ಶುಕ್ರವಾರ, ಏಪ್ರಿಲ್ 16, 2021
21 °C
ಲಾಕ್‌ಡೌನ್‌ ನಂತರ ನಷ್ಟಕ್ಕೀಡಾದ ಖಾಸಗಿ ಶಿಕ್ಷಣ ಸಂಸ್ಥೆ, ಉಳಿವಿಗಾಗಿ ಪ್ರಯತ್ನ

ಶನಿವಾರಸಂತೆ: ಮ್ಯಾನೇಜಿಂಗ್ ಟ್ರಸ್ಟಿ ಈಗ ಸಾವಯವ ಗೊಬ್ಬರ ವಿತರಕ!

ಶ.ಗ.ನಯನತಾರಾ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ಕೊವೀಡ್ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್‌ ನಂತರ ನಷ್ಟಕ್ಕೀಡಾದ ಖಾಸಗಿ ಶಿಕ್ಷಣ ಸಂಸ್ಥೆಯ ಉಳಿವಿಗಾಗಿ ಮ್ಯಾನೇಜಿಂಗ್ ಟ್ರಸ್ಟಿಯೊಬ್ಬರು ಸಾವಯವ ಗೊಬ್ಬರ ವಿತರಕರಾಗಿದ್ದು, ಶಿಕ್ಷಕರಿಗೆ ವೇತನ ನೀಡುವುದರ ಜತೆಗೆ ವಿದ್ಯಾಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಸಮೀಪದ ಆಲೂರು ಸಿದ್ದಾಪುರ ಗ್ರಾಮೀಣ ಪ್ರದೇಶದದಲ್ಲಿ ಜಾನಕಿ ಕಾಳಪ್ಪ ಎಂಬುವರು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದು, ಅದರ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಎಚ್.ಕೆ.ಶಿವಪ್ರಕಾಶ್ ಅವರು ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದ ಶಿಕ್ಷಣ ಸಂಸ್ಥೆ ನಡೆಸಲು ಸಾಧ್ಯವಾಗದೇ ಮುಚ್ಚಲ್ಪಟ್ಟಿತ್ತು. ಶಿಕ್ಷಕರಿಗೆ ವೇತನ ನೀಡಲೂ ಹಣವಿಲ್ಲ. ಈ ಸಮಸ್ಯೆಗೆ ಧೃತಿಗೆಡದೇ ಶಿವಪ್ರಕಾಶ್ ಅವರು, ದಿನಸಿ ಅಂಗಡಿ ತೆರೆದು ವ್ಯಾಪಾರ ಆರಂಭಿಸಿದರೂ ಸಮಸ್ಯೆ ಬಗೆಹರಿಯಲಿಲ್ಲ. ಸಾವಯವ ಗೊಬ್ಬರ ವಿತರಕರಾಗಿ ಆದಾಯ ಗಳಿಸುತ್ತಿದ್ದಾರೆ. ಇದೀಗ ಶಿಕ್ಷಕರಿಗೆ ಸಂಬಳ ನೀಡಿ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಾ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

1996ರಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ತೆರಳಿದ್ದ ಶಿವಪ್ರಕಾಶ್ ಕ್ಲೀನರ್‌ ಕೆಲಸದ ಜತೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ವ್ಯಕ್ತಿತ್ವ ವಿಕಸನ, ಕ್ಯಾಲಿಗ್ರಫಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಣ ಸಂಪಾದಿಸಿದರು. ಸ್ವಗ್ರಾಮಕ್ಕೆ ಹಿಂದಿರುಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. 12 ವರ್ಷಗಳ ಹಿಂದೆ ಸ್ಥಾಪಿಸಿದ ವಿದ್ಯಾಸಂಸ್ಥೆ ಇಂದು, 10ನೇ ತರಗತಿಯವರೆಗೆ ಹಂತಹಂತವಾಗಿ ಬೆಳೆದಿದೆ.

ಇದೀಗ ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆಯ ಅಡಿ ಶಾಲೆ ತೆರೆಯಲು ಅನುಮತಿ ನೀಡಿದ್ದು, ವ್ಯಾಪಾರಿಯಾಗಿ, ಸಾವಯವ ಗೊಬ್ಬರ ವಿತರಕರಾಗಿ ಬಂದ ಆದಾಯದಲ್ಲಿ ಶಿವಪ್ರಕಾಶ್ ಶಿಕ್ಷಣಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿ ವ್ಯಕ್ತಿಯೆನಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು