‘ಮಕ್ಕಳ ಮೇಲೆ ಒತ್ತಡ ಹೇರಬಾರದು’

ಭಾನುವಾರ, ಜೂಲೈ 21, 2019
25 °C
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮನವಿ

‘ಮಕ್ಕಳ ಮೇಲೆ ಒತ್ತಡ ಹೇರಬಾರದು’

Published:
Updated:
Prajavani

ಮಡಿಕೇರಿ: ಮಕ್ಕಳನ್ನು ದುಡಿಮೆಗೆ ದೂಡುವುದು ಮತ್ತು ಅವರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಮಕ್ಕಳ ಕನಸನ್ನು ಪೋಷಿಸಬೇಕು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಸಲಹೆ ನೀಡಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಆಶ್ರಯದಲ್ಲಿ ಸೋಮವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹದಿನಾಲ್ಕು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಸಿಗಬೇಕು. ಇದರಿಂದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬಹುದು. ಇಂದಿನ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣ ಎನ್ನುವುದು ಒಂದು ಪ್ರಮುಖ ಅಸ್ತ್ರ. ಎಲ್ಲ ಮಕ್ಕಳು ಶಿಕ್ಷಣವಂತರಾದರೆ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ಈ ದಿಕ್ಕಿನಲ್ಲಿ ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಹಲವು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದೆ ಎಂದು ಹೇಳಿದರು.

ವಿಶ್ವದಲ್ಲಿ 15.2 ಕೋಟಿ ಮಕ್ಕಳು ಹಾಗೂ ದೇಶದಲ್ಲಿ 1 ಕೋಟಿ ಹೆಚ್ಚು ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದು ಮಕ್ಕಳ ಭವಿಷ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದು ಎಚ್ಚರಿಸಿದರು.

ಬಾಲ ಕಾರ್ಮಿಕರು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಬೇಕು. ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಮಕ್ಕಳು ಕನಸುಗಳಿಲ್ಲದೆ ಬದುಕುತ್ತಿದ್ದಾರೆ. ಅವರಿಗೆ ಕನಸುಗಳನ್ನು ಕಟ್ಟಿಕೊಳ್ಳಲು ಅವಕಾಶಗಳೇ ಇಲ್ಲ. ಈ ಮಕ್ಕಳ ಬಗ್ಗೆ ಪೋಷಕರು ಸಹ ಅಷ್ಟಾಗಿ ಗಮನಹರಿಸದೇ ಇರುವುದು ಮಕ್ಕಳು ಕನಸುಗಳೇ ಇಲ್ಲದೆ ಜೀವಿಸುವ ಪರಿಸ್ಥಿತಿಯಾಗಿದೆ ಎಂದು ಹೇಳಿದರು.

ಇನ್ನು ನಗರ ಪ್ರದೇಶದಲ್ಲಿ ಇದಕ್ಕೆ ವಿರುದ್ಧವಾಗಿದೆ. ಅಂದರೆ, ಅಲ್ಲಿ ಮಕ್ಕಳಿಗಿಂತ ಪೋಷಕರೇ ಕನಸುಗಳನ್ನು ಕಟ್ಟಿಕೊಂಡು ತಮ್ಮ ಮಕ್ಕಳು ಇಂತಹ ಶಾಲೆಯಲ್ಲಿ ಓದಬೇಕು. ಇದೇ ಹುದ್ದೆಗೆ ಹೋಗಬೇಕು. ಇದನ್ನೇ ಮಾಡಬೇಕು ಎಂದು ಅದನ್ನು ಸಾಧಿಸುವಂತೆ ಮಗುವಿನ ಮೇಲೆ ಒತ್ತಡವನ್ನು ಹೇರುತ್ತಿರುತ್ತಾರೆ. ಇದರಿಂದ ಮಗುವಿಗೆ ಯಾವ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇದೆ ಎನ್ನುವುದನ್ನೇ ಮರೆತಂತೆ ಕಾಣುತ್ತದೆ ಎಂದು ತಿಳಿಸಿದರು.

ವಕೀಲರಾದ ಎಂ.ಎ.ನಿರಂಜನ ಮಾತನಾಡಿ, ಬಾಲಕಾರ್ಮಿಕ ಕಾಯ್ದೆ ತಿದ್ದುಪಡಿ ಕಾಯ್ದೆ ಅನ್ವಯ ಬಾಲ ಕಾರ್ಮಿಕರಿಂದ  ದುಡಿಸಿಕೊಂಡವರಿಗೆ 6 ತಿಂಗಳಿಂದ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ₹ 20 ಸಾವಿರದಿಂದ ₹ 50 ಸಾವಿರದ ತನಕ ದಂಡ ಅಥವಾ ಎರಡರಿಂದಲೂ ದಂಡನೆಗೆ ಒಳಗಾಗಬೇಕಾಗುತ್ತದೆ ಎಂದರು.

ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಸಹ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಇಂದು ಶಾಲೆಬಿಟ್ಟ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳ ಪ್ರಮಾಣ ಕಡಿಮೆಯಾಗಿದೆ. ಆದರೂ, ಸಹ ಸಂಪೂರ್ಣವಾಗಿ ನಿರ್ಮೂಲನೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸಲು ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಸಹ ಶ್ರಮಿಸುತ್ತಿದ್ದು, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಪ್ರತಿವರ್ಷವು ಒಂದು ಘೋಷವಾಕ್ಯದೊಂದಿಗೆ ವಿಶ್ವ ಬಾಲಕಾರ್ಮಿಕ ದಿನವನ್ನು ಆಚರಿಸುತ್ತಿದೆ ಎಂದರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಪ್ರಮಾಣ ವಚನ ಬೋಧಿಸಿದರು.

ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ಮಾತನಾಡಿದರು. ಒಡಿಪಿ ಸಂಸ್ಥೆಯ ಜಾಯ್ಸ್ ಮೆನೇಜಸ್, ತಾಲ್ಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ, ಮಹಮ್ಮದ್ ಶಿರಾಜ್ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !