ಮಂಗಳವಾರ, ಏಪ್ರಿಲ್ 7, 2020
19 °C
ಆರೋಗ್ಯ ಇಲಾಖೆಯಿಂದ ನಿಗಾ, ವಿದೇಶದಿಂದ ಬಂದವರ ಮಾಹಿತಿ ನೀಡುವಂತೆ ಮನವಿ

ಕೊರೊನಾ ಜತೆಗೆ ಹಕ್ಕಿಜ್ವರದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೇರಳದಲ್ಲಿ ಹಕ್ಕಿಜ್ವರವು ಕಾಣಿಸಿಕೊಂಡಿದ್ದು ಆ ರಾಜ್ಯಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ನಿಗಾ ವಹಿಸಲಾಗಿದೆ.

ಕೇರಳದಿಂದ ಜೀವಂತ ಕೋಳಿ ಸಾಗಣೆ ಹಾಗೂ ಅವುಗಳ ಉತ್ಪನ್ನವನ್ನು ಜಿಲ್ಲೆಗೆ ತರುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ಕೊರೊನಾ ಜೊತೆಗೆ ಹಕ್ಕಿಜ್ವರದ ಆತಂಕವೂ ಎದುರಾಗಿದೆ.

ಪಶುವೈದ್ಯಕೀಯ ಇಲಾಖೆಯ ಅಧಿಕಾರಿ ತಮ್ಮಯ್ಯ, ಹಕ್ಕಿಜ್ವರ ಪ್ರಕರಣಗಳೂ ರಾಜ್ಯದ ಕೆಲವೆಡೆ ವರದಿಯಾಗುತ್ತಿದ್ದು ಈ ನಿಟ್ಟಿನಲ್ಲಿಯೂ ಕೊಡಗಿನಲ್ಲಿ ಗಮನಹರಿಸಿ ಮುಂಜಾಗ್ರತೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳ ಸಭೆ

‘ಕೊರೊನಾ ವೈರಸ್ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದ್ದು, ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಜೊತೆಗೆ ವಿದೇಶದಿಂದ ಬರುವವರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಒದಗಿಸಬೇಕಿದೆ’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.

ನಗರದ ಜಿ.ಪಂ ನೂತನ ಸಭಾಂಗಣದಲ್ಲಿ ಜಿಲ್ಲಾಮಟ್ಟದ ವಿವಿಧ ಇಲಾಖೆ ಮುಖ್ಯಸ್ಥರು ಹಾಗೂ ಖಾಸಗಿ ಆಸ್ಪತ್ರೆ ಮುಖ್ಯಸ್ಥರು, ವಿವಿಧ ಸಂಸ್ಥೆಯ ಮುಖ್ಯಸ್ಥರ ಜೊತೆ ಶುಕ್ರವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕಾರವಾರ, ಮಂಗಳೂರು ಬಂದರಿನಿಂದ ಬರುವವರ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಕಣ್ಣೂರು ವಿಮಾನ ನಿಲ್ದಾಣದಿಂದ ಬರುವವರ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಕೊರೊನಾ ವೈರಸ್ ಸಂಬಂಧಿಸಿದಂತೆ ಅಗತ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತದ ಜೊತೆಗೆ ಸಹಕರಿಸುವಂತೆ ಕೋರಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಪೌರಾಯುಕ್ತ ಎಂ.ಎಲ್.ರಮೇಶ್, ನಾನಾ ಇಲಾಖೆ ಅಧಿಕಾರಿಗಳು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು