ಭಾನುವಾರ, ಮೇ 9, 2021
24 °C
ಗ್ರಾಮೀಣ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುವ ದಾನಿಗಳು

ಬಡಮಕ್ಕಳ ಏಳ್ಗೆಗೆ ಮಿಡಿಯುವ ದಂಪತಿ ಮನ

ಶ.ಗ.ನಯನತಾರಾ Updated:

ಅಕ್ಷರ ಗಾತ್ರ : | |

ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಬೆಂಗಳೂರಿನ ದಾನಿಗಳಾದ ಗುರುಪ್ರಸಾದ್–ಪೂರ್ಣಿಮಾ ದಂಪತಿ ವಿದ್ಯಾರ್ಥಿಗಳೊಂದಿಗೆ

ಶನಿವಾರಸಂತೆ: ಇಂದಿನ ಆಧುನಿಕ ಸಮಾಜದಲ್ಲಿ ತಾನು ಮತ್ತು ತನ್ನವರ ಬಗ್ಗೆ ಚಿಂತಿಸುವವರೇ ಹೆಚ್ಚಾಗಿರುವಾಗ ಎಲ್ಲೋ ಕುಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡಮಕ್ಕಳಿಗಾಗಿ ಈ ದಂಪತಿಯ ಹೃದಯ ಮಿಡಿಯುತ್ತಿದೆ.

ಬೆಂಗಳೂರಿನ ಎನ್.ಗುರುಪ್ರಸಾದ್ ಮತ್ತು ಪೂರ್ಣಿಮಾ ಅಯ್ಯಂಗಾರ್ ಅವರೇ ದಂಪತಿ. ತಮ್ಮ ನಿವೃತ್ತ ಜೀವನದಲ್ಲೂ ಸ್ವಂತ ಖರ್ಚಿನಲ್ಲಿ ಖುದ್ದಾಗಿ ತಾವೇ  ಶಾಲೆಗಳಿಗೆ ಭೇಟಿ ನೀಡಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ವಿದ್ಯಾರ್ಥಿಗಳಿಗೆ ಅಗತ್ಯ ಸಲಕರಣೆಗಳನ್ನು ಒದಗಿಸುತ್ತಿದ್ದಾರೆ. ಇಂದು ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ನೂರಾರು ವಿದ್ಯಾರ್ಥಿಗಳು ಇವರ ಸಹಾಯ–ಸಹಕಾರವನ್ನು ಸ್ಮರಿಸುತ್ತಿದ್ದಾರೆ.

ಬೆಂಗಳೂರಿನ ದೇವಿನಗರದ ಗುರುಪ್ರಸಾದ್ ಅಮೆರಿಕದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್‌ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಪೂರ್ಣಿಮಾ ಅಯ್ಯಂಗಾರ್ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾಫ್ಟ್‌ವೇರ್ ಉದ್ಯಮಿ. ಈ ದಂಪತಿ ಕೊಡಗು ಜಿಲ್ಲೆಯ ಕುಗ್ರಾಮಗಲ್ಲಿರುವ ಹಲವಾರು ಶಾಲೆಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಿದ್ದಾರೆ.

ಇಂದು ಹಲವಾರು ಮಂದಿ ಸಮಾಜಸೇವೆಯ ಹೆಸರಿನಲ್ಲಿ ಮಠ, ಮಸೀದಿ , ದೇವಾಲಯ ಸಂಘ–ಸಂಸ್ಥೆಗಳಿಗೆ ಹಣ ನೀಡಿದರೇ ಈ ದಂಪತಿ ಎಲ್ಲಿ ಹಣ ವಿನಿಯೋಗಿಸಿದರೆ ಅದು ಸದುಪಯೋಗವಾಗುತ್ತದೆ ಎಂಬ ಚಿಂತನೆ ಮಾಡಿದ್ದಾರೆ. ಅದಕ್ಕಾಗಿ ಭವಿಷ್ಯದ ಭವ್ಯ ಪ್ರಜೆಗಳನ್ನು ನಿರ್ಮಾಣ ಮಾಡುವಂತಹ ಶಾಲೆಗಳನ್ನು ಅದರಲ್ಲೂ ಬಡ ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಂತಹ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.

ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿರುವ ದಂಪತಿ ಕೊಡಗಿನ ಶನಿವಾರಸಂತೆ ಸಮೀಪದ ಮುಳ್ಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಕರಿಕೆ, ಯವಕಪಾಡಿ, ಮರಂದೋಡು, ಅರಮೇರಿ, ನಾಲಡಿ ಇತ್ಯಾದಿ ಹಲವಾರು ಶಾಲೆಗಳಿಗೆ ಸುಮಾರು ಏಳೆಂಟು ವರ್ಷಗಳಿಂದ ಭೇಟಿ ನೀಡಿ ನಿರಂತರವಾಗಿ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.

ಇಲ್ಲಿಯ ಹಲವು ಶಾಲೆಗಳಿಗೆ ಕಂಪ್ಯೂಟರ್, ಗ್ರಂಥಾಲಯಕ್ಕೆ ಪುಸ್ತಕಗಳು, ಸಮವಸ್ತ್ರ, ಗಮ್ ಬೂಟುಗಳು, ತಟ್ಟೆ–ಲೋಟ, ಸೋಲಾರ್ ಲೈಟ್ಸ್ ಲೇಖನ ಸಾಮಗ್ರಿಗಳು, ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗದ ಪುಸ್ತಕಗಳು, ನೀತಿಕಥೆಗಳು, ವ್ಯಕ್ತಿಚರಿತ್ರೆ, ಸಾಮಾನ್ಯ ಜ್ಞಾನದ ಪುಸ್ತಕಗಳು, ನೈರ್ಮಲ್ಯ ಕಿಟ್, ಗ್ಲೋಬ್, ಶೂ, ಕ್ಯಾಪ್ ಹೀಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.

ಎಲ್ಲವನ್ನೂ ಒದಗಿಸಿ ಸುಮ್ಮನೆ ಕೂರುವ ಜಾಯಮಾನ ಇವರದಲ್ಲ. ಅವು ಶಾಲೆಗಳಲ್ಲಿ ವ್ಯವಸ್ಥಿತವಾಗಿ ಹೇಗೆ ಸದುಪಯೋಗವಾಗುತ್ತಿದೆ ಹಾಗೂ ವಿದ್ಯಾರ್ಥಿಗಳು ಅವುಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆಯೇ ಎಂದು ಮತ್ತೆ ಮತ್ತೆ ಆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸುತ್ತಾರೆ. ಈ ದಂಪತಿ ಬೆಂಗಳೂರಿನಲ್ಲಿರುವ ಎರಡು ಶಾಲೆಗಳಲ್ಲಿ ಬಡವಿದ್ಯಾರ್ಥಿಗಳ ಹಾಗೂ ಒಬ್ಬ ಕಾಲೇಜ್ ವಿದ್ಯಾರ್ಥಿಯ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ವೃದ್ಧಾಶ್ರಮಗಳಿಗೂ ಭೇಟಿ ನೀಡಿ ಬ್ಲಾಂಕೇಟ್‌ಗಳನ್ನು ನೀಡಿದ್ದಾರೆ.

ಉತ್ತಮ ಶಿಕ್ಷಕ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿ.ಎಸ್.ಸತೀಶ್ ಅವರ ಪರಿಶ್ರಮ ಹಾಗೂ ಮುಖ್ಯಶಿಕ್ಷಕ ಮಂಜುನಾಥ್ ಅವರ ಸಹಕರದಿಂದ  ಮಾದರಿ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿರುವ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ಈ ದಂಪತಿ ಭೇಟಿ ನೀಡಿದ್ದರು. ಅಲ್ಲಿ ಕಲಿಯುತ್ತಿರುವ 25 ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಸಂಭ್ರಮಿಸಿದರು. ಈ ದಂಪತಿಯ ಔದಾರ್ಯದಿಂದ ಎಷ್ಟೋ ಬಡ ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗುತ್ತಿದೆ.

ಸ್ವಾರ್ಥಪರ ಈ ಸಮಾಜದಲ್ಲಿ ದುಡಿದ ಹಣವನ್ನು ಮೋಜು ಮಸ್ತಿ ಎಂದು ದುಂದುವೆಚ್ಚ ಮಾಡುವವರ ನಡುವೆ ಗುರುಪ್ರಸಾದ್–ಪೂರ್ಣಿಮಾ ದಂಪತಿ ನಿಸ್ವಾರ್ಥ ಸೇವೆಗೆ ನಮನ ಸಲ್ಲಿಸಲೇಬೇಕು
- ಸಿ.ಎಸ್.ಸತೀಶ್, ಶಿಕ್ಷಕ, ಮುಳ್ಳೂರು ಸರ್ಕಾರಿ ಶಾಲೆ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು