ಶನಿವಾರ, ಜನವರಿ 18, 2020
26 °C
ಕೇಂದ್ರ ಸರ್ಕಾರದ ವಿರುದ್ಧ ಕೆಲವು ಸಂಘಟನೆಗಳ ಆಕ್ರೋಶ

ಬಂದ್‌ ಇಲ್ಲ: ಪ್ರತಿಭಟನೆಗೆ ಸೀಮಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ವಿವಿಧ ಕಾರ್ಮಿಕ ಸಂಘಟನೆಗಳು, ಜ.8ರಂದು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕೊಡಗಿನ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ, ಕೊಡಗಿನಲ್ಲಿ ಬಂದ್‌ ನಡೆಯುವ ಸಾಧ್ಯತೆ ಕಡಿಮೆಯಿದ್ದು ಬರೀ ಪ್ರತಿಭಟನೆಗೆ ಮುಷ್ಕರ ಸೀಮಿತವಾಗಲಿದೆ.

ದುಡಿಯುವ ವರ್ಗದ ರಕ್ಷಣೆ, ಪರ್ಯಾಯ ಆರ್ಥಿಕ ನೀತಿ ಹಾಗೂ 13 ಅಂಶಗಳ ಬೇಡಿಕೆ ಈಡೇರಿಕೆಗೆ ಮುಷ್ಕರ ನಡೆಸಲಾಗುತ್ತಿದೆ ಎಂದು ಮುಖಂಡರು ತಿಳಿಸಿದ್ದಾರೆ.

ಕಾರ್ಮಿಕ ವರ್ಗದ ರಕ್ಷಣೆ ಮಾಡಬೇಕು. ಮಾಲೀಕರೂ ಕೂಡ ಮುಷ್ಕರಕ್ಕೆ ರಾಜಕೀಯ ಚಿಂತನೆಗಳನ್ನು ಬದಿಗೊತ್ತಿ ಬೆಂಬಲ ನೀಡಬೇಕು ಎಂದು ಕಾರ್ಮಿಕ ಮುಖಂಡ ಪಿ.ಆರ್‌. ಭರತ್‌ ಕೋರಿದ್ದಾರೆ.

ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದ್ದು, ಅರ್ಥಹೀನ ಆರ್ಥಿಕ ವ್ಯವಸ್ಥೆಯಿಂದ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿರುವ ಎಐಟಿಯುಸಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಚ್.ಎಂ.ಸೋಮಪ್ಪ ಅವರು, ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಂಡವಾಳ ಶಾಹಿ ಪರವಾದ ಆರ್ಥಿಕ ನೀತಿಗಳನ್ನು ಜಾರಿಗೆ ತರುತ್ತಿದೆ. ಕೂಲಿಯನ್ನು ನಂಬಿರುವ ಕೃಷಿ ಕಾರ್ಮಿಕರ ನಿರ್ಲಕ್ಷಿಸಿದೆ ಎಂದು ಟೀಕಿಸಿದ್ದಾರೆ.

ಕಾರ್ಮಿಕರಿಗೆ ಸಮಾನ ವೇತನ ಪದ್ಧತಿ ಜಾರಿಗೆ ತರಬೇಕು. ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ಕೋರ್ಟ್‌ ಸ್ಥಾಪಿಸಬೇಕು. ಎಲ್ಲರಿಗೂ ಸರ್ಕಾರದ ಮೂಲಕವೇ ತಲಾ ₹ 10 ಸಾವಿರ ಪಿಂಚಣಿ ಖಾತ್ರಿ ಪಡಿಸಬೇಕು. ಆರ್ಥಿಕ ಹಿಂಜರಿತಕ್ಕೆ ಕಾರಣವಾದ ಅಂಶಗಳನ್ನು ಕೈಬಿಡಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರ ಹಾಗೂ ಕೂಲಿ ಕಾರ್ಮಿಕರ ಸಾಲಮನ್ನಾ ಮಾಡಬೇಕು ಸೋಮಪ್ಪ ತಿಳಿಸಿದ್ದಾರೆ.

ಇಂದು ಅಂಗನವಾಡಿಗಳು ಬಂದ್‌

ಮುಷ್ಕರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಮಡಿಕೇರಿ ತಾಲ್ಲೂಕು ಘಟಕ ಬೆಂಬಲ ನೀಡಿದ್ದು ಅಂಗನವಾಡಿಗಳು ಬಂದ್‌ ಆಗಲಿವೆ ಎಂದು ಸಂಘದ ತಾಲ್ಲೂಕು ಅಧ್ಯಕ್ಷೆ ಕೆ.ಎಸ್.ಮುತ್ತಮ್ಮ ಹಾಗೂ ಕಾರ್ಯದರ್ಶಿ ಅಕ್ಕಮ್ಮ ತಿಳಿಸಿದ್ದಾರೆ.

ನೌಕರರ ಗೌರವಧನ ಹೆಚ್ಚಳ, ಪಿಂಚಣಿ ನಿಗದಿ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆ ಸಂದರ್ಭದಲ್ಲಿ ಆಗ್ರಹಿಸಲಿದ್ದಾರೆ.

ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಮತ್ತು ಇನ್ನಿತರ ವಿಭಾಗದ ಸಿಬ್ಬಂದಿಗಳ ಸಂಘವು ಮುಷ್ಕರಕ್ಕೆ ಬೆಂಬಲ ನೀಡುತ್ತಿದೆ. ಆಸ್ಪತ್ರೆ ನಾನ್‌ ಕ್ಲೀನಿಂಗ್, ‘ಡಿ’ ಗ್ರೂಪ್‌ ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಎಚ್.ಜಾನಕಿ ಮಾಹಿತಿ ನೀಡಿದ್ದಾರೆ.

ಕೊಡಗಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ನೂರಾರು ಸಿಬ್ಬಂದಿಗೆ ಸರ್ಕಾರ ಹಾಗೂ ಸಂಬಂಧಿಸಿ ಗುತ್ತಿಗೆದಾರರು ಕನಿಷ್ಠ ವೇತನ ಪಾವತಿಸದೆ ಶೋಷಣೆ ಮಾಡುತ್ತಿದ್ದಾರೆ ಎಂದೂ ಅವರು ದೂರಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು