ಸೋಮವಾರ, ಆಗಸ್ಟ್ 2, 2021
20 °C
ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ

ಸೋಮವಾರಪೇಟೆ | ಮುಂಗಾರು ಬಿರುಸು: ಭತ್ತದ ನಾಟಿ ಚುರುಕು

ಲೋಕೇಶ್. ಡಿ.ಪಿ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಈ ಬಾರಿ ಮುಂಗಾರು ಸರಿಯಾದ ಸಮಯಕ್ಕೆ ಆರಂಭಗೊಂಡಿದ್ದರೂ ಕಳೆದ 10 ದಿನಗಳಿಂದ ಮಳೆ ಸುರಿಯದ ಕಾರಣ ರೈತರು ಚಿಂತಾಕ್ರಾಂತರಾಗಿದ್ದರು. ಬುಧವಾರದಿಂದ ಮುಂಗಾರು ಚುರುಕುಗೊಂಡಿದ್ದು ಸ್ಥಗಿತಗೊಂಡಿದ್ದ ಎಲ್ಲ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ಮಳೆಯಾಶ್ರಿತ ಪ್ರದೇಶಗಳಲ್ಲಿ ದೀರ್ಘಾವಧಿ ಭತ್ತದ ತಳಿಗಳ ನಾಟಿ ಕೆಲಸ ಜುಲೈನಲ್ಲಿ ಮುಕ್ತಾಯವಾಗಬೇಕು. ಆದರೆ, ಮಳೆ ಕೈಕೊಟ್ಟ ಕಾರಣ ನಾಟಿ ಕೆಲಸಕ್ಕೆ ಆಡಚಣೆಯಾಗಿತ್ತು.  ಕೊಳವೆಬಾವಿಗಳಿಂದ ನೀರನ್ನು ಹಾಯಿಸಿ ಸಸಿ ಮಡಿಗಳನ್ನು ಹೆಚ್ಚಿನ ರೈತರು ಮಾಡಿಕೊಂಡಿದ್ದರು. ನೀರಿನ ಸೌಲಭ್ಯವಿಲ್ಲದವರು ವರುಣನ ಕೃಪೆಗಾಗಿ ಕಾಯುತ್ತಿದ್ದರು. ಎರಡು ವರ್ಷದಿಂದ ಪ್ರಕೃತಿ ವಿಕೋಪ, ಕರೊನಾ ಮಹಾಮಾರಿ, ಲಾಕ್ ಡೌನ್ ಸಮಸ್ಯೆ ಇವೆಲ್ಲ ಸಮಸ್ಯೆಗಳ ನಡುವೆ ಹೆಚ್ಚಿನ ಕೃಷಿಕರು ಮನೆ ಬಳಕೆಗಾಗಿ ಭತ್ತ ಬೆಳೆಯಲು ಮುಂದಾಗಿದ್ದಾರೆ. ಕೊಡ್ಲಿಪೇಟೆ, ಶನಿವಾರಸಂತೆ, ಕಸಬ ಹೋಬಳಿಯಲ್ಲಿ ಹೆಚ್ಚಿನ ರೈತರು ಕೊಳವೆಬಾವಿಗಳ ನೀರನ್ನು ನಂಬಿ ನಾಟಿಗೆ  ಸಿದ್ಧತೆ ಮಾಡಿಕೊಂಡಿದ್ದರು. ಶಾಂತಳ್ಳಿ ಹಾಗೂ ಸುಂಟಿಕೊಪ್ಪ ಹೋಬಳಿಗಳಲ್ಲಿ ಹೊಳೆ, ಕೊಲ್ಲಿ ನೀರನ್ನು ನಂಬಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಭತ್ತದ ಕೃಷಿಯಿಂದ ಯಾವುದೇ ಲಾಭ ಇಲ್ಲ ಎಂದು ಹಲವು ರೈತರು ಗದ್ದೆಗಳನ್ನು ಕಾಫಿ ಮತ್ತು ಅಡಿಕೆ ತೋಟಗಳನ್ನಾಗಿ ಪರಿವರ್ತಿಸಿದ್ದಾರೆ. ಹಲವರು ಪಾಳು ಬಿಟ್ಟರೆ, ಕೆಲವೇ ರೈತರು ಮಾತ್ರ ತಮ್ಮ ಮನೆಗಳಿಗೆ ಸಾಕಾಗುವಷ್ಟು ಭತ್ತ ಬೆಳೆಯಲು ಮುಂದಾಗುತ್ತಿದ್ದಾರೆ. ಜಿಲ್ಲೆಯಲ್ಲಿ ವಾಣಿಜ್ಯ ದೃಷ್ಟಿಯಿಂದ ಭತ್ತದ ಕೃಷಿ ಮಾಡುವುದು ಕಡಿಮೆಯಾಗಿದೆ ಎಂದು ಹೆಚ್ಚಿನ ರೈತರ ಅನಿಸಿಕೆಯಾಗಿದೆ.  ಭತ್ತದ ಕೃಷಿಯನ್ನು ಉಳಿಸಿಕೊಳ್ಳಬೇಕಾದರೆ, ರೈತರಿಗೆ ಸಹಾಯಧನ ನೀಡಿದಲ್ಲಿ ಮಾತ್ರ ಸಾಧ್ಯ ಎಂದು ಹಂಡ್ಲಿ ಗ್ರಾಮದ ಲಕ್ಷ್ಮೀಶೆಟ್ಟಿ ಹೇಳಿದರು.

ಒಂದೆಡೆ ಕಾರ್ಮಿಕರ ಸಮಸ್ಯೆ ಹೆಚ್ಚಾಗಿದೆ. ಅಲ್ಲದೆ, ಹವಾಮಾನ ವೈಪರಿತ್ಯದಿಂದ ಭತ್ತದ ಫಸಲುನ್ನು ಸರಿಯಾಗಿ ಪಡೆಯಲು ಸಾಧ್ಯವಿಲ್ಲದಂತೆ ಸ್ಥಿತಿ ಇದೆ. ಹೆಚ್ಚಿನ ಸಮಯದಲ್ಲಿ ಫಸಲು ಹೂಡಿದ ಬಂಡವಾಳಕ್ಕಿಂತ ಕಡಿಮೆ ಇರುತ್ತದೆ. ಕೆಲವೇ ಕೆಲವು ರೈತರು ಮಾತ್ರ ಉತ್ಪಾದನ ವೆಚ್ಚ ಜಾಸ್ತಿಯಾದರೂ ಭತ್ತ ಬೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಜಿಲ್ಲೆಯಲ್ಲಿ ಭತ್ತದ ಕೃಷಿಕರ ಕೈ ಹಿಡಿಯುವ ಕೆಲಸ ಸರ್ಕಾರದಿಂದಾಗಬೇಕೆಂದು ಹಾನಗಲ್ಲು ಗ್ರಾಮದ ಮೋಹನ್ ಹೇಳಿದರು.

ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 10 ಸಾವಿರ ಹೆಕ್ಟೇರ್ ಭತ್ತದ ಬಿತ್ತನೆ ಗುರಿ ಇರಿಸಿಕೊಳ್ಳಲಾಗಿದೆ. ಈಗಾಗಲೇ ಸರ್ಕಾರದ ಸಹಾಯಧನದಲ್ಲಿ ರೈತರಿಗೆ ತುಂಗ, ತನು, ಬಾಂಗ್ಲ ರೈಸ್ , ಇಂಟಾನ್, ವಿಎನ್ ಆರ್, ಅತಿರ 800 ಕ್ವಿಂಟಲ್ ಭತ್ತದ ಬಿತ್ತನೆ ಬೀಜ ವಿತರಿಸಲಾಗಿದೆ. ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ ಭಾಗದ 1800 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿದೆ. ಮುಸುಕಿನ ಜೋಳ 4300 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ ಎಂದು ತೋಟಗಾರಿಕಾ ಇಲಾಖೆಯ ಕೃಷಿ ಸಹಾಯಕ ನಿರ್ದೇಶಕ ಡಾ.ಎಚ್.ಎಸ್.ರಾಜಶೇಖರ್ ತಿಳಿಸಿದ್ದಾರೆ.

ಇಲ್ಲಿಯವರೆಗೆ ಯಾವುದೇ ಕಾಯಿಲೆಗಳು ಕಂಡುಬಂದಿಲ್ಲ. ಭತ್ತದ ಸಸಿ ಮಡಿಗಳಲ್ಲಿ ಬೆಂಕಿರೋಗ ಕಂಡುಬಂದಲ್ಲಿ 10 ಲೀಟರ್ ನೀರಿಗೆ 10 ಗ್ರಾಂ ಬ್ಯಾವೆಸ್ಟಿನ್ ಹಾಗೂ 20 ಗ್ರಾಂ ಎಕಾಲೆಕ್ಸ್ ಮಿಶ್ರಣ ಮಾಡಿ ಸಿಂಪಡಿಸಿದಲ್ಲಿ ನಿಯಂತ್ರಣಕ್ಕೆ ಬರುವುದು ಎಂದು ಅವರು ಮಾಹಿತಿ ನೀಡಿದರು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 373.40 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 335.28 ಮಿ.ಮೀ. ಮಳೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು