ಭಾನುವಾರ, ನವೆಂಬರ್ 29, 2020
20 °C
ನ.30ರಿಂದ ರೈತರು ಹೆಸರು ನೋಂದಣಿಗೆ ಅವಕಾಶ

ಮಡಿಕೇರಿ:ಬೆಂಬಲ ಬೆಲೆಯಡಿ ಭತ್ತ ಖರೀದಿ: ಅನೀಸ್‌ ಕಣ್ಮಣಿ ಜಾಯ್‌ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಬೆಂಬಲ ಬೆಲೆ ಯೋಜನೆ ಅಡಿ ಭತ್ತ ಖರೀದಿ ಸಂಬಂಧಿಸಿದಂತೆ ಇದೇ 30ರಿಂದ ಡಿ.30ರ ವರೆಗೆ ಕೃಷಿಕರು ಹೆಸರು ನೋಂದಣಿಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಭತ್ತ ಖರೀದಿ ಸಂಬಂಧ ಜಿಲ್ಲಾಮಟ್ಟದ ಟಾಸ್ಕ್‌ಪೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭತ್ತ ಖರೀದಿಯನ್ನು ಕುಶಾಲನಗರದ ಸಹಕಾರ ಮಾರುಕಟ್ಟೆ ಮಹಾಮಂಡಳಿ ಕಚೇರಿ, ಮಡಿಕೇರಿ, ಗೋಣಿಕೊಪ್ಪಲು ಎಪಿಎಂಸಿಗಳಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಆರ್‌ಟಿಸಿಯಲ್ಲಿ ರೈತರ ಹೆಸರು ಮತ್ತು ಭತ್ತ ಬೆಳೆ ಕಡ್ಡಾಯವಾಗಿ ನಮೂದಾಗಿರಬೇಕು. ‘ಫ್ರೂಟ್ಸ್’ ದತ್ತಾಂಶಕ್ಕೆ ಆಧಾರ್ ಜೋಡಣೆ ಆಗಿರಬೇಕು. ಒಂದು ಎಕರೆಗೆ 16 ಕ್ವಿಂಟಲ್‍ರಂತೆ ಗರಿಷ್ಠ ಎರಡೂವರೆ ಎಕರೆಗೆ 40 ಕ್ವಿಂಟಲ್ ಭತ್ತ ಖರೀದಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

‘ಫ್ರೂಟ್ಸ್’ ದತ್ತಾಂಶದಿಂದ ರೈತರ ಮಾಹಿತಿಯನ್ನು ನೇರವಾಗಿ ಪಡೆದು ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿ ಅನ್ವಯ ಕನಿಷ್ಠ ಬೆಂಬಲ ಯೋಜನೆ ಅಡಿ ನೋಂದಣಿ ಮಾಡಿದಂತಹ ರೈತರಿಂದ ಭತ್ತವನ್ನು ಖರೀದಿಸಲಾಗುತ್ತದೆ. ಆದ್ದರಿಂದ, ಹೆಸರು ನೋಂದಣಿ ಮಾಡಿದ ಕೃಷಿಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಭತ್ತ ಬೆಳೆದಿರುವ ರೈತರು ಆರ್‌ಟಿಸಿಯಲ್ಲಿ ತಮ್ಮ ಹೆಸರು ಮತ್ತು ಭತ್ತ ಬೆಳೆ ನಮೂದು ಆಗಿರದಿದ್ದಲ್ಲಿ ಸರಿಪಡಿಸಿಕೊಳ್ಳಲು ಕಾಲಾವಕಾಶವಿದೆ. ಈಗಲೇ ಸರಿಪಡಿಸಿಕೊಳ್ಳಬೇಕು. ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಉಪ ನಿರ್ದೇಶಕ ಗೌರವ ಕುಮಾರ್ ಶೆಟ್ಟಿ ಅವರು ಮಾತನಾಡಿ, ಈ ಬಾರಿ ಭತ್ತ ಖರೀದಿಗೆ ಸಂಬಂಧಿಸಿದಂತೆ ರೈತರ ಹೆಸರು ನೋಂದಣಿಯಿಂದ ಹಣ ಪಾವತಿಸುವವರೆಗೆ ಎಲ್ಲ ಪ್ರಕ್ರಿಯೆಗಳನ್ನು ಸಹಕಾರ ಮಾರಾಟ ಮಹಾ ಮಂಡಳಕ್ಕೆ ವಹಿಸಲಾಗಿದೆ ಎಂದು ತಿಳಿಸಿದರು.
ಅಕ್ಕಿ ಗಿರಣಿ ಮಾಲೀಕರು ರೈತರಿಂದ ಸ್ವೀಕರಿಸಿದ ಭತ್ತದ ಮಾದರಿಯನ್ನು ಸಂಗ್ರಹಣಾ ಏಜೆನ್ಸಿಗಳಿಂದ ನೇಮಕ ಮಾಡುವ ಗುಣಮಟ್ಟ ಪರಿಶೀಲನಾ ಗ್ರೇಡರ್ ಮೂಲಕ ಗುಣಮಟ್ಟ ದೃಢೀಕರಣ ಪಡೆದ ನಂತರವೇ ಭತ್ತವನ್ನು ಖರೀದಿಸಿ ಸಂಗ್ರಹಣೆ ಮಾಡಬೇಕಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದರು.

ರೈತರಿಂದ ಭತ್ತವನ್ನು ಪಡೆದ ನಂತರ ಅಕ್ಕಿ ಗಿರಣಿ ಮಾಲೀಕರು ಈ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ನಮೂದಿಸಬೇಕು. ಹೀಗೆ ನಮೂದಿಸುವಾಗ ಗುಣಮಟ್ಟ ಪರಿಶೀಲನಾ ಅಧಿಕಾರಿ ನೀಡಿರುವ ಒಪ್ಪಿಗೆ ಪತ್ರವನ್ನು ಆನ್‍ಲೈನ್‍ನಲ್ಲಿ ಸ್ಕ್ಯಾನ್ ಮಾಡಿ ಆಪ್ ಲೋಡ್ ಮಾಡಲಾಗುತ್ತದೆ ಎಂದರು.

ಮಾಹಿತಿ ನೀಡಿ ನೋಂದಣಿ ಮಾಡಿದ ರೈತರು ಇಲಾಖೆಯಿಂದ ಕಳುಹಿಸುವ ಎಸ್‍ಎಂಎಸ್ ಆಧಾರದ ಮೇಲೆ ಸಂಬಂಧಪಟ್ಟ ಅಕ್ಕಿ ಗಿರಣಿಗಳಿಗೆ ಭತ್ತದ ಮಾದರಿಯನ್ನು ಕಡ್ಡಾಯವಾಗಿ ನೀಡಬೇಕು ಎಂದರು.

ಇತ್ತೀಚೆಗೆ ನಡೆದ ಜಿ.ಪಂ.ಸಾಮಾನ್ಯ ಸಭೆಯಲ್ಲಿ ಅತಿರ ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿಸಲು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಲಾಗಿದೆ. ಅತಿರ ಭತ್ತವನ್ನು ಸಾರ್ವಜನಿಕ ವಿತರಣಾ ಪದ್ಧತಿ ಅಡಿಯಲ್ಲಿ ಬಳಸುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಈ ಸಂಬಂಧ ಚರ್ಚೆಯಾಗಿರುವ ಬಗ್ಗೆ ಜಿ.ಪಂ ಸಿಇಒ ಅವರ ಮೂಲಕ ಆಹಾರ ಇಲಾಖೆ ಆಯುಕ್ತರಿಗೆ ಮಾಹಿತಿ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಕೃಷಿಕರು ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯಿತಿ ಅಥವಾ ಆಹಾರ ಇಲಾಖೆಯಲ್ಲಿ ಪಡೆಯಬಹುದಾಗಿದೆ ಎಂದು ಗೌರವ್ ಕುಮಾರ್ ಶೆಟ್ಟಿ ಅವರು ಕೋರಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ. ಶೇಖ್, ಸಹಕಾರ ಮಾರಾಟ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕ ಹರೀಶ್ ಅವರು ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಬಗ್ಗೆ ಹಲವು ಮಾಹಿತಿ ನೀಡಿದರು. ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕರು ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.