ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ, ಗಾಳಿಗೆ ಉರುಳಿದ ಮರಗಳು

ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆ; ಬಿರುಸುಗೊಂಡ ಕೃಷಿ ಚಟುವಟಿಕೆ
Last Updated 4 ಮೇ 2021, 5:31 IST
ಅಕ್ಷರ ಗಾತ್ರ

ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ಸಾಧಾರಣ ಮಳೆ ಸುರಿಯಿತು. 15 ನಿಮಿಷಗಳ ಕಾಲ ಗ್ರಾಮೀಣ ಭಾಗದಲ್ಲಿ ಮಳೆ ಆಯಿತು.

ಪಟ್ಟಣ ಸೇರಿದಂತೆ ಹಲವೆಡೆ ನಿಧಾನ ಗತಿಯಲ್ಲಿ ಮಳೆಯಾಗಿದ್ದು, ಕೆಲಸ ಕಾರ್ಯಗಳಿಗೆ ಅಡ್ಡಿಯಾಯಿತು. ಕೆಲವು ಗ್ರಾಮಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ.

ಹೊದ್ದೂರು, ಮೂರ್ನಾಡು, ಕಿಗ್ಗಾಲು, ಬೇತ್ರಿ ಗ್ರಾಮಗಳಲ್ಲಿ ಬಿರುಸಿನ ಮಳೆಯಾಗಿದೆ.

ಕಿಗ್ಗಾಲು ಗ್ರಾಮದಲ್ಲಿ 27 ಮಿ.ಮೀ ಮಳೆ ಸುರಿದಿದೆ. ಮಳೆಯೊಂದಿಗೆ ರಭಸದ ಗಾಳಿಯೂ ಬೀಸಿದ ಪರಿಣಾಮ ಗ್ರಾಮದ ತೋಟವೊಂದರಲ್ಲಿ ಮರದ ರೆಂಬೆಗಳು ಮುರಿದು ಬಿದ್ದು ಕಾಫಿ ಗಿಡಗಳಿಗೆ ಹಾನಿಯಾಗಿದೆ.

ನಾಪೋಕ್ಲು- ಮೂರ್ನಾಡು ಸಂಪರ್ಕ ರಸ್ತೆಯ ಮೇಲೆ ಮರ ಮುರಿದುಬಿದ್ದಿದೆ. ಮೂರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಪಟ್ಟಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಲ್ಲಿನ ಭಗವತಿ ಕಾಲೊನಿಯ ಮಾರಿಕಾಂಬಾ ದೇವಾಲಯದ ಚಾವಣಿಗೂ ಹಾನಿಯಾಗಿದೆ.

ಕಾವೇರಿ ನದಿ ನೀರಿನ ಮಟ್ಟ ಏರಿಕೆ
ಸಿದ್ದಾಪುರ:
ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಗುಡುಗು ಸಹಿತ ಭಾರಿ‌ ಮಳೆ ಸುರಿಯಿತು.

ಗುಹ್ಯ, ಅಮ್ಮತ್ತಿ, ನೆಲ್ಯಹುದಿಕೇರಿ, ಕರಡಿಗೋಡು ಸೇರಿದಂತೆ ಸುತ್ತಮುತ್ತ ಭಾಗದಲ್ಲಿ ಗುಡುಗು ಸಹಿತ ಮಳೆ ಆಯಿತು. ಕಳೆದ‌ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಮಳೆ ಗಾಳಿಯಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಕೆರೆಗಳಿಗೆ ನೀರು
ಗೋಣಿಕೊಪ್ಪಲು
: ಪಟ್ಟಣದ ಸುತ್ತಮುತ್ತ ಮಧ್ಯಾಹ್ನ 3.15ಕ್ಕೆ ಆರಂಭಗೊಂಡ ಮಳೆ ಸಂಜೆ 5 ಗಂಟೆವರೆಗೆ ಸುರಿಯಿತು. ಮಳೆಯೊಂದಿಗೆ ಗುಡುಗು ಸಿಡಿಲಿನ ಆರ್ಭಟ ಜೋರಾಗಿತ್ತು.

ತಿತಿಮತಿ, ನಾಗರಹೊಳೆ, ಕೋಣನ ಕಟ್ಟೆ ಸುಳುಗೋಡು, ಮಾಯಮುಡಿ, ಪೊನ್ನಪ್ಪಸಂತೆ, ಅರುವತ್ತೊಕ್ಕಲು, ಹಾತೂರು, ಪಾಲಿಬೆಟ್ಟ ಮೊದಲಾದ ಭಾಗಗಳಿಗೆ ವ್ಯಾಪಕ ಮಳೆಯಾಗಿದೆ.

ನಾಗರಹೊಳೆ ಅರಣ್ಯ ಭಾಗದಲ್ಲಿ ಒಂದು ವಾರದಿಂದ ಬಿಳುತ್ತಿರುವ ಮಳೆಗೆ ಗಿಡಮರಗಳೆಲ್ಲ ಹಸಿರಾಗಿವೆ. ಅರಣ್ಯದೊಳಗಿನ ಕೆರೆಗಳಿಗೂ ಹೊಸ ನೀರು ಬಂದಿದೆ.

ಗೋಣಿಕೊಪ್ಪಲು ಸುತ್ತಮುತ್ತ ಮಧ್ಯಾಹ್ನದ ಬಳಿಕ ನಿತ್ಯವೂ ಮಳೆ ಬೀಳುತ್ತಿರುವುದರಿಂದ ಕೊಳವೆಬಾವಿ ಹಾಗೂ ಕಾಫಿ ತೋಟದ ಕೆರೆಗಳ ನೀರಿನ ಮಟ್ಟವೂ ಏರಿಕೆಯಾಗಿದೆ.

ನಾಗರಹೊಳೆ ಅರಣ್ಯದೊಳಗಿನ ಕೆರೆಗಳಲ್ಲಿ ಬೇಸಿಗೆಯಲ್ಲೂ ನೀರಿತ್ತು. ಸಕಾಲಕ್ಕೆ ಮಳೆ ಬಿದ್ದುದರಿಂದ ಕೆರೆಗಳಿಗೆ ಹೊಸ ನೀರು ಮತ್ತಷ್ಟು ಸೇರಿಕೊಂಡಿದೆ ಎನ್ನುತ್ತಾರೆ ಆನೆಚೌಕೂರಿನ ಅರಣ್ಯ ವೀಕ್ಷಕರು.

ಸಾಧಾರಣ ಮಳೆ
ವಿರಾಜಪೇಟೆ:
ಪಟ್ಟಣ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸೋಮವಾರ ಸಾಧಾರಣ ಮಳೆ ಸುರಿಯಿತು.

ಬೆಳಗ್ಗಿನಿಂದಲೇ ಪಟ್ಟಣದಲ್ಲಿ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ 3ರ ಸುಮಾರಿಗೆ ಗುಡುಗು ಮಿಂಚು ಸಹಿತ ಕೆಲಕಾಲ ಮಳೆ ಸುರಿಯಿತು.

ಸಮೀಪದ ಒಂಟಿಯಂಗಡಿ, ಕಣ್ಣಂಗಾಲ, ಚೆಂಬೆಬೆಳ್ಳೂರು ಗ್ರಾಮಗಳ ವ್ಯಾಪ್ತಿಯಲ್ಲೂ ಸೋಮವಾರ ಮಳೆ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT