ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಷಿಪ್‌: ಜಾಣ್ಮೆ, ಕಾತರ, ಕ್ಷಣಾರ್ಧದಲ್ಲಿ ಉತ್ತರ

ಕೂರ್ಗ್‌ ಪಬ್ಲಿಕ್‌ ಶಾಲೆಗೆ ಮೊದಲ ಎರಡು ಸ್ಥಾನ, ಶಾಂತಿನಿಕೇತನ ಶಾಲೆ ತೃತೀಯ
Last Updated 17 ಜನವರಿ 2020, 14:17 IST
ಅಕ್ಷರ ಗಾತ್ರ

ಮಡಿಕೇರಿ: ಜಾಣ್ಮೆ, ಕ್ಷಣಾರ್ಧದಲ್ಲಿ ಉತ್ತರಿಸುವ ಪರಿ, ಆಲೋಚನಾ ಸಾಮರ್ಥ್ಯ, ಕಾತರ, ತಳಮಳ, ಕುತೂಹಲ... ಅಲ್ಲಿ ಸೇರಿದ್ದ ವಿದ್ಯಾರ್ಥಿಗಳಲ್ಲಿ ಎಲ್ಲವೂ ಒಮ್ಮೆಲೇ ಕಂಡುಬಂದವು. ಅದಕ್ಕೆ ವೇದಿಕೆ ಕಲ್ಪಿಸಿದ್ದು ‘ಪ್ರಜಾವಾಣಿ’ ಹಾಗೂ ಡೆಕ್ಕನ್‌ ಹೆರಾಲ್ಡ್‌ ವತಿಯಿಂದ ದೀಕ್ಷಾ ಸಂಸ್ಥೆಯ ಸಹಯೋಗದಲ್ಲಿ ನಡೆದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’.

ನಗರದ ‘ಮೈತ್ರಿ’ ಪೊಲೀಸ್‌ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಕೊಡಗು ಮಟ್ಟದ ಕ್ವಿಜ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಗೆದ್ದವರು ಸಂಭ್ರಮಿಸಿದರು. ಹಿನ್ನಡೆ ಅನುಭವಿಸಿದವರು ಒಂದೆರಡು ಪ್ರಶ್ನೆಗೆ ಸರಿಯುತ್ತರ ನೀಡಿದ್ದರೆ ಪ್ರಶಸ್ತಿ ನಮ್ಮ ಪಾಲಾಗುತ್ತಿತ್ತು ಎಂದು ಮನದಲ್ಲಿ ಭಾವಿಸಿ ನಿರ್ಗಮಿಸಿದರು.

ಬೆಳಿಗ್ಗೆ 8.30ರ ವೇಳೆಗೆ ನೋಂದಣಿ ಆರಂಭವಾಯಿತು. ಅದಕ್ಕೂ ಮೊದಲೇ ವಿದ್ಯಾರ್ಥಿಗಳು ಬಂದಿದ್ದರು. ಬೆಳಿಗ್ಗೆ 10ರ ಸುಮಾರಿಗೆ ಪ್ರಾಥಮಿಕ ಸುತ್ತು ಆರಂಭವಾಯಿತು. 20 ಪ್ರಶ್ನೆಗಳು ಪರದೆಯ ಮೇಲೆ ಮೂಡಿದವು. ಕ್ವಿಜ್‌ ಮಾಸ್ಟರ್‌ ಸಚ್ಚಿನ್‌ ದೇಶಪಾಂಡೆ ಅವರು, ಒಂದೊಂದೆ ಪ್ರಶ್ನೆ ಕೇಳುತ್ತಿದ್ದಂತೆಯೇ ವಿದ್ಯಾರ್ಥಿಗಳು ಯೋಚಿಸಿ ಉತ್ತರಿಸಲು ಆರಂಭಿಸಿದರು. ಉತ್ತರ ಗೊತ್ತಿದ್ದ ವಿದ್ಯಾರ್ಥಿಗಳು ನಗುಮೊಗದಿಂದ ಬರೆದರು. ಉಳಿದವರು ಕಾಲಾವಕಾಶ ತೆಗೆದುಕೊಂಡು ತಾಳ್ಮೆಯಿಂದ ಉತ್ತರ ಬರೆದರು. ಬಳಿಕ ಮೌಲ್ಯಮಾಪನ ನಡೆದು ಆರು ತಂಡಗಳು ಪ್ರಧಾನ ಸುತ್ತಿಗೆ ಆಯ್ಕೆಯಾದವು.

