ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತಿ ಜನಾಂಗದ ಭಾಷೆಯನ್ನೂ ಗೌರವಿಸಿ’

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ದಶ ವರ್ಷದ ಸಂಭ್ರಮ
Last Updated 27 ಆಗಸ್ಟ್ 2021, 12:28 IST
ಅಕ್ಷರ ಗಾತ್ರ

ಮಡಿಕೇರಿ: ‘ಪ್ರತಿ ಭಾಷೆಗೂ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಇತಿಹಾಸವಿದೆ. ಆದ್ದರಿಂದ, ಪ್ರತಿ ಭಾಷೆಯನ್ನೂ ಗೌರವಿಸುವ ಕೆಲಸ ಮಾಡಬೇಕು’ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ನಗರದ ಕೊಡಗು ಗೌಡ ಸಮಾಜದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ದಶ ವರ್ಷ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅರೆಭಾಷೆ ಜನರು ಕೊಡಗು ಹಾಗೂ ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅರೆಭಾಷೆ ಜನರು ಎಲ್ಲ ಭಾಷೆಗಳನ್ನೂ ಗೌರವಿಸುತ್ತಿದ್ದಾರೆ’ ಎಂದು ಹೇಳಿದರು.

‘ಮಡಿಕೇರಿಯಲ್ಲಿ ಅರೆಭಾಷೆ ಹಾಗೂ ಕೊಡವ ಅಕಾಡೆಮಿಗೆ ಸ್ವಂತ ಕಟ್ಟಡವು ನಿರ್ಮಾಣ ಹಂತದಲ್ಲಿದೆ. ಸಾಂಸ್ಕೃತಿಕ ಭವನ ನಿರ್ಮಾಣವಾದ ಮೇಲೆ ಸ್ವಂತ ಕಟ್ಟಡ ದೊರೆಯಲಿದೆ. 2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅರೆಭಾಷೆ ಅಕಾಡೆಮಿ ಸ್ಥಾಪನೆಗೆ ಪ್ರಯತ್ನ ನಡೆದಿತ್ತು. ಅದಾದ ಮೇಲೆ 2011ರಲ್ಲಿ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅಕಾಡೆಮಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು. 10 ವರ್ಷದಿಂದ ಅರೆಭಾಷೆಯ ಸಂಸ್ಕೃತಿ, ಭಾಷೆಯನ್ನು ಉಳಿಸುವ ಕೆಲಸ ನಡೆಯುತ್ತಿದೆ’ ಎಂದು ಬೋಪಯ್ಯ ಹೇಳಿದರು.

ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವ ಎಸ್‌.ಅಂಗಾರ ಮಾತನಾಡಿ, ‘ಎಲ್ಲ ಭಾಷೆಗಳ ಭಾವನೆಯೂ ಒಂದೇ ಆಗಿದೆ. ಟೀಕೆಗಳ ಮೂಲಕ ಸಾಧನೆ ಸಾಧ್ಯವಿಲ್ಲ. ಜಾತಿಯಿಂದ ಗುರುತಿಸಿಕೊಳ್ಳುವ ಬದಲಿಗೆ ಸಾಧನೆಯ ಮೂಲಕ ಅಸ್ತಿತ್ವ ಕಂಡುಕೊಳ್ಳೋಣ. ರಾಜಕೀಯ ಸಣ್ಣತನ ಬಿಡಬೇಕು’ ಎಂದು ಕರೆ ಕೊಟ್ಟರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಮಾತನಾಡಿ, ‘ಸಣ್ಣಸಣ್ಣ ಸಮುದಾಯಗಳ ಸಂಸ್ಕೃತಿ ಉಳಿಸಬೇಕಿದೆ. ಜಿಲ್ಲೆಯಲ್ಲಿ ಕೊಡವ ಹಾಗೂ ಅರೆಭಾಷೆ ಅಕಾಡೆಮಿಗಳು ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿವೆ. ಅರೆಭಾಷೆ ಅಕಾಡೆಮಿ ಸ್ಥಾಪಿಸುವಂತೆ ನಾನೂ ಮನವಿ ಸಲ್ಲಿಸಿದ್ದೆ. ಸಮಾಜ ಒಡೆಯುವ ಕೆಲಸವನ್ನೂ ಯಾರೂ ಮಾಡಬಾರದು. ವಿವಿಧತೆಯಲ್ಲಿ ಏಕತೆ ಸಾಧಿಸೋಣ’ ಎಂದು ಹೇಳಿದರು.

ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ‘ಅರೆಭಾಷೆಗೆ ಐಎಸ್‌ಒ ಕೋಡ್‌ನ ಸ್ಥಾನಮಾನ ಸಿಕ್ಕಿಲ್ಲ. ಅದನ್ನು ಪಡೆಯುವ ಪ್ರಯತ್ನ ಸಾಗಿದೆ. ಅದರ ಭಾಗವಾಗಿ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಅಕಾಡೆಮಿ ವತಿಯಿಂದ ಕಾರ್ಯಾಗಾರಗಳನ್ನೂ ಆಯೋಜಿಸಲಾಗುತ್ತಿದೆ’ ಎಂದರು.

ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್‌ ಅಂಕಿತಾ ಸುರೇಶ್ ಅವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುನಿಲ್‌ ಸುಬ್ರಮಣಿ, ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ, ಅಕಾಡೆಮಿ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್‌, ಪಿ.ಸಿ.ಜಯರಾಮ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್‌. ಸೋಮಣ್ಣ ಮಾತನಾಡಿದರು.

ಪೇರಿಯನ ಜಯಾನಂದ, ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್‌, ಧನಂಜಯ್‌ ಅಗೋಳಿಕಜೆ, ಡಾ.ಕೂಡಕಂಡಿ ದಯಾನಂದ್‌ ಹಾಜರಿದ್ದರು.

ರಿಜಿಸ್ಟ್ರಾರ್‌ ಚಿನ್ನಸ್ವಾಮಿ ವಂದಿಸಿದರು. ಎಚ್‌.ಟಿ.ಅನಿಲ್‌ ನಿರ್ದೇಶನದ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಯಿತು. ಮಡಿಕೇರಿ ಹನಿ ತಂಡಕ್ಕೆ ವಾದ್ಯ ಪರಿಕರ ವಿತರಣೆ ಮಾಡಲಾಯಿತು. ಅರೆಭಾಷೆ ವೆಬ್‌ಸೈಟ್‌ ಲೋಕಾರ್ಪಣೆ ಮಾಡಲಾಯಿತು. ವಿವಿಧ ಸಿ.ಡಿ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT