ಗುರುವಾರ , ಜನವರಿ 20, 2022
15 °C
ಬಾಡಿಗೆ ದರ ಸಮರ, ಗೊಂದಲ ಸೃಷ್ಟಿ – ಜಿಲ್ಲಾಡಳಿತದ ಮಧ್ಯ ಪ್ರವೇಶಕ್ಕೆ ಒತ್ತಾಯ

ಮಾಂದಲ್‌ಪಟ್ಟಿ: ಜೀಪು ಚಾಲಕರ ‘ಸಂಘರ್ಷ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಮಾಂದಲ್ ಪಟ್ಟಿಯಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮಧ್ಯ ಪ್ರವೇಶ ಮಾಡಬೇಕೆಂದು ಕೊಡಗು ರಕ್ಷಣಾ ವೇದಿಕೆ ಒತ್ತಾಯಿಸಿದೆ.

ನಿರುದ್ಯೋಗಿ ಯುವಕರು ಬಾಡಿಗೆ ಜೀಪು ಚಾಲನೆಯ ಮೂಲಕ ಬದುಕು ಕಂಡುಕೊಂಡಿದ್ದಾರೆ. ಆದರೆ, ಬಾಡಿಗೆ ದರ ಸಮರದಿಂದ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದ್ದು, ಚಾಲಕರ ನಡುವೆ ಕಲಹ ಏರ್ಪಡುತ್ತಿದೆ. ಇದರಿಂದ ಕೊಡಗಿನ ಪ್ರವಾಸಿತಾಣಗಳ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತಿದ್ದು, ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಹೇಳಿದ್ದಾರೆ.

ನಿತ್ಯ ದುಡಿದು ಜೀವನ ಸಾಗಿಸುವ ಚಾಲಕರುಗಳು ಪೊಲೀಸ್ ಠಾಣೆಗಳಲ್ಲಿ ದಿನ ಕಳೆಯುವಂತಾಗಬಾರದು. ಬಾಡಿಗೆ ದರ ಸಮರದಿಂದ ಮಾಂದಲ್ ಪಟ್ಟಿ ಭಾಗದಲ್ಲಿ ನಿತ್ಯ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಇದು ಪುನರಾವರ್ತನೆ ಆಗದಂತೆ ತಡೆಯಲು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮಧ್ಯ ಪ್ರವೇಶ ಮಾಡಬೇಕು ಎಂದು ಕೋರಿದ್ದಾರೆ.

ಬಹಿಷ್ಕಾರ ಸರಿಯಲ್ಲ:

ಚಾಲಕರು ಕಲಹದ ನಡುವೆಯೇ ಕೆಲವು ಸ್ಥಳೀಯರು ಮಡಿಕೇರಿ ನಗರದ ಯಾವುದೇ ಬಾಡಿಗೆ ವಾಹನಗಳು ಬರಬಾರದೆಂದು ಬಹಿಷ್ಕಾರ ಹಾಕಿರುವ ಕುರಿತು ಆರೋಪ ಕೇಳಿ ಬಂದಿದೆ. ಆದರೆ, ಪ್ರತಿಯೊಬ್ಬರಿಗೂ ಪ್ರತಿಯೊಂದು ಕಡೆ ದುಡಿದು ಬದುಕುವ ಹಕ್ಕಿದ್ದು, ಇದಕ್ಕೆ ತಡೆಯೊಡ್ಡುವುದು ಕಾನೂನು ಬಾಹಿರ ಕ್ರಮವಾಗುತ್ತದೆ ಎಂದು ಪವನ್‌ ತಿಳಿಸಿದ್ದಾರೆ.

ಬಹಿಷ್ಕಾರದಂತಹ ಕ್ರಮಗಳಿಂದ ಸಂಘರ್ಷಗಳು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಪೊಲೀಸ್ ಇಲಾಖೆ ಮಧ್ಯ ಪ್ರವೇಶ ಮಾಡಿ ಸೂಕ್ತ ತನಿಖೆ ಕೈಗೊಳ್ಳಬೇಕು. ಉಭಯ ಕಡೆಯವರ ಸಭೆ ನಡೆಸಿ ಶಾಂತಿಯ ವಾತಾವರಣ ಸೃಷ್ಟಿಸಬೇಕು ಎಂದು ಪವನ್ ಪೆಮ್ಮಯ್ಯ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು