ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಿ ಶಾಸ್ತಾವು ಉತ್ಸವಕ್ಕೆ ತೆರೆ

ವಿಜೃಂಭಣೆಯಿಂದ ನಡೆದ ಕೋಲಗಳು; ಭಯಭಕ್ತಿಯಿಂದ ವೀಕ್ಷಿಸಿದ ಭಕ್ತರು
Last Updated 19 ಡಿಸೆಂಬರ್ 2018, 12:35 IST
ಅಕ್ಷರ ಗಾತ್ರ

ನಾಪೋಕ್ಲು: ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ನಡೆಯಿತು.

ದೇವಾಲಯದ ಆವರಣದಲ್ಲಿ ಎರಡು ಪ್ರಮುಖ ಕೋಲಗಳೊಂದಿಗೆ ಉತ್ಸವ ಕೊನೆಗೊಂಡಿತು. ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ವಿವಿಧ ಕೋಲಗಳು ಶಾಸ್ತಾವು ದೇವರಿಗೆ ಸೇವೆ ಸಲ್ಲಿಸಿದವು. ಬೆಳಿಗ್ಗೆ ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲಗಳು ತಮ್ಮ ಸಾಂಪ್ರದಾಯಿಕ ವೇಷಭೂಷಣಗಳೊಂದಿಗೆ ಗಮನ ಸೆಳೆದವು.

ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಜರುಗಿದ ವಿಷ್ಣುಮೂರ್ತಿ ಕೋಲವನ್ನು ಭಕ್ತರು ಭಯಭಕ್ತಿಯಿಂದ ವೀಕ್ಷಿಸಿದರು. ಉತ್ಸವದ ಅಂಗವಾಗಿ ಮಂಗಳವಾರ ರಾತ್ರಿ ದೀಪಾರಾಧನೆ ನಡೆಯಿತು. ತಡರಾತ್ರಿಯವರೆಗೆ ದೇವಾಲಯದಲ್ಲಿ ಕೇರಳದ ಚಂಡೆವಾದ್ಯದೊಂದಿಗೆ ದೀಪಾರಾಧನೆ ನಡೆಯಿತು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಚೆಟ್ಟೀರ ಶ್ಯಾಂ ಬೋಪಣ್ಣ, ತಕ್ಕ ಮುಖ್ಯಸ್ಥ ಕೊಂಡೀರ ಪೊನ್ನಣ್ಣ ವಾರ್ಷಿಕ ಉತ್ಸವದ ನೇತೃತ್ವ ವಹಿಸಿದ್ದರು. ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಉತ್ಸವಕ್ಕೂ ಮುನ್ನ ಭಕ್ತರಿಂದ ಹರಕೆ ಸಲ್ಲಿಸಲಾಯಿತು. ಹಲವು ವರ್ಷಗಳಿಂದ ಇಲ್ಲಿನ ದೇವಾಲಯದಲ್ಲಿ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಹರಕೆಯ ನಾಯಿಗಳನ್ನು ದೇವಾಲಯಕ್ಕೆ ಸಮರ್ಪಣೆ ಮಾಡಲಾಯಿತು.

ಬೇತು ಗ್ರಾಮದ ಶಾಸ್ತಾವು ದೇವಾಲಯದ ಮೆಟ್ಟಿಲುಗಳನ್ನೇರಿ ಎತ್ತರದ ಸಮತಟ್ಟು ಸ್ಥಳಕ್ಕೆ ಬಂದರೆ ಸುಮಾರು ಐದು ಅಡಿ ಎತ್ತರದ ವೃತ್ತಾಕಾರದ ಕಟ್ಟೆ ಕಾಣಸಿಗುತ್ತದೆ. ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿ ಶಾಸ್ತಾವು ದೇವರು. ಈ ನಿಸರ್ಗ ದೇಗುಲದಲ್ಲಿ ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗಲಿದ್ದು, ಬುಧವಾರ ನಡೆದ ಹಬ್ಬದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT