ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಮಡಿಕೇರಿಗೆ ಮುಖ್ಯಮಂತ್ರಿ ಬಿಎಸ್‌ವೈ

‘ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ’ ನಿರ್ಮಾಣಕ್ಕೆ ಕೂಡಿ ಬಂತು ಕಾಲ
Last Updated 25 ಜನವರಿ 2020, 12:19 IST
ಅಕ್ಷರ ಗಾತ್ರ

‌ಮಡಿಕೇರಿ: ಬಹುಬೇಡಿಕೆಯ ‘ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ’ ನಿರ್ಮಾಣಕ್ಕೆ ಕೊನೆಗೂ ಕಾಲಕೂಡಿ ಬಂದಿದೆ. ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆ ಆವರಣದಲ್ಲೇ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಹೆಚ್ಚುವರಿ ಕಟ್ಟಡವು ನಿರ್ಮಾಣವಾಗಲಿದೆ. ಈಗ 300 ಹಾಸಿಗೆ ಸಾಮರ್ಥ್ಯ ಆಸ್ಪತ್ರೆಯಿದ್ದು, ಅದು 750 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜ.27ರಂದು ಮಧ್ಯಾಹ್ನ 1 ಗಂಟೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಡಿಕೇರಿಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದೇ ರೋಗಿಗಳಿಗೆ ಚಿಕಿತ್ಸೆಗೆ ತೊಂದರೆ ಅನುಭವಿಸುತ್ತಿದ್ದರು. ಕಳೆದ ವರ್ಷ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಆಂದೋಲನವೇ ನಡೆದಿತ್ತು. ಚಿತ್ರರಂಗದ ನಟರೂ ಈ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದರು.

ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಹಲವು ದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಯೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್‌ ನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಜಿಲ್ಲೆಯ ಶಾಸಕರು, ಸಂಸದರು ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ವೈದ್ಯಕೀಯ ಕಾಲೇಜಿನ ನಿರ್ದೇಶಕ ಕಾರ್ಯಪ್ಪ ಮಾತನಾಡಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ 2013–14ರಲ್ಲಿ ಸ್ಥಾಪನೆಯಾಗಿದೆ. ನಗರದ ಹೊರ ವಲಯದ ಕರ್ಣಂಗೇರಿ ಗ್ರಾಮದಲ್ಲಿ ನೂತನವಾಗಿ ₹ 227 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಅಂತಿಮ ಹಂತದಲ್ಲಿದೆ ಎಂದರು.

ಸಂಸ್ಥೆಯಲ್ಲಿ 2016–17ನೇ ಸಾಲಿನಿಂದ ₹ 150 ಸೀಟುಗಳ ಎಂಬಿಬಿಎಸ್ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭಗೊಂಡು ಒಟ್ಟು 600 ಎಂಬಿಬಿಎಸ್ ವಿದ್ಯಾರ್ಥಿಗಳು, ಸಿಪಿಎಸ್ ಸ್ನಾತಕೊತ್ತರ ವಿದ್ಯಾರ್ಥಿಗಳು, ಪ್ಯಾರ ಮೆಡಿಕಲ್ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

2016ನೇ ಸಾಲಿನಲ್ಲಿ ಜಿಲ್ಲಾ ಆಸ್ಪತ್ರೆ ಮಡಿಕೇರಿಯನ್ನು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಾಗಿ ಪರಿವರ್ತಿಸಿದ್ದು ಆಸ್ಪತ್ರೆಗೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳು, ವೈದ್ಯಕೀಯ ಉಪಕರಣಗಳು, ತಜ್ಞ ವೈದ್ಯರ ನೇಮಕಾತಿ, ಪ್ರಯೋಗಾಲಯ ಸಿಬ್ಬಂದಿ, ಶುಶ್ರೂಷಕ ಮತ್ತು ಗ್ರೂಪ್ ‘ಡಿ’ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಬೋಧಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಎಲ್ಲಾ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗದವರು ಅಂದಾಜು ಪಟ್ಟಿ ಮತ್ತು ನೀಲ ನಕಾಶೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಸರ್ಕಾರವು ಅಂದಾಜು ₹ 100 ಕೋಟಿ ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಲು ಮಂಜೂರಾತಿ ನೀಡಿ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT