ಮಾಜಿ ಸೈನಿಕರಿಗೆ ಪಿಂಚಣಿ ಸೌಲಭ್ಯ ನೀಡಲು ಬದ್ಧ

7
ಅದಾಲತ್‌ನಲ್ಲಿ ಸಂಜೀವ್‌ ಮಿತ್ತಲ್‌ ಭರವಸೆ; ರಕ್ಷಣಾ ಇಲಾಖೆಯ ಲೆಕ್ಕಪತ್ರ ವಿಭಾಗ ಆಯೋಜನೆ

ಮಾಜಿ ಸೈನಿಕರಿಗೆ ಪಿಂಚಣಿ ಸೌಲಭ್ಯ ನೀಡಲು ಬದ್ಧ

Published:
Updated:
Prajavani

ಮಡಿಕೇರಿ: ನಗರದ ಕೆಳಗಿನ ಗೌಡ ಸಮಾಜದಲ್ಲಿ ಎರಡು ದಿನಗಳವರೆಗೆ ನಡೆಯುವ ಮಾಜಿ ಸೈನಿಕರ ಪಿಂಚಣಿ ಅದಾಲತ್‌ಗೆ ಗುರುವಾರ ಚಾಲನೆ ದೊರೆಯಿತು.

ರಕ್ಷಣಾ ಇಲಾಖೆಯ ಲೆಕ್ಕಪತ್ರ (ಪಿಂಚಣಿ) ವಿಭಾಗ ಆಯೋಜಿಸಿದ್ದ ಅದಾಲತ್‌ಗೆ ರಕ್ಷಣಾ ಇಲಾಖೆಯ ಹೆಚ್ಚುವರಿ ನಿಯಂತ್ರಣಾಧಿಕಾರಿ ಸಂಜೀವ್‌ ಮಿತ್ತಲ್ ಅವರು ಚಾಲನೆ ನೀಡಿದರು. ಅದಾಲತ್‌ನಲ್ಲಿ ನಿವೃತ್ತ ಸೈನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಇದುವರೆಗೂ ಸೌಲಭ್ಯಗಳು ಸಿಗದಿರುವ ಕುರಿತು ಸಭೆಯಲ್ಲಿ ಅಸಮಾಧಾನ ಹೊರಹಾಕಿದರು.

ಸಂಜೀವ್‌ ಮಿತ್ತಲ್ ಮಾತನಾಡಿ, ‘ದೇಶಕ್ಕೆ ಅತಿಹೆಚ್ಚು ಸೈನಿಕರನ್ನು ನೀಡಿದ ನಾಡು ಕೊಡಗು. ದೇಶ ಸೇವೆ ಮಾಡಿದವರಿಗೆ ಪಿಂಚಣಿ ಸೌಲಭ್ಯದಲ್ಲಿ ಯಾವ ಕೊರತೆಯೂ ಆಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಸೈನಿಕರು ನಿವೃತ್ತಿಯ ನಂತರ ಅವರಿಗೆ ಅಥವಾ ಅವರ ಕುಟುಂಬಕ್ಕೆ ಸಿಗಬೇಕಾದ ಪಿಂಚಣಿ, ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಇಲಾಖೆ ರಕ್ಷಣಾ ಸಚಿವಾಲಯ ಬದ್ಧವಾಗಿದೆ ಎಂದು ಹೇಳಿದರು.

ಸಮಸ್ಯೆಗಳಿದ್ದರೆ ಈ ಅದಾಲತ್‌ನಲ್ಲಿ ಪರಿಹಾರ ಕಂಡುಕೊಳ್ಳಬಹುದು. ಪ್ರತಿ ಜಿಲ್ಲೆಯಲ್ಲೂ ನಡೆಯುವ ಅದಾಲತ್‌ನಲ್ಲಿ ಮಾಜಿ ಸೈನಿಕರು ಪಾಲ್ಗೊಂಡು ಸಮಸ್ಯೆ ಕುರಿತು ಬೆಳಕು ಚೆಲ್ಲಬಹುದು ಎಂದರು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕಿ ಗೀತಾ ಎಂ. ಶೆಟ್ಟಿ ಮಾತನಾಡಿ, ‘ವಾಯುದಳ, ನೌಕಾದಳ, ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮಾಜಿ ಸೈನಿಕರ ಪಿಂಚಣಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಇಲಾಖೆ ಯೋಜನೆ ರೂಪಿಸಿದೆ’ ಎಂದು ತಿಳಿಸಿದರು.

ರಕ್ಷಣಾ ಇಲಾಖೆಯ ಪಿಂಚಣಿ ವಿಭಾಗದ ಪ್ರಧಾನ ನಿಯಂತ್ರಣಾಧಿಕಾರಿ ಪ್ರವೀಣ್‌ಕುಮಾರ್ ಮಾತನಾಡಿ, ‘ಪಿಂಚಣಿ ಅದಾಲತ್‌ ಒಂದು ಪರಿಣಾಮಕಾರಿ ಆಂದೋಲನ. ದೇಶದಲ್ಲೆಡೆ ಪಿಂಚಣಿ ಅದಾಲತ್‌ನಲ್ಲಿ ಭಾಗವಹಿಸುವ ಮೂಲಕ ಪಿಂಚಣಿದಾರರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು’ ಎಂದರು.

ಬೆಂಗಳೂರಿನ ರಕ್ಷಣಾ ಇಲಾಖೆ ಲೆಕ್ಕಪತ್ರ ವಿಭಾಗದ ಅಧಿಕಾರ ವಿಭಾಸೂದ್‌, ಎಂ.ಎಸ್‌. ಲೋಲಾಕ್ಷ, ಬಿ.ಎಂ.ರಾವ್‌, ರಂಜನ್‌ ಕುಮಾರ್‌ ಹಾಜರಿದ್ದರು.

₹1.8 ಲಕ್ಷ ಕೋಟಿ ಅನುದಾನ
ರಕ್ಷಣಾ ಇಲಾಖೆ ವ್ಯಾಪ್ತಿಯಲ್ಲಿ ₹28 ಲಕ್ಷಕ್ಕೂ ಅಧಿಕ ಹೆಚ್ಚು ಪಿಂಚಣಿದಾರರಿದ್ದಾರೆ. ಅವರಿಗೆ ಪಿಂಚಣಿ ನೀಡಲು ಈ ಆರ್ಥಿಕ ವರ್ಷದಲ್ಲಿ ₹1.8 ಲಕ್ಷ ಕೋಟಿಯಷ್ಟು ಅನುದಾನ ಮೀಸಲಿಡಲಾಗಿದೆ ಎಂದು ಬೆಂಗಳೂರಿನ ರಕ್ಷಣಾ ಇಲಾಖೆ ಲೆಕ್ಕಪತ್ರ ವಿಭಾಗದ ಅಧಿಕಾರಿ ಕೆ.ಸತೀಶ್‌ಬಾಬು ಮಾಹಿತಿ ನೀಡಿದರು.

ಆನ್‌ಲೈನ್, ಸಹಾಯವಾಣಿ ವ್ಯವಸ್ಥೆ
ಮಾಜಿ ಸೈನಿಕರ ಪಿಂಚಣಿ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ನೀಡಲು ಹಾಗೂ ಪಿಂಚಣಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಲು ಪ್ರತ್ಯೇಕ ಆನ್‌ಲೈನ್ ಹಾಗೂ ಟೋಲ್ ಫ್ರೀ ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ. 1800– 180– 5325ಕ್ಕೆ ಕರೆ ಮಾಡಿ, ಪಿಂಚಣಿದಾರರು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು ಎಂದು ಕೆ.ಸತೀಶ್‌ಬಾಬು ತಿಳಿಸಿದರು.

*
ಮೈಸೂರಿನಲ್ಲಿ ನಡೆದಿದ್ದ ಅದಾಲತ್‌ನಲ್ಲಿ ಕೊಡಗಿನ ಮಾಜಿ ಸೈನಿಕರು ಪ್ರವಾಹದಿಂದ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮಡಿಕೇರಿಯಲ್ಲೇ ಅದಾಲತ್‌ ಮಾಡಲಾಗುತ್ತಿದೆ.
-ಸಂಜೀವ್‌ ಮಿತ್ತಲ್, ಹೆಚ್ಚುವರಿ ನಿಯಂತ್ರಣಾಧಿಕಾರಿ, ರಕ್ಷಣಾ ಇಲಾಖೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !