ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಯ ಸಹೋದರಿ ಮನೆ, ಮಸೀದಿಗೆ ಆರೋಗ್ಯಾಧಿಕಾರಿಗಳ ಭೇಟಿ

ಸೋಂಕಿತ ಭೇಟಿ ನೀಡಿದ್ದ ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟೆಚ್ಚರ
Last Updated 20 ಮಾರ್ಚ್ 2020, 13:53 IST
ಅಕ್ಷರ ಗಾತ್ರ

ನಾಪೋಕ್ಲು: ಜಿಲ್ಲೆಯಲ್ಲಿ ಮೊದಲ ಕೋವಿಡ್‌ 19 ಪ್ರಕರಣ ಪತ್ತೆಯಾದ ಕಾರಣ ಸಮೀಪದ ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಸೋಂಕಿತ ವ್ಯಕ್ತಿಯು ಭೇಟಿ ಮಾಡಿರುವ ಕಕ್ಕಬ್ಬೆಯ ಕುಂಜಿಲ ಗ್ರಾಮದಲ್ಲಿನ ಸಹೋದರಿಯ ಮನೆ, ಪೈನರಿ ಮಸೀದಿ ಮತ್ತು ಇತರೆ ಬಂಧುಗಳ ಮನೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಪ್ರಭಾರ ಕಂದಾಯ ಅಧಿಕಾರಿ ಶಿವಕುಮಾರ್, ಗ್ರಾಮ ಪಂಚಾಯಿತಿ ಪಿಡಿಒ ಸಚಿನ್, ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಗ್ರಾಮ ಲೆಕ್ಕಿಗ ಜನಾರ್ದನ್‌, ಚೆಯ್ಯಂಡಾಣೆಯ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ವ್ಯಾಪಕ ಪರಿಶೀಲನೆ ನಡೆಸಿ, ಸಂಬಂಧಿಸಿದವರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಮುಂದಿನ 14 ದಿನಗಳ ಕಾಲ ಮನೆಯಿಂದ ಹೊರಬಾರದಂತೆ, ಯಾವುದೇ ಅನಾರೋಗ್ಯ ಲಕ್ಷಣಗಳು ಕಂಡುಬಂದರೂ ಕೂಡಲೇ ವೈದ್ಯರನ್ನು ಭೇಟಿ ಆಗುವಂತೆ ತಿಳಿಸಲಾಗಿದೆ. ನಾಪೋಕ್ಲು ಪಟ್ಟಣ ವ್ತಾಪ್ತಿಯಲ್ಲೂ ಕೊರೊನಾ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ.

ಗ್ರಾಮ ಪಂಚಾಯಿತಿಯು ಧ್ವನಿವರ್ಧಕದ ಮೂಲಕ ಜನ ಜಾಗೃತಿಗೆ ಮುಂದಾಗಿದೆ.

ಸೋಮವಾರ ನಡೆಯಲಿರುವ ವಾರದ ಸಂತೆಯನ್ನು ರದ್ದುಪಡಿಸಲಾಗಿದೆ. ಸರ್ಕಾರದಿಂದ ಮುಂದಿನ ಸೂಚನೆ ಬರುವವರೆಗೆ ಸಂತೆ ನಡೆಸದಂತೆ ಗ್ರಾಮ ಪಂಚಾಯಿತಿ ಸೂಚಿಸಿದೆ.

ಚೆಯ್ಯಂಡಾಣೆ ಸಮೀಪದ ಕಿಕ್ಕರೆ, ಕಡಂಗ, ಎಡಪಾಲ ಗ್ರಾಮಗಳಲ್ಲಿ ವಿದೇಶ ಪ್ರಯಾಣ ಮುಗಿಸಿ ಬಂದ ಹಲವರು ನಿರಾತಂಕವಾಗಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿದ್ದು ಈ ಬಗ್ಗೆ ವಿಚಾರಿಸಿದರೆ, ತಮ್ಮನ್ನು ಕೇರಳದಲ್ಲೇ ಪರೀಕ್ಷಿಸಲಾಗಿದೆ ಎಂಬ ಸಬೂಬು ನೀಡುತ್ತಿದ್ದಾರೆ ಎಂದು ಕುಂಜಿಲ ಗ್ರಾಮಸ್ಥರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT