಹುದಿಕೇರಿಯಲ್ಲಿ ಪುಂಡಾನೆಯನ್ನು ಸೆರೆಹಿಡಿಯಲಾಗಿ, ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸುವುದಾಗಿ ತಿಳಿಸಿದ್ದರು. ಆದರೇ ನಾಗರಹೊಳೆ ಅರಣ್ಯಕ್ಕೆ ಬಿಡಲಾಗಿದೆ. ಪುಂಡಾನೆಯು ಹೆಣ್ಣಾನೆಯಾಗಿದ್ದು, ಪಳಗಿಸಿದ್ದಲ್ಲಿ ಅರಣ್ಯ ಇಲಾಖೆಗೆ ಅನುಕೂಲವಾಗುತ್ತಿತ್ತು ಎಂದು ರೈತ ಸಂಘದ ಪ್ರಮುಖರಾದ ಮನು ಸೋಮಯ್ಯ, ಪ್ರವೀಣ್ ಬೋಪಯ್ಯ, ಆಲೆಮಾಡ ಮಂಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ವಿರಾಜಪೇಟೆ ತಾಲ್ಲೂಕಿನಲ್ಲೂ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ಕಾರ್ಯಾಚರಣೆ ಕೈಗೊಂಡು ಪುಂಡಾನೆಗಳನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT