ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇಟಿಂಗ್ ಆ್ಯಪ್‌‍ನಲ್ಲಿ ನಕಲಿ ಖಾತೆ ಬಳಸಿ ನೂರಾರು ಗಂಡಸರನ್ನು ಮೋಸ ಮಾಡಿದರು!

Last Updated 18 ಜೂನ್ 2018, 6:03 IST
ಅಕ್ಷರ ಗಾತ್ರ

ನವದೆಹಲಿ: ಡೇಟಿಂಗ್ ಆ್ಯಪ್‍ನಲ್ಲಿ ನಕಲಿ ಖಾತೆ ಸೃಷ್ಟಿಸಿ ನೂರಾರು ಗಂಡಸರನ್ನು ಮೋಸ ಮಾಡಿದ ಜೋಡಿಯೊಂದನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಕಳೆದ 10 ತಿಂಗಳಿನಿಂದ ಈ ಜೋಡಿ ಡೇಟಿಂಗ್ ಆ್ಯಪ್‍ನಲ್ಲಿ ಖಾತೆ ಹೊಂದಿರುವ ಗಂಡಸರಿಂದ ₹500, ₹1000 ರೂಪಾಯಿ ವಸೂಲಿ ಮಾಡಿ ಮೋಸ ಮಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ಜೋಡಿ ಡೇಟಿಂಗ್ ಆ್ಯಪ್‍ನಲ್ಲಿ ನೋಂದಣಿ ಮಾಡಿರುವ ಗಂಡಸರಲ್ಲಿ ₹1000 ಕ್ಕಿಂತ ಹೆಚ್ಚು ಹಣವನ್ನು ಕೇಳುತ್ತಿರಲಿಲ್ಲ. ಹಾಗಾಗಿ ಕಳೆದ 10 ತಿಂಗಳವರೆಗೆ ಯಾರೊಬ್ಬರೂ ಇವರ ವಿರುದ್ಧ ದೂರು ನೀಡಿರಲಿಲ್ಲ ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ ಚಿನ್ಮಯಿ ಬಿಸ್ವಾಲ್ (ದೆಹಲಿ ಆಗ್ನೇಯ) ಹೇಳಿದ್ದಾರೆ.

ಪೊಲೀಸರಿಗೆ ದೂರು ನೀಡಿದರೆ ಡೇಟಿಂಗ್ ಸೈಟ್‍ನಲ್ಲಿ ತಾವು ಖಾತೆ ಹೊಂದಿರುವುದು ಎಲ್ಲರಿಗೂ ಗೊತ್ತಾಗುತ್ತದೆ ಎಂಬುದಕ್ಕೆ ಅಂಜಿ, ಮೋಸ ಹೋದ ಮಂದಿಯಲ