ಶಾಂತಿಯುತ, ನ್ಯಾಯಸಮ್ಮತ ಚುನಾವಣೆಗೆ ಆದೇಶ

ಮಡಿಕೇರಿ: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧ ನೋಡಲ್ ಅಧಿಕಾರಿಗಳನ್ನು ತಾಲ್ಲೂಕುವಾರು ಮತ್ತು ವಿವಿಧ ಗ್ರಾಮ ಪಂಚಾಯಿತಿಗೆ ನಿಯೋಜಿಸಲಾಗಿದ್ದು, ನಿಷ್ಪಕ್ಷಪಾತ, ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಗ್ರಾ.ಪಂ ಚುನಾವಣೆ ಸಂಬಂಧ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾ.ಪಂ ಚುನಾವಣೆಯು ಪಕ್ಷ ರಹಿತವಾಗಿದ್ದು, ನೋಡಲ್ ಅಧಿಕಾರಿಗಳು ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು. ಸದಾಚಾರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಮೇಲ್ವಿಚಾರಣೆಯು ತಾಲ್ಲೂಕು ನೋಡಲ್ ಅಧಿಕಾರಿಗಳಿಗೆ ಇದೆ. ಹಾಗೆಯೇ, 7ರಿಂದ 10 ಗ್ರಾ.ಪಂಗಳಿಗೆ ಒಬ್ಬ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಗ್ರಾ.ಪಂ ಚುನಾವಣೆ ಸಂಬಂಧ ಕಚೇರಿ ಸಿದ್ಧತೆ ಮಾಡಿಕೊಳ್ಳಬೇಕು. ನೋಡಲ್ ಅಧಿಕಾರಿಗಳು, ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು ಎಂದರು.
ಬೆಳೆ ನಷ್ಟ ದಾಖಲು ಮಾಡುವುದು, ಜಿಪಿಎಸ್ ಮಾಡುವುದು ಮತ್ತಿತರ ಕಾರ್ಯವನ್ನು ಮಾಡಬಹುದಾಗಿದೆ ಎಂದರು.
ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯಿಲ್ಲ. ಆದರೆ, ಕೋವಿಡ್-19 ಮಾರ್ಗದರ್ಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ರಾಜಕೀಯ ಭಾಷಣ ಮಾಡುವಂತಿಲ್ಲ ಎಂದರು.
ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಸಿಂಧೆ ಡಿಯೋಬ, ಚುನಾವಣಾ ತಹಶೀಲ್ದಾರ್ ಕುಸುಮಾ, ತಹಶೀಲ್ದಾರ್ ಮಹೇಶ್, ಗೋವಿಂದ ರಾಜು, ಯೋಗಾನಂದ, ತಾ.ಪಂ ಇಒ ಲಕ್ಷ್ಮಿ, ಜಯಣ್ಣ, ಕೆ.ಸಿ.ಅಪ್ಪಣ್ಣ, ನೋಡಲ್ ಅಧಿಕಾರಿಗಳು, ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.