ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ವೈದ್ಯಕೀಯ ಕ್ಷೇತ್ರದವರ ಸೇವೆ ಶ್ಲಾಘನೀಯ

ಜನೌಷಧಿ ದಿನಾಚರಣೆಯಲ್ಲಿ ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ರಮೇಶ್ ಹೇಳಿಕೆ
Last Updated 6 ಮಾರ್ಚ್ 2021, 11:06 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊರೊನಾ ಪರಿಸ್ಥಿತಿಯಲ್ಲಿ ತನ್ನ ಪ್ರಾಣ ಪಣಕಿಟ್ಟು ವೈದ್ಯರು ಮಾಡಿರುವ ಸೇವೆ ನಿಜಕ್ಕೂ ಶ್ಲಾಘನೀಯ’ ಎಂದು ವಿಧಾನ ಪರಿಷತ್‌ ಸದಸ್ಯೆಯೂ ಆಗಿರುವ ಬಿಜೆಪಿ ವಕ್ತಾರೆ ತೇಜಸ್ವಿನಿ ರಮೇಶ್ ಇಲ್ಲಿ ಶನಿವಾರ ಹೇಳಿದರು.

ನಗರದ ಕಾವೇರಿ ಕಲಾಕ್ಷೇತ್ರ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಜನೌಷಧಿ ಕೇಂದ್ರ ಮಾಲೀಕರ ಒಕ್ಕೂಟದ ವತಿಯಿಂದ ನಡೆದ ಜನೌಷಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಶ್ರೇಷ್ಠ, ಸಮರ್ಥ, ಬಲಿಷ್ಠ ಹಾಗೂ ಆರೋಗ್ಯವಂತ ಭಾರತ ನಿರ್ಮಿಸುವ ಕನಸನ್ನು ಹೊತ್ತಿದ್ದಾರೆ. ಆದರೆ, ಜನೌಷಧಿ ಕಾರ್ಯಕ್ರಮದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ 7 ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರವಿದೆ. ಕೋವಿಡ್ ವ್ಯಾಕ್ಸಿನ್ ಬಗ್ಗೆ ಕೂಡ ಅಪಪ್ರಚಾರ ಆಗಿದೆ. ಬಡವರಿಗೆ ಮೀಸಲಿಟ್ಟ ಯೋಜನೆ ದುರ್ಬಳಕೆಯಾಗಬಾರದು’ ಎಂದು ಎಚ್ಚರಿಸಿದರು.

ಬಲಿಷ್ಠ, ಸದೃಢ ಸಮಾಜ ಸೃಷ್ಟಿಯಾಗಬೇಕಾದರೆ ಮೊದಲು ಆರೋಗ್ಯವಂತ ಸಮಾಜ ನಿರ್ಮಾಣ ಆಗಬೇಕು. ಈ ನಿಟ್ಟಿನಲ್ಲಿ ಜನೌಷಧಿ ಯೋಜನೆ ಸಹಕಾರಿಯಾಗಿದೆ ಎಂದು ತೇಜಸ್ವಿನಿ ರಮೇಶ್ ತಿಳಿಸಿದರು.

ವೈದ್ಯಕೀಯ ಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ಸವಾಲಿನ ಕೆಲಸವೇ ಸರಿ. ವೈದ್ಯಕೀಯ ಕ್ಷೇತ್ರ ಕೇವಲ ಹಣ ಮಾಡುವುದಲ್ಲ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಮನಸ್ಸಿರಬೇಕು ಎಂದು ಹೇಳಿದರು.

ವೈದ್ಯಕೀಯ ಕ್ಷೇತ್ರಕ್ಕೆ ಬರುವವರು ದೇಶಪ್ರೇಮಿಗಳಾಗಿರಬೇಕು. ಬೇರೆ ರಾಷ್ಟ್ರದಲ್ಲಿ ಭಾರತೀಯ ವೈದ್ಯಕೀಯ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಭಾರತ ಕೋವಿಡ್ ಲಸಿಕೆಯನ್ನು ಆವಿಷ್ಕರಿಸಿದೆ. ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ನಾಗರಿಕತೆ ಸೃಷ್ಟಿಯಾದಂತೆ ವೈದ್ಯಕೀಯ ಕ್ಷೇತ್ರ ಬೆಳವಣಿಗೆ ಸಾಧಿಸುತ್ತಿದೆ ಎಂದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ರೋಗಿ ಔಷಧಿಯಿಂದ ವಂಚಿತರಾಗಬಾರದು ಎಂಬ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಯೋಜನೆ ತಂದಿದೆ. ಮಾಲೀಕರೇ ಜನೌಷಧಿ ಬಗ್ಗೆ ಮನೆ ಮನೆ ಪ್ರಚಾರ ಮಾಡಬೇಕು. ಯೋಜನೆ ಸದ್ಬಳಕೆಯಾಗಬೇಕು. ಕೆಲವು ವೈದ್ಯರು ಖಾಸಗಿ ಮೆಡಿಕಲ್ ಶಾಪ್‌ಗಳೊಡನೆ ಒಪ್ಪಂದ ಮಾಡಿಕೊಂಡಿರುವುದು ವಿಷಾದನೀಯ. ವೈದ್ಯರ ಮಟ್ಟದಲ್ಲಿ ಅಪಪ್ರಚಾರವಾಗುತ್ತಿರುವುದು ಆತಂಕಕಾರಿ ಎಂದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸ್ವಾಭಿಮಾನಿ, ಸ್ವಾವಲಂಬಿ ಬದುಕು ಕಟ್ಟಿಕೊಡುವುದು ಕೇಂದ್ರ ಸರ್ಕಾರದ ಗುರಿಯಿದೆ. ಆರ್ಥಿಕ ಹಿಂದುಳಿದವರಿಗೆ ಜನೌಷಧಿ ಸಹಕಾರಿಯಾಗಿದೆ. ಜನೌಷಧಿ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಔಷಧಿ ಗುಣಮಟ್ಟ ಉತ್ತಮವಾಗಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಶೇ 90 ಕಡಿಮೆ ದರದಲ್ಲಿ ಸಿಗುವ ಔಷಧಿ ಗುಣಮಟ್ಟ ಶೇ 100 ಚೆನ್ನಾಗಿವೆ. ಇದು ವ್ಯಾಪಾರವಲ್ಲ, ಸಮಾಜಮುಖಿ ಕಾರ್ಯವಾಗಿದೆ ಎಂದು ಹೇಳಿದರು.

ಬಿಜೆಪಿ ಕೃಷಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ.ಬಿ.ಸಿ. ನವೀನ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯದ ಬಳಿಕ ಹಲವು ಯೋಜನೆ ಜಾರಿಯಾಗಿದೆ. ಕೆಲವು ಯಶಸ್ವಿಯಾದರೆ, ಕೆಲವು ವೈಫಲ್ಯ ಸಾಧಿಸಿದೆ. ಸರ್ಕಾರಿ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಜನರ ಸಹಭಾಗಿತ್ವ ಬಹುಮುಖ್ಯ ಎಂದು ಹೇಳಿದರು.

ಹಿರಿಯ ವೈದ್ಯ ಮನೋಹರ್ ಜಿ. ಪಾಟ್ಕರ್ ಕಾರ್ಯಕ್ರಮ ಉದ್ಘಾಟಿಸಿದರು. ಜನೌಷಧಿ ಸಾಧಕ ಬಾಧಕ ವಿಷಯದ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರಕ್ಷಿತಾ ಬಿ.ಶೆಟ್ಟಿ, ದ್ವಿತೀಯ ಸ್ಥಾನ ಪಡೆದ ದೀಕ್ಷಿತಾ ಪಿ.ಟಿ., ತೃತೀಯ ಸ್ಥಾನ ಗಳಿಸಿದ ಕೃತಿಗೆ ಬಹುಮಾನ ವಿತರಿಸಲಾಯಿತು.

ಮೆಡಿಕಲ್ ಕಾಲೇಜು ಪ್ರಾಂಶುಪಾಲ ವಿಶಾಲ್ ಕಾರ್ಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT