ಮಂಗಳವಾರ, ಸೆಪ್ಟೆಂಬರ್ 17, 2019
21 °C
ರಾಬಿನ್‌ ದೇವಯ್ಯ– ಚಿದ್ವಿಲಾಸ್ ನಡುವೆ ಪೈಪೋಟಿ

ದಸರಾ ಕಾರ್ಯಾಧ್ಯಕ್ಷ ಸ್ಥಾನ ಗೊಂದಲ

Published:
Updated:
Prajavani

ಮಡಿಕೇರಿ: ದಸರಾ ಕಾರ್ಯಾಧ್ಯಕ್ಷ ಸ್ಥಾನದ ಗೊಂದಲ ಮುಂದುವರಿದಿದ್ದು ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆದ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಕಾರ್ಯಾಧ್ಯಕ್ಷ ಸ್ಥಾನದ ಪೈಪೋಟಿ ನಡುವೆ ಸಭೆ ಆರಂಭವಾಯಿತು.

ಆರಂಭದಲ್ಲೇ ಹಿಂದಿನ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಅವರು, ಬೈಲಾದಲ್ಲಿರುವ ಗೊಂದಲ ಸರಿಪಡಿಸಬೇಕು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅನೀಸ್‌ ಕಣ್ಮಣಿ ಜಾಯ್‌, ನಗರಸಭೆಯಲ್ಲಿ ಅಧ್ಯಕ್ಷರು – ಉಪಾಧ್ಯಕ್ಷರು ಇಲ್ಲ. ಹೀಗಾಗಿ, ಜಿಲ್ಲಾಧಿಕಾರಿಯೇ ಮಹಾ ಪೋಷಕರು ಹಾಗೂ ದಸರಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಇನ್ನುಳಿದ ಪದಾಧಿಕಾರಿಗಳ ಆಯ್ಕೆ ಮಾಡಬೇಕಿದೆ’ ಎಂದರು. 

ದಶಮಂಟಪ ಸಮಿತಿ ಅಧ್ಯಕ್ಷ ರಂಜಿತ್‌ ಅವರು ದಸರಾ ಸಮಿತಿ ಕಾರ್ಯಾಧ್ಯಕ್ಷರಾಗಿ ರಾಬಿನ್ ದೇವಯ್ಯ ಅವರನ್ನು ದಶಮಂಟಪ ಸಮಿತಿಯಿಂದ ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಗೊಂದಲ ಬೇಡ ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಂ. ನಂದಕುಮಾರ್, ದಸರಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಗರಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿರುವ ಸಭೆಯಲ್ಲೇ ನಡೆಯಬೇಕು ಎಂದು ಆಗ್ರಹಿಸಿದರು.

ಬೈಲಾದಲ್ಲಿ ಚುನಾವಣೆ ಬಗ್ಗೆ ಪ್ರಸ್ತಾಪವಿದ್ದರೂ ಮತದಾರರು ಯಾರು ಎಂಬ ಬಗ್ಗೆ ಪ್ರಸ್ತಾಪವಿಲ್ಲ. ಹಾಗಾಗಿ, ಬೈಲಾ ತಿದ್ದುಪಡಿ ಆಗುವ ತುರ್ತು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಜಿ.ಚಿದ್ವಿಲಾಸ್ ಮಾತನಾಡಿ, ‘ದಶಮಂಟಪ ಸಮಿತಿಯಿಂದ ಆಯ್ಕೆಯಾಗುವ ವ್ಯಕ್ತಿ ಕಾರ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯೇ ಹೊರತು ಮಹಾಸಭೆಯಲ್ಲಿ ಚುನಾಯಿತ ಆಗುವವರೆಗೆ ಕಾರ್ಯಾಧ್ಯಕ್ಷರಾಗಲು ಸಾಧ್ಯವಿಲ್ಲ’ ಎಂದರು.

ಇದಕ್ಕೆ ಧ್ವನಿಗೂಡಿಸಿದ ಮಾಜಿ ನಗರಸಭಾ ಸದಸ್ಯ ಎಸ್.ಐ.ಮುನೀರ್ ಅಹಮ್ಮದ್ ಮಾತನಾಡಿ, ಕಾರ್ಯಾಧ್ಯಕ್ಷರ ಆಯ್ಕೆಯ ಚುನಾವಣೆ ನಡೆಯಬೇಕಿದ್ದು, ಜಿ.ಚಿದ್ವಿಲಾಸ್ ಅವರ ಹೆಸರು ಸೂಚಿಸುವುದಾಗಿ ತಿಳಿಸಿದರು.

ಆಗ ಅನೀಸ್ ಕಣ್ಮಣಿ ಜಾಯ್‌ ಮಾತನಾಡಿ, ರಾಬಿನ್ ದೇವಯ್ಯ ಹಾಗೂ ಚಿದ್ವಿಲಾಸ್ ಪರಸ್ಪರ ಮಾತುಕತೆಯಿಂದ ಕಾರ್ಯಾಧ್ಯಕ್ಷ ಸ್ಥಾನದ ಗೊಂದಲ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಮುಂದಿನ ನವೆಂಬರ್‌ನಲ್ಲಿ ಹೊಸ ಬೈಲಾ ತಿದ್ದುಪಡಿಗಾಗಿ ಸಮಿತಿ ರೂಪಿಸಲಾಗುವುದು ಎಂದು ತಿಳಿಸಿದರು.

ಕಾರ್ಯಾಧ್ಯಕ್ಷ ಸ್ಥಾನಕ್ಕೆ ಯಾವುದೇ ಪರಿಹಾರ ಕಾಣಲಿಲ್ಲ. ಆಗ ಹಿಂದೆ ನಡೆದುಕೊಂಡು ಬಂದ ರೀತಿಯಲ್ಲಿ ದಶಮಂಟಪ ಸಮಿತಿ ಅಭ್ಯರ್ಥಿ ರಾಬಿನ್ ದೇವಯ್ಯ ಅವರು ಕಾರ್ಯಾಧ್ಯಕ್ಷರಾಗಲಿ ಎಂದು ಜಿಲ್ಲಾಧಿಕಾರಿ ಹೇಳಿದರು. ಅದಕ್ಕೆ ಆಕ್ಷೇಪಿಸಿ, ಚಿದ್ವಿಲಾಸ್, ಚುನಾವಣಾ ಪ್ರಕ್ರಿಯೆಯಲ್ಲಿ ಇಬ್ಬರು ಅಭ್ಯರ್ಥಿಗಳು ಇರುವಾಗ ಒಬ್ಬರ ಹೆಸರು ಘೋಷಿಸಲು ಸಾಧ್ಯವಿಲ್ಲ. ಆರ ರೀತಿಯಾದರೆ ತಾನು ನ್ಯಾಯಾಲಯದ ಮೊರೆ ಹೋಗಲು ಸಿದ್ಧ ಎಂದು ಎಚ್ಚರಿಸಿದರು.

ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ದಶಮಂಟಪ ಸಮಿತಿ ಅಧ್ಯಕ್ಷ ರಂಜಿತ್ ದಸರಾ ಸಮಿತಿ ಮಾಜಿ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್, ಸಿಇಒ ಕೆ.ಲಕ್ಷ್ಮಿಪ್ರಿಯಾ, ನಗರಸಭೆ ಪೌರಾಯುಕ್ತ ರಮೇಶ್‌ ಕುಮಾರ್ ಉಪಸ್ಥಿತರಿದ್ದರು. 

Post Comments (+)