ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಜಿಲ್ಲೆಯಲ್ಲಿ ಅರ್ಧ ದಿನ ವಹಿವಾಟು, ಭಾನುವಾರ ಪೂರ್ಣ ಬಂದ್‌

ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ವ್ಯಾಪಾರ
Last Updated 26 ಜೂನ್ 2020, 14:08 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜೂನ್‌ 27ರಿಂದ ಜುಲೈ 4ರ ವರೆಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ವ್ಯಾಪಾರ ನಡೆಸಿ ಬಳಿಕ ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್‌ ಮಾಡಲು ತೀರ್ಮಾನಿಸಲಾಗಿದೆ ಎಂದು ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಎಂ.ಬಿ.ದೇವಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ನಾವೇ ಮುಂಜಾಗ್ರತೆ ವಹಿಸಬೇಕಿದೆ. ಭಾನುವಾರ ಇಡೀ ದಿನ ಬಂದ್‌ ಇರಲಿದೆ. ಇದಕ್ಕೆ ಜಿಲ್ಲೆಯ ವರ್ತಕರು ಸಹಕಾರ ನೀಡಬೇಕು. ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲೂ ಮಧ್ಯಾಹ್ನದ ತನಕ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಿ ಬಳಿಕ ಸ್ವಯಂ ಪ್ರೇರಿತ ಬಂದ್‌ ನಡೆಸುವ ಸಲಹೆಗಳು ಬಂದಿದ್ದವು. ಜಿಲ್ಲೆಯಲ್ಲಿ 3 ಪ್ರಕರಣದಿಂದ 30ರ ಗಡಿ ದಾಟಿದೆ. ಇದು ಆತಂಕಕಾರಿ ಸನ್ನಿವೇಶ. ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ’ ಎಂದು ಹೇಳಿದರು.

ಕೊಡಗಿನ ಜನರು ಶಿಸ್ತಿನ ಸಿಪಾಯಿಗಳು. ಸ್ವಯಂ ನಿಯಂತ್ರಣದಿಂದಲೇ ಸೋಂಕು ನಿಯಂತ್ರಣಕ್ಕೆ ತರಬೇಕು. ಜಿಲ್ಲಾಡಳಿತದ ಮಾರ್ಗಸೂಚಿ ಪಾಲಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಗೆ ಯಾವುದೇ ತೊಂದರೆ ಆಗಬಾರದು ಎಂದು ಹೇಳಿದರು.

ಈ ನಿರ್ಧಾರದಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೊಂದರೆಯಾಗಲಿದೆ. ಆದರೆ, ಜಿಲ್ಲೆಯ ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಲೇಬೇಕಿದೆ. ಈ ಹಿಂದೆ 60 ದಿನ ಇದ್ದ ಲಾಕ್‌ಡೌನ್‌ ಅವಧಿಯಲ್ಲೂ ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗಿದ್ದರು. ಸರ್ಕಾರವೇ ನೆರವು ನೀಡಬೇಕು ಎಂದು ಹೇಳಿದರು.

ಮಾಜಿ ಅಧ್ಯಕ್ಷ ಜಿ.ಚಿದ್ವಿಲಾಸ್‌ ಮಾತನಾಡಿ, ಅನಿವಾರ್ಯ ಪರಿಸ್ಥಿತಿ ಎದುರಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಸ್ಥಳೀಯ ಆಡಳಿತಗಳು ಸಂತೆ ರದ್ದು ಪಡಿಸಿವೆ. ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಖಜಾಂಚಿ ರವಿ ಮುತ್ತಣ್ಣ, ಧನಂಜಯ್‌, ಅಂಬೇಕಲ್‌ ನವೀನ್‌ ಕುಶಾಲಪ್ಪ, ಗಿರೀಶ್ ಗಣಪತಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಮತ್ತೆ 6 ಪ್ರಕರಣಗಳು ದೃಢ,ಎರಡು ವರ್ಷದ ಮಗುವಿಗೂ ಸೋಂಕು

ಮಡಿಕೇರಿ: ಜಿಲ್ಲೆಯಲ್ಲಿ ಶುಕ್ರವಾರವೂ ಆರು ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

ಒಟ್ಟು ದಾಖಲಾಗಿದ್ದ 36 ಪ್ರಕರಣಗಳಲ್ಲಿ 33 ಸಕ್ರಿಯ ಪ್ರಕರಣಗಳಿವೆ. ಅವರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನ ಪ್ರಯಾಣದ ಇತಿಹಾಸ ಹೊಂದಿದ್ದ ಪತಿ, ಪತ್ನಿ ಹಾಗೂ ಎರಡು ವರ್ಷದ ಮಗುವಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ವಿರಾಜಪೇಟೆ ತಾಲ್ಲೂಕಿನ ಹುಂಡಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ ವಾಸ ಮಾಡಿದ್ದರು.

ಪುಣೆಯಿಂದ ಜಿಲ್ಲೆಗೆ ಹಿಂತಿರುಗಿದ್ದ 24 ವರ್ಷದ ವ್ಯಕ್ತಿಯೊಬ್ಬರಿಗೂ ಸೋಂಕು ತಗುಲಿದೆ. ಇವರು ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ನಿವಾಸಿ.

ಇನ್ನು ವಿರಾಜಪೇಟೆ ತಾಲ್ಲೂಕು ಕೊಂಡಂಗೇರಿ ಗ್ರಾಮದ 23 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರು ವಿದೇಶದಿಂದ (ಶಾರ್ಜಾ) ಮರಳಿದ್ದರು. ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಹೋಬಳಿಯ ಹುಲುಸೆ ಗ್ರಾಮದ 46 ವರ್ಷದ ವ್ಯಕ್ತಿಗೂ ಮಹಾಮಾರಿ ಬಾಧಿಸಿದೆ. ಬೆಂಗಳೂರಿನ ಪ್ರಯಾಣದ ಇತಿಹಾಸವಿದೆ.‌ ಎಲ್ಲಾ ಸೋಂಕಿತರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಜಿಲ್ಲೆಯಲ್ಲಿ ಹೊಸದಾಗಿ ಹುಂಡಿ, ನೆಲ್ಯಹುದಿಕೇರಿ ಮತ್ತು ಹುಲುಸೆ ಗ್ರಾಮದಲ್ಲಿ ನಿಯಂತ್ರಿತ ಪ್ರದೇಶಗಳನ್ನು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT