ಬುಧವಾರ, ನವೆಂಬರ್ 13, 2019
21 °C
ಕೊಡವ ಕೇರಿ ಕೈಲ್‌ ಮುಹೂರ್ತ ಕಾರ್ಯಕ್ರಮದಲ್ಲಿ ಕೆ.ಎ.ದೇವಯ್ಯ ಕರೆ

ಶಿಕ್ಷಣಕ್ಕೆ ತಕ್ಕಂತೆ ಉನ್ನತ ಹುದ್ದೆ ಪಡೆಯಿರಿ

Published:
Updated:
Prajavani

ಮಡಿಕೇರಿ: ‘ಕೊಡವ ಸಮುದಾಯದ ಯುವಕರು, ಉತ್ತಮ ಶಿಕ್ಷಣ ಪಡೆದು ಸರ್ಕಾರಿ ಉದ್ಯೋಗ ಪಡೆಯಲು ಪ್ರಯತ್ನಿಸಬೇಕು’ ಎಂದು ಲೀಡ್ ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಕೆ.ಎ. ದೇವಯ್ಯ ಹೇಳಿದರು. 

ನಗರದ ಕೊಡವ ಸಮಾಜದಲ್ಲಿ ಮಂಗಳವಾರ ಶ್ರೀಇಗ್ಗುತಪ್ಪ ಕೊಡವ ಕೇರಿ ವತಿಯಿಂದ ನಡೆದ ಕೈಲ್‌ ಮುಹೂರ್ತ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ಉದ್ಯೋಗ, ಬ್ಯಾಂಕ್ ಕ್ಷೇತ್ರದಲ್ಲಿ ಕೊಡವ ಸಮುದಾಯದ ಯುವಕರು ಹೆಚ್ಚಾಗಿ ಉದ್ಯೋಗ ಪಡೆಯುತ್ತಿಲ್ಲ. ಶಿಕ್ಷಣಕ್ಕೆ ತಕ್ಕಂತೆ ಉನ್ನತ ಉದ್ಯೋಗಗಳನ್ನು ಪಡೆಯಲು ಯತ್ನಿಸಬೇಕಿದೆ’ ಎಂದು ಸಲಹೆ ನೀಡಿದರು.

‘ಬ್ಯಾಂಕಿಂಗ್‌ ಕ್ಷೇತ್ರ, ಕೆಪಿಎಸ್‌ಸಿ, ಕೆಎಎಸ್, ಐಪಿಎಸ್ ಪರೀಕ್ಷೆಗಳನ್ನು ಸಮುದಾಯದ ಮಕ್ಕಳು ಬರೆಯುವುದಕ್ಕೆ ಹಿಂದೇಟು ಹಾಕುವ ಹವ್ಯಾಸವನ್ನು ಬಿಡಬೇಕಿದೆ. ಇನ್ನು ಕೊಡಗಲ್ಲಿರುವ ಉತ್ತಮ ಅವಕಾಶಗಳಲ್ಲಿಯೇ ಸ್ವಯಂ ಉದ್ಯೋಗಕ್ಕಾಗಿ ಶ್ರಮವನ್ನು ವಿನಿಯೋಗಿಸಿದಲ್ಲಿ ಯಶಸ್ಸು ಸಾಧಿಸಬಹುದು’ ಎಂದು ದೇವಯ್ಯ ಸಲಹೆ ನೀಡಿದರು.

‘ಕೊಡಗಿನಲ್ಲಿ ಕೃಷಿಯೊಂದಿಗೆ ಸ್ವಯಂ ಉದ್ಯೋಗದತ್ತ ಹೆಚ್ಚು ಒಲವು ಮೂಡಿಸಿಕೊಳ್ಳಿ. ಬ್ಯಾಂಕ್‌ಗಳು ನೀಡುವ ಸಾಲ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಫಲರಾಗಿ’ ಎಂದು ದೇವಯ್ಯ ಕರೆ ನೀಡಿದರು.

ಸಂಘಟನೆಯ ಜತೆಗೆ, ಕೊಡವರ ಭಾಷೆ, ಸಂಸ್ಕೃತಿ, ಆಚಾರ- ವಿಚಾರವನ್ನು ಉಳಿಸಿ–ಬೆಳೆಸುವ ಕಾರ್ಯವನ್ನು ಮುಂದುವರಿಸಬೇಕು. ಪ್ರಸಕ್ತ ದಿನಗಳಲ್ಲಿ ಕೊಡಗಿನಲ್ಲಿ ಕೊಡವರ ಸಂಖ್ಯೆ ಕ್ಷೀಣಿಸುತ್ತಿದೆ. ಬದಲಿಗೆ ಹೊರ ಜಿಲ್ಲೆ, ರಾಜ್ಯ ಅಥವಾ ವಿದೇಶಗಳಲ್ಲಿ ಜನಾಂಗ ಬಾಂಧವರು ಹೆಚ್ಚು ನೆಲೆಸುತ್ತಿದ್ದಾರೆ. ಇವರಲ್ಲಿಯೂ ಕೊಡಗಿನ ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಸಂಘ–ಸಂಸ್ಥೆಗಳು ನೆರವಾಗಬೇಕು’ ಎಂದರು.

ಕೊಡವ ಕೇರಿ ಅಧ್ಯಕ್ಷೆ ಕಾವೇರಿ ಪೂಣಚ್ಚ ಮಾತನಾಡಿ, ‘ಕೊಡವರ ಕೇರಿಯೆಂದರೆ ಒಂದು ಸಂಸಾರವಿದ್ದಂತೆ. ಕೇರಿ ವ್ಯಾಪ್ತಿಯಲ್ಲಿ ಏನೇ ಕಷ್ಟ– ನಷ್ಟಕ್ಕೆ ಎಲ್ಲರೂ ಸ್ಪಂದಿಸಬೇಕು’ ಎಂದು ಕೋರಿದರು.

ಸಮುದಾಯ ಬಾಂಧವರು ಸದಸ್ಯತ್ವವನ್ನು ಪಡೆದುಕೊಂಡು ಸಂಘದ ಇತರ ಕಾರ್ಯಕ್ರಮಗಳಿಗೂ ಸಹಕಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಮುಂದೆಯೂ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಕೇರಿಯ ಖಜಾಂಜಿ ಪಿ.ಹರೀಶ್ ಮುತ್ತಪ್ಪ ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಬೊಳ್ಳಚಂಡ ಲೀಲಾ ಸುಬ್ಬಯ್ಯ ವಾರ್ಷಿಕ ವರದಿ ಓದಿದರು. ಇನ್ನು 10ನೇ ತರಗತಿ (ಸಿಬಿಎಸ್‌ಸಿ ಪರೀಕ್ಷೆ) ಶೇ 95 ಅಂಕಗಳಿಸಿದ ಬಾಚನಂಡ ಬಿದೀಶ್‌ ಹಾಗೂ ಅಸಾಧಾರಣ ಪ್ರತಿಭೆಗಾಗಿ ವಿದ್ಯಾರ್ಥಿ ಕಾರ್ತಿಕ್‌ ಕುಟ್ಟಪ್ಪಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪದಾಧಿಕಾರಿಗಳಾದ ನಂಜಪ್ಪ, ಕುಮಾರ್‌, ಬಿ.ಪ್ರಕಾಶ್‌ ಹಾಜರಿದ್ದರು.

ಕೊಡವರ ಆಹಾರ ಪದ್ಧತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮೇಳದ ಸಂದರ್ಭ ಆಹಾರ ಪ್ರದರ್ಶನ ಆಯೋಜಿಸಲಾಗಿತ್ತು. ಗಾಯಕ ಪಂಚಾಮ್‌ ತ್ಯಾಗರಾಜ್‌ ಅವರು, ಕೊಡವ ಗೀತೆಗಳನ್ನು ಹಾಡಿ ರಂಜಿಸಿದರು. 

ಪ್ರತಿಕ್ರಿಯಿಸಿ (+)