ಪ್ರಧಾನ ಹಂತದಲ್ಲಿ ಐದು ಸುತ್ತಿನಲ್ಲಿ ಪ್ರಶ್ನೆಗಳಿದ್ದವು. ಪ್ರಶ್ನೋತ್ತರ ಸುತ್ತು, ಸರಿ– ತಪ್ಪು ಪ್ರಶ್ನೆಗಳು, ಚಿತ್ರ ಸಂಪರ್ಕ, ಧ್ವನಿ ಮತ್ತು ದೃಶ್ಯ ಹಾಗೂ ರ್‍ಯಾಪಿಡ್‌ ಸುತ್ತು.

ಆರಂಭದಿಂದಲೂ ಕೆಲವು ತಂಡಗಳು ಮೇಲುಗೈ ಸಾಧಿಸಿದವು. ಪರದೆಯ ಮೇಲೆ ಪ್ರಶ್ನೆಗಳು ಮೂಡುತ್ತಿದ್ದಂತೆಯೇ ಕೆಲವು ತಂಡಗಳು ಸರಿ ಉತ್ತರ ನೀಡಿ, ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು. ಅದೇ ರೀತಿ ತಪ್ಪು ಉತ್ತರ ನೀಡಿ ಅಂಕ ಕಳೆದುಕೊಂಡ ತಂಡದಲ್ಲಿ ನಿರಾಸೆ. ಸ್ಥಳೀಯ ಹುತ್ತರಿ ಹಬ್ಬ ಸೇರಿದಂತೆ ಕೊಡಗಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಬಂದು ಹೋದವು. ಅದಕ್ಕೆ ಸರಿಯುತ್ತರ ನೀಡಿದವರು ಹಿಗ್ಗಿದರು.

ಪ್ರಧಾನ ಸುತ್ತಿಗೆ ತಲುಪಿದ ತಂಡಗಳಲ್ಲಿ ವಲಯಮಟ್ಟದಲ್ಲಿ ಗೆದ್ದು ಬೆಂಗಳೂರಿನಲ್ಲಿ ನಡೆಯುವ ಗ್ರ್ಯಾಂಡ್‌ ಫಿನಾಲೆಗೆ ಹೋಗಬೇಕು ಎಂಬ ಬಯಕೆಯಿತ್ತು. ಅದರಂತೆಯೇ ಸರಿ ಉತ್ತರವನ್ನೂ ನೀಡುತ್ತಿದ್ದರು. ಆರು ತಂಡಗಳು ಉತ್ತರಿಸಲು ಆಗದಿದ್ದಾಗ, ಉತ್ತರ ಹೇಳುವ ಸರದಿ ಪ್ರೇಕ್ಷಕರದ್ದು. ಸರಿಯುತ್ತರ ನೀಡಿದ ಪ್ರೇಕ್ಷಕರಿಗೆ ಸ್ಥಳದಲ್ಲೇ ಸೂಕ್ತ ಬಹುಮಾನ ನೀಡಲಾಯಿತು. ಪ್ರೇಕ್ಷಕರ ಸರದಿ ಬಂದಾಗ ನಾಮುಂದು ತಾಮುಂದು... ಎಂದು ಕೈಯೆತ್ತುವ ದೃಶ್ಯವೂ ಕಂಡುಬಂತು.

ಕೆಲವು ಕಠಿಣ ಪ್ರಶ್ನೆಗಳಿಗೆ ಉತ್ತರ ನೀಡದಿದ್ದಾಗ ಕ್ವಿಜ್‌ ಮಾಸ್ಟರ್‌ ಕೆಲವು ಸುಳಿವು ನೀಡುತ್ತಿದ್ದರು. ಆಗ ಪ್ರೇಕ್ಷಕರೂ ಥಟ್‌ ಎಂದು ಉತ್ತರ ನೀಡಿ ಬಹುಮಾನ ಗೆದ್ದರು.

ರ್‍ಯಾಪಿಡ್‌ ರೌಂಡ್‌:ಪ್ರಧಾನ ಹಂತಕ್ಕೆ ಗೋಣಿಕೊಪ್ಪಲು ಕೂರ್ಗ್‌ ಪಬ್ಲಿಕ್‌ ಶಾಲೆಯ ಮೂರು ತಂಡಗಳು ಆಯ್ಕೆಯಾಗಿದ್ದವು. ಈ ಮೂರು ತಂಡಗಳ ನಡುವೆಯೂ ಪೈಪೋಟಿಯಿತ್ತು. ಅದರಲ್ಲಿ ಒಂದು ತಂಡಕ್ಕೆ ರ್‍ಯಾಪಿಡ್‌ ರೌಂಡ್‌ನಲ್ಲಿ ಅಂಕ ಗಳಿಸಲು ಸಾಧ್ಯವಾಗದೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅದೇ ಶಾಲೆಯ ಮತ್ತೆರಡು ತಂಡಗಳು ಕಠಿಣ ಪ್ರಶ್ನೆಗಳಿಗೂ ಜಾಣ್ಮೆಯಿಂದ ಉತ್ತರಿಸಿ ಅಂಕ ಹೆಚ್ಚಿಸಿಕೊಂಡರು. ರ್‍ಯಾಪಿಡ್ ರೌಂಡ್‌ನಲ್ಲಿ ಜಾಣ್ಮೆಯಿಂದ ಉತ್ತರ ನೀಡಿದ ದೀಪಕ್‌ ರಾಜ್‌ ಹಾಗೂ ಅಮೋಘವರ್ಷ ಜೋಡಿ ಪ್ರಥಮ ಸ್ಥಾನ ಗಳಿಸಿತು. ಅದೇ ಶಾಲೆಯ ಮಂಜುಪ್ರಸಾದ್‌ ಹಾಗೂ ಬೋಪಣ್ಣ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕೆಲವು ಪ್ರಶ್ನೆಗಳಲ್ಲಿ ಉತ್ತರಿಸಲು ಎಡವಿದ ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆಯ ಹರಿಪ್ರಸಾದ್ ಹಾಗೂ ತುಷಾರ್‌ ಮೂರನೇ ಸ್ಥಾನ ಗಳಿಸಿದರು.

ದೂರದಿಂದಲೂ ಆಗಮನ:ಕೊಡಗಿನ ಗಡಿಭಾಗದ ಶಾಲೆಗಳಿಂದಲೂ ರಸಪ್ರಶ್ನೆ ಸ್ಪರ್ಧೆಗೆ ವಿದ್ಯಾರ್ಥಿಗಳು ಬಂದಿದ್ದರು. ಪ್ರಧಾನ ಹಂತಕ್ಕೆ ತಲುಪಲು ವಿಫಲವಾದರೂ ಸ್ಪರ್ಧೆ ಮುಕ್ತಾಯವಾದ ಮೇಲೆ ವಿದ್ಯಾರ್ಥಿಗಳು ನಿರ್ಗಮಿಸಿದರು.

ಕ್ವಿಜ್‌ಗೆ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ‘ಕೊಡಗಿನಲ್ಲಿ ರಸಪ್ರಶ್ನೆ ಆಯೋಜಿಸಿರುವುದು ಸಂತೋಷದ ಸಂಗತಿ. ಇದು ಸ್ಪರ್ಧಾತ್ಮಕ ಯುಗ. ಶಿಕ್ಷಣ ಮುಗಿದ ಬಳಿಕ ಉದ್ಯೋಗಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಈಗಲೇ ತಯಾರಿ ನಡೆಸಬೇಕು’ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್ ಹಾಗೂ ಡಿಡಿಪಿಐ ಪೆರಿಗ್ರಿನ್‌ ಎಸ್‌. ಮಚ್ಚಾದೊ ಬಹುಮಾನ ವಿತರಿಸಿದರು. ‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥೆ ವಿಶಾಲಾಕ್ಷಿ ಅಕ್ಕಿ, ಪ್ರಸರಣ ವಿಭಾಗದ ವ್ಯವಸ್ಥಾಪಕ ಕುಮಾರ್‌ನಾಯಕ್‌, ಪ್ರಸರಣ ವಿಭಾಗದ ಎಕ್ಸಿಕ್ಯುಟಿವ್‌ ನಾಗೇಶ್‌ ಹಾಗೂ ಸೋನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT