ಶುಕ್ರವಾರ, ನವೆಂಬರ್ 15, 2019
22 °C
ಜಿಲ್ಲಾ ಜೆಡಿಎಸ್ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ನೆರೆ ಸಂತ್ರಸ್ತರ ಮನವಿ

ಪಟ್ಟಿಯಿಂದ ಸಂತ್ರಸ್ತರು ಹೊರಕ್ಕೆ: ಆಕ್ರೋಶ

Published:
Updated:
Prajavani

ಮಡಿಕೇರಿ: ನಿರಾಶ್ರಿತರ ಪಟ್ಟಿಯಿಂದ ಕೈಬಿಡಲಾಗಿದ್ದು ನಮಗೂ ಮನೆ ಮನೆ ಕೊಡಬೇಕು ಎಂದು ಹೆಮ್ಮೆತ್ತಾಳು ಗ್ರಾಮದ ನಿವಾಸಿಗಳು, ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಅವರಿಗೆ ಮನವಿ ಸಲ್ಲಿಸಿದರು.

2018ರ ಪ್ರಕೃತಿ ವಿಕೋಪಕ್ಕೆ ತುತ್ತಾದ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮೆತ್ತಾಳು ಗಾಮಸ್ಥರಿಗೆ ಸರ್ಕಾರದಿಂದ ಇನ್ನು ಮನೆ ನಿರ್ಮಾಣವಾಗಿಲ್ಲ. ಕೆಲವು ಸಂತ್ರಸ್ತರಿಗೆ ನಿರಾಶ್ರಿತ ಮನೆಗಳ ಪಟ್ಟಿಯಿಂದ ಏಕಾಏಕಿ ಹೆಸರು ತೆಗೆದುಹಾಕಲಾಗಿದೆ ಎಂದು ನೋವು ತೋಡಿಕೊಂಡರು.

ಮನೆ ನಿರ್ಮಾಣಕ್ಕೆ ಯಾವುದೇ ಸ್ಥಳ ಗುರುತಿಸಿ ಕೊಟ್ಟರೂ, ಸುರಕ್ಷಿತ ಸ್ಥಳವಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಿದ್ದರೆ ಸರ್ಕಾರವೇ ಜಾಗ ಗುರುತಿಸಿ ಕೊಡಬೇಕು. ಅಪಾಯವಾದಲ್ಲಿ ಜಿಲ್ಲಾಡಳಿತವೇ ಕಾರಣವೆಂದೂ ನಮಗೊಂದು ದೃಢೀಕರಣ ಪತ್ರ ನೀಡಲಿ ಮಕ್ಕಂದೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸಂದೇಶ್ ಎಚ್ಚರಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಹೆಮ್ಮೆತ್ತಾಳು ಗ್ರಾಮದ ನಿವಾಸಿಗಳಿಗೆ ಇನ್ನು ಮನೆಗಳು ವಿತರಣೆಯಾಗದೇ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದ ಸಂದರ್ಭ ಸರ್ಕಾರ ಬಾಡಿಗೆ ಮನೆಯಲ್ಲಿರುವಂತೆ ಸೂಚಿಸಿ ತಿಂಗಳಿಗೆ ಸಾವಿರದಂತೆ 3 ತಿಂಗಳು ಬಾಡಿಗೆ ಹಣ ನೀಡಿತ್ತು. ಆದರೆ, ಇದೀಗ ಏಕಾಏಕಿ ಸಂತ್ರಸ್ತರ ಪಟ್ಟಿಯಿಂದ ಹೆಸರು ತೆಗೆಯಲಾಗಿದೆ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಅವರು ಸಮಸ್ಯೆ ಪರಿಹರಿಸಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.

ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ ಅಚ್ಚಪ್ಪ, ಪ್ರಧಾನ ಕಾರ್ಯದರ್ಶಿ ಸುನೀಲ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)