ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಚೀನ ನಾಣ್ಯ, ನೋಟು ಪ್ರದರ್ಶನದ ಆಕರ್ಷಣೆ

ವಿಶ್ವ ಪರಂಪರಾ ಸಪ್ತಾಹ- 2019: ಪಿ.ಕೆ.ಕೇಶವಮೂರ್ತಿ ನೇತೃತ್ವದಲ್ಲಿ 147ನೇ ಪ್ರದರ್ಶನ
Last Updated 22 ನವೆಂಬರ್ 2019, 13:26 IST
ಅಕ್ಷರ ಗಾತ್ರ

ಮಡಿಕೇರಿ: ಅರ್ಧ ಪೈಸೆ, ಒಂದಾಣೆ, ಎರಡಾಣೆ, ನಾಲ್ಕಾಣೆಯಂತಹ ಅಪರೂಪದ ಹಳೇ ನಾಣ್ಯಗಳು, ವಿವಿಧ ಬಗೆಯ ನೋಟುಗಳು, ಅಂಚೆ ಚೀಟಿಗಳು, ವಿದೇಶಿ ನಾಣ್ಯಗಳು ಶುಕ್ರವಾರ ನಗರದ ಜನರನ್ನು ಆಕರ್ಷಿಸಿದವು.

ನಗರದ ಕೋಟೆ ಆವರಣದ ಸರ್ಕಾರಿ ವಸ್ತು ಸಂಗ್ರಹಾಲಯ ಕಚೇರಿಯಲ್ಲಿ ವಿಶ್ವ ಪರಂಪರಾ ಸಪ್ತಾಹ 2019ರ ಅಂಗವಾಗಿ ಪ್ರಾಚೀನ ನಾಣ್ಯ ನೋಟುಗಳ ಪ್ರದರ್ಶನ ಹಾಗೂ ಕೊಡಗಿನ ಐತಿಹಾಸಿಕ ಪಾರಂಪರಿಕ ಕಟ್ಟಡಗಳ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.

ನ.24ರ ವರೆಗೆ ನಡೆಯುವ ಪ್ರದರ್ಶನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್‌ ಶುಕ್ರವಾರ ಚಾಲನೆ ನೀಡಿದರು.

147ನೇ ಪ್ರದರ್ಶನ: ಹುಣಸೂರು ನಾಣ್ಯ ಸಂಗ್ರಹಕಾರ ಪಿ.ಕೆ.ಕೇಶವಮೂರ್ತಿ ಅವರು ತಮ್ಮ 147ನೇ ಪ್ರಾಚೀನ ನಾಣ್ಯ ಮತ್ತು ನೋಟುಗಳ ಪ್ರದರ್ಶನದಲ್ಲಿ ಕ್ರಿಸ್ತ ಪೂರ್ವ 5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್ ಮಾರ್ಕ್ ನಾಣ್ಯಗಳು, ಗ್ರೀಕ್, ರೋಮನ್, ಗುಪ್ತರು, ಶಾತವಾಹನರು, ಕದಂಬ, ಚೋಳ, ಪಾಂಡ್ಯ, ಮೊಘಲರು, ಬ್ರಿಟಿಷರು, ಪೋರ್ಚುಗೀಸರು ಬಳಸಿದ ನಾಣ್ಯ, ನೋಟುಗಳು ಗಮನ ಸೆಳೆದವು.

ಮೊಘಲ್ ಸಾಮ್ರಾಜ್ಯದ ಅಕ್ಬರ್‌, ಜಹಾಂಗೀರ್‌, ಷಹಜಹಾನ್‌, ಔರಂಗಜೇಬ್‌ ಕಾಲದ ನಾಣ್ಯಗಳನ್ನು ಕುತೂಹಲದಿಂದಸಾರ್ವಜನಿಕರು ವೀಕ್ಷಿಸಿದರು. ಮೈಸೂರು, ವಿಜಾಪುರ, ತಿರುವಾಂಕೂರು ಮೊದಲಾದ ಭಾರತೀಯ ಸಂಸ್ಥಾನಗಳ ತಾಮ್ರ, ಚಿನ್ನ, ಬೆಳ್ಳಿ, ಸೀಸ ಹಾಗೂ ಹಿತ್ತಾಳೆ ನಾಣ್ಯಗಳು ಭಾರತ ಹಾಗೂ ವಿದೇಶಗಳ ನೋಟುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಕ್ರಿ.ಶ 1730ರಿಂದ ಕ್ರಿ.ಶ. 1907 ಕಾಲಕ್ಕೆ ಸೇರಿದ ಕೊಡಗು ಜಿಲ್ಲೆಯ ಕಕ್ಕಬೆ ರಾಜರ ಅರಮನೆ, ಓಂಕಾರೇಶ್ವರ, ರಾಜರ ಗದ್ದುಗೆ, ಹಳೇಯ ಕೋಟೆ ವಿಧಾನ ಸಭೆಯ ಚಿತ್ರ ವಿವಿಧ ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳ ಛಾಯಾಚಿತ್ರಗಳನ್ನು ಪ್ರದರ್ಶನವೂ ಏರ್ಪಡಿಸಲಾಗಿದೆ.

ಇನ್ನು ನೂರಾರು ವರ್ಷಗಳ ಹಿಂದಿನ ಛಾಪಾ ಕಾಗದಗಳು, ವಿದೇಶಗಳಲ್ಲಿ ಚಿನ್ನದಿಂದ ಮಾಡಿದ ನೋಟು, ಕನ್ನಡ ಅಂಕೆಗಳುಳ್ಳ ನಾಣ್ಯಗಳು, ಇತ್ತೀಚಿನ ನೋಟು, ಚಲಾವಣೆಯಿಂದ ಹಿಂತೆಗೆದುಗೊಂಡ ಸಾವಿರ ರೂಪಾಯಿ ನೋಟುಗಳು ಜನರನ್ನು ಹೆಚ್ಚು ಆಕರ್ಷಿಸಿದವು.

ನಾಣ್ಯ ಸಂಗ್ರಹಕಾರ ಪಿ.ಕೆ.ಕೇಶವ ಮೂರ್ತಿ ಮಾತನಾಡಿ, ಮಡಿಕೇರಿಯಲ್ಲಿ ಬಿಎಸ್‌ಎನ್‌ಎಲ್‌ ಉಪ ವಿಭಾಗೀಯ ಎಂಜಿನಿಯರ್‌ ನೌಕರಾಗಿದ್ದ ಸಂದರ್ಭದಲ್ಲಿಯೇ ಹಳೇ ನಾಣ್ಯ, ನೋಟುಗಳ ಸಂಗ್ರಹದ ಹವ್ಯಾಸ ಬೆಳೆಸಿಕೊಂಡಿದ್ದೆ. ನಂತರ, ಕೊಡಗಿನಲ್ಲಿ 1992ರಲ್ಲಿ ಮೊದಲ ಪ್ರದರ್ಶನ ಆಯೋಜಿಸಿದ್ದೆ. ನಂತರದಲ್ಲಿ 50ನೇ ಹಾಗೂ 125 ಹಾಗೂ ಇದೀಗ 147ನೇ ಪ್ರದರ್ಶನ ನೀಡಲು ಕೊಡಗಿನಲ್ಲೇ ಅವಕಾಶ ಸಿಕ್ಕಿರುವುದು ತುಂಬ ಸಂತೋಷವಾಗಿದೆ ಎಂದು ಹೇಳಿದರು.

ಮಡಿಕೇರಿಯ ನಿವಾಸಿಗಳಾದ ಡಾ.ಪಾಟ್ಕರ್‌, ನಾರಾಯಣ ಭಟ್‌, ವೈ.ಮಹಲಿಂಗೇಶ್ವರ ಭಟ್‌, ನಂಜಪ್ಪ, ಸೀತರಾಮ್‌ ನೀಡಿದ ಹಳೇಯ ನಾಣ್ಯ, ನೋಟುಗಳು ಸೇರಿದಂತೆ ಈಚೆಗೆ ಚೆಟ್ಟಳ್ಳಿಯ ಎಸ್ಟೇಟ್‌ ಮಾಲೀಕರು ಸಿ.ಎ.ಅಪ್ಪಣ್ಣ ಅವರ ಸಂಗ್ರಹಿಸಿದ ಸುಮಾರು 350 ನಾಣ್ಯಗಳನ್ನು ಸಂಗ್ರಹಿಸಿ ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

‘ಶಾಲೆಯ ಮಕ್ಕಳು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನ ನೋಡಿ ತಮ್ಮ ಅನಿಸಿಕೆಯನ್ನು ತಿಳಿಸಬೇಕು ಎಂದು ಕೇಶವ ಮೂರ್ತಿ ಕೋರಿದರು.

ಕಟ್ಟಡಗಳ ಛಾಯಾಚಿತ್ರಗಳ ಪ್ರದರ್ಶನವನ್ನು ನಾಣ್ಯ ಸಂಗ್ರಹಕಾರರಾದ ಡಾ.ಎಂ.ಜಿ. ಪಾಟ್ಕಾರ್‌ ಅವರು ಉದ್ಘಾಟಿಸಿದ್ದರು. ಡಾ.ಜಯಲಕ್ಷ್ಮಿ ಪಾಟ್ಕಾರ್ ಮತ್ತು ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ರೇಖಾ ಮತ್ತು ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT