ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದ ತೀರ್ಮಾನವೇ ಅಂತಿಮ: ಡಿ.ಕೆ.ಶಿವಕುಮಾರ್

‘ಹೆಸರು ಘೋಷಣೆ ಬಳಿಕ ಪಕ್ಷ ವಿರೋಧಿ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ’
Last Updated 24 ಡಿಸೆಂಬರ್ 2021, 13:40 IST
ಅಕ್ಷರ ಗಾತ್ರ

ಮಡಿಕೇರಿ: ‘ರಾಜ್ಯದಲ್ಲಿ ಬದಲಾವಣೆ ಗಾಳಿ ಆರಂಭವಾಗಿದ್ದು ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬರಲಿದೆ. ವಿಧಾನ ಪರಿಷತ್ ಚುನಾವಣೆಯೇ ಅದಕ್ಕೆ ಸಾಕ್ಷಿ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಲ್ಲಿ ಹೇಳಿದರು.

ನಗರದ ಕ್ರಿಸ್ಟಲ್‌ ಕೋರ್ಟ್‌ನಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ನಿಂದ ನಡೆದ ಕಾರ್ಯಕರ್ತರ ಸಂಘಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬೆಳಗಾವಿಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯೇ ಸೋತಿದ್ದಾರೆ. ಕೊಡಗು ಸೇರಿದಂತೆ ಕೆಲವು ಕ್ಷೇತ್ರ ಕಡಿಮೆ ಅಂತರದ ಮತಗಳಿಂದ ಕಾಂಗ್ರೆಸ್‌ ಅಭ್ಯರ್ಥಿಗಳು ಸೋತಿದ್ದಾರೆ. ಎಲ್ಲಾ ಕಡೆಯೂ ನಮ್ಮ ಅಭ್ಯರ್ಥಿಗಳು ಪ್ರಬಲ ಹೋರಾಟ ನೀಡಿದ್ದಾರೆ’ ಎಂದು ಹೇಳಿದರು.

‘ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಇರಬೇಕು. ಸುಮ್ಮನೆ ಹೇಳಿಕೆ ನೀಡಬಾರದು. ಒಂದು ವೇಳೆ ಸೂಚನೆ ಮೀರಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಕೆಶಿ ಮುಖಂಡರಿಗೆ ಎಚ್ಚರಿಕೆ ರವಾನಿಸಿದರು.

‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಎಲ್ಲಾ ಲೆಕ್ಕಾಚಾರ ಹಾಕಿಯೇ ಮಂಥರ್‌ಗೌಡಗೆ ಟಿಕೆಟ್‌ ನೀಡಲಾಗಿತ್ತು. ಕೆಲವೇ ಮತಗಳಿಂದ ಅವರು ಸೋತಿದ್ದಾರೆ. ಆದರೆ, ಕಾರ್ಯಕರ್ತರ ಮನಸ್ಸು, ಹೃದಯ ಗೆದ್ದಿದ್ದಾರೆ. ಜಿಲ್ಲೆಯಲ್ಲಿ ಒಗ್ಗಟ್ಟು ಪ್ರದರ್ಶನ ಕಾಣಿಸುತ್ತಿದೆ. ಅದು ಚುನಾವಣೆಯ ತನಕವೂ ಇರಬೇಕು. ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ. ನಾನೂ ಸೋತಿದ್ದೇನೆ. ಧೃತಿಗೆಡದೇ ಕೆಲಸ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳೇ ಜಯಿಸಲಿದ್ದಾರೆ. ಪ್ರಯತ್ನ ಹಾಕಿ’ ಎಂದು ಮುಖಂಡರಿಗೆ ಸಂದೇಶ ನೀಡಿದರು.

‘ಕಾವೇರಿಯು ಗಂಗೆಯಷ್ಟೇ ಪವಿತ್ರಳು. ಮೇಕೆದಾಟು ಯೋಜನೆ ಸಾಕಾರಗೊಂಡರೆ ರಾಜ್ಯದ ಏಳು ಜಿಲ್ಲೆಗಳು ಹಾಗೂ ಬೆಂಗಳೂರಿನಲ್ಲಿ ಕುಡಿಯುವ ಸಮಸ್ಯೆ ನೀಗಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯೋಜನೆ ವಿಸ್ತೃತ ವರದಿ ತಯಾರಿಸಲಾಗಿತ್ತು’ ಎಂದು ಮಾಹಿತಿ ನೀಡಿದರು.

‘ಕೊಡಗಿನ ಭೂಮಿ ಅತ್ಯಂತ ಶಕ್ತಿಶಾಲಿ. ಕಾವೇರಿ ರಾಜ್ಯವನ್ನೇ ಶ್ರೀಮಂತಗೊಳಿಸಿದೆ. ಕಾವೇರಿ ಆಶೀರ್ವಾದದಿಂದ ಹೋರಾಟ ಸಫಲವಾಗುವ ನಂಬಿಕೆಯಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ರಾಜ್ಯದ ಜನರು ಬಲದಾವಣೆ ಬಯಸಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಮಾತನಾಡಿ, ‘ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಒಟ್ಟಾರೆ ಬಿಜೆಪಿಗಿಂತ ಹೆಚ್ಚಿನ ಮತಗಳನ್ನು ಕಾಂಗ್ರೆಸ್‌ ಅಭ್ಯರ್ಥಿಗಳು ಪಡೆದಿದ್ದಾರೆ. ಅದೇ ನಮ್ಮ ಶಕ್ತಿ ತೋರಿಸುತ್ತದೆ’ ಎಂದು ಹೇಳಿದರು.

ಮುಖಂಡ ಡಾ.ಮಂಥರ್‌ಗೌಡ ಮಾತನಾಡಿ, ‘ಪರಿಷತ್‌ ಚುನಾವಣೆಯಲ್ಲಿ ನಾನು ಸೋತರೂ ಸೇವೆಗೆ ನಿಮ್ಮೊಂದಿಗೆ ಇದ್ದೇನೆ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದರೆ ಮಾತ್ರ ಬಿಜೆಪಿ ಸೋಲಿಸಲು ಸಾಧ್ಯ’ ಎಂದು ಹೇಳಿದರು.

ಹಿರಿಯ ಮುಖಂಡ ಎಚ್‌.ಎಸ್‌.ಚಂದ್ರಮೌಳಿ ಮಾತನಾಡಿ, ‘ಪರಿಷತ್ ಚುನಾವಣೆ ಬಳಿಕ ಕೊಡಗು ಜಿಲ್ಲೆಯಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ. ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅದು ಸಾಧ್ಯವಿಲ್ಲ. ಗೇಟಿನ ತನಕ ಬಂದಿದ್ದೇವೆ. ಒಗ್ಗಟ್ಟು ಪ್ರದರ್ಶಿಸಿದರೆ ಗೇಟಿನ ಒಳಗೂ ಹೋಗಲು ಸಾಧ್ಯವಿದೆ’ ಎಂದು ಪ್ರತಿಪಾದಿಸಿದರು.

ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, ‘ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷ ಇರಲಿ ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡಬಾರದು. ಆಡಳಿತ ಪಕ್ಷ ಒಮ್ಮತದ ನಿರ್ಧಾರಕ್ಕೆ ಬಂದು ಮೇಕೆದಾಟು ಕಾರ್ಯಯೋಜನೆಗೆ ಸಹಕರಿಸಬೇಕು’ ಎಂದು ಹೇಳಿದರು.

‘ಬಿಜೆಪಿಯಲ್ಲಿನ ವ್ಯಕ್ತಿ ಮೇಲೆ ವಿರೋಧ ಇಲ್ಲ. ಸೈದ್ಧಾಂತಿಕವಾಗಿ ಪಕ್ಷವನ್ನು ವಿರೋಧಿಸಬೇಕಿದ್ದು, ರಾಷ್ಟ್ರದಲ್ಲಿ ಬಿಜೆಪಿಯನ್ನೇ ಕಿತ್ತೊಗೆಯಬೇಕು’ ಎಂದ ಅವರು, ‘2023ರ ಚುನಾವಣೆಯಲ್ಲಿ ಬದಲಾವಣೆಯ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದು ಹೇಳಿದರು.

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಮಾತನಾಡಿ, ‘ಡಿ.ಕೆ.ಶಿವಕುಮಾರ್ ನಾಯಕತ್ವದ ಕಾಂಗ್ರೆಸ್‌ಗೆ ಹುರುಪು ಬಂದಿದೆ. ಆ ಉತ್ಸಾಹ ರಾಜ್ಯದಾದ್ಯಂತ ತುಂಬಿದ್ದು, ಇದೇ ಉತ್ಸಾಹದಿಂದ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಕಾಂಗ್ರೆಸ್ ಕಟ್ಟಲಿದ್ದೇವೆ’ ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ಚಿತ್ರಣ ಬದಲು ಮಾಡಿದ್ದೇವೆ. 2023ರ ಚುನಾವಣೆ ವೇಳೆಗೆ ಬಲಿಷ್ಠ ಕಾಂಗ್ರೆಸ್ ಕಟ್ಟಿ ನಿಮಗೆ ಅರ್ಪಿಸುವುದಾಗಿ ಪೊನ್ನಣ್ಣ ನುಡಿದರು.

‘ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಅಧಿಕಾರ ಕಳೆದುಕೊಂಡಿದ್ದು, ನಾಯಕರುಗಳು ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷ ಬಲ ಬರ್ಧನೆಗೆ ಶ್ರಮಿಸಲಿದ್ದೇವೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ವಿಧಾನಸಭೆ, ಲೋಕಸಭಾ ಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ನೀಡಲಿದ್ದೇವೆ. ಮೇಕೆದಾಟು ಹೋರಾಟಕ್ಕೆ ಕೊಡಗಿನಿಂದ ಒಮ್ಮತದ ಬೆಂಬಲ ನೀಡುತ್ತೇವೆ’ ಎಂದು ಧರ್ಮಜಾ ಉತ್ತಪ್ಪ ಹೇಳಿದರು.

ಮಾಜಿ ಸಚಿವ ಜೀವಿಜಯ ಮಾತನಾಡಿದರು. ಮಾಜಿ ಸಚಿವ ಎಚ್.ಎಂ.ರೇವಣ್ಣ, ಪ್ರದೇಶ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ, ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡರ್‌, ಕೆ.ಎಂ.ಲೊಕೇಶ್, ಕೆಪಿಸಿಸಿ ವೀಕ್ಷಕಿ ಮಂಜು, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್, ಮಾಜಿ ಶಾಸಕ ಇಬ್ರಾಹಿಂ, ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ, ಕೆ.ಕೆ.ಮಂಜುನಾಥ್‌ಕುಮಾರ್‌, ರಾಜೇಶ್‌ ಯಲ್ಲಪ್ಪ, ವೆಂಕಟೇಶ್‌, ನಿತಿನ್‌ರಾಜ್‌ ಮೌರ್ಯ, ಸೂರಜ್‌ ಹೆಗಡೆ., ಐಶ್ವರ್ಯಾ, ಲಕ್ಷ್ಮಣ್‌ ಹಾಜರಿದ್ದರು. ಮುಖಂಡ ಟಿ.ಪಿ.ರಮೇಶ್‌ ಅವರು ಸ್ವಾಗತಿಸಿದರು. ಮುನೀರ್‌ ಅಹಮದ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT