ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಸಂಚಾರ ಬಂದ್‌ ಮಾಡದಿರಲು ಮನವಿ

Last Updated 26 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಪೊನ್ನಂಪೇಟೆ: ಆನೆಚೌಕೂರು ವನ್ಯಜೀವಿ ಅರಣ್ಯ ಪ್ರದೇಶದ ಮೂಲಕ ಕೊಡಗು ಜಿಲ್ಲೆಗೆ ಸಂಪರ್ಕಿಸುವ ಮಾರ್ಗವನ್ನು ರಾತ್ರಿ ಸಮಯದಲ್ಲಿ ಬಂದ್ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.

ಸೋಮವಾರ ಮುಖ್ಯಮಂತ್ರಿ ಕಚೇರಿಯಲ್ಲಿ ಭೇಟಿ ಮಾಡಿ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.ಆನೆಚೌಕೂರು ರಸ್ತೆ ಸಂಚಾರದ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿ, ಈಗಾಗಲೇ ವನ್ಯಜೀವಿ ವಲಯಕ್ಕೆ ಸೇರ್ಪಡೆಗೊಳಿಸಲಾಗಿದೆ. ಸಂಚಾರ ಬಂದ್ ಮಾಡುವ ವಿಚಾರದಲ್ಲಿ ಕ್ರಮ ಕೈಗೊಂಡಿಲ್ಲ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.

ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಎಂದು ಘೋಷಿಸಬೇಕೆಂದು ಕೇಂದ್ರವನ್ನು ಒತ್ತಾಯಿಸುವಂತೆ ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದ ತಂಡ ಒತ್ತಾಯಿಸಿತು.

ಅತಿವೃಷ್ಠಿಯಲ್ಲಿ ನಲುಗಿರುವ ಕೊಡಗಿನ ಕೃಷಿಕರಿಗೆ ಪರಿಹಾರ ಒದಗಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ತಂಡ ಮಂಗಳವಾರ ಪರಿಶೀಲಿಸಿ ಯೋಜನೆ ರೂಪಿಸುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು.

ಜೀವಹಾನಿ, ಭೂಕುಸಿತ, ಮನೆ, ಕೃಷಿ ಬೆಳೆ ನಾಶದಿಂದ ಕಾಫಿ, ಭತ್ತ, ಕಾಳುಮೆಣಸು, ಅಡಿಕೆ ಬೆಳೆಗಳು ನೆಲ ಕಚ್ಚಿರುವುದರಿಂದ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಜತೆಗೆ, ರಾಷ್ಟ್ರೀಕೃತ ಮತ್ತು ಸಹಕಾರ ಸಂಘಗಳಲ್ಲಿನ ಕೃಷಿ ಸಾಲವನ್ನು ಮನ್ನಾ ಮಾಡುವ ಮೂಲಕ ಸ್ಪಂದಿಸಬೇಕು ಎಂದು ರೈತ ಸಂಘದ ವತಿಯಿಂದ ಸಲಹೆ ನೀಡಲಾಯಿತು.

ಕಂದಾಯ ಭೂಮಿಯನ್ನು ವರ್ಗಾವಣೆ ಮಾಡಲು ಪಟ್ಟೆದಾರನ ಹೆಸರು ಇರುವುದು, ಪಹಣಿಯಿಂದ ನಿಧನರಾದವರ ಹೆಸರು ತೆಗೆಯಲು ಭೂಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ. ಸರಳ ಮಾರ್ಗದ ಮೂಲಕ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರಮುಖರಾದ ಚಾಮರಸ ಮಾಲಿಪಾಟೀಲ, ಸುಜಯ್ ಬೋಪಯ್ಯ, ಅಜ್ಜಮಾಡ ಚಂಗಪ್ಪ, ಆಲೆಮಾಡ ಮಂಜುನಾಥ್, ಬೋಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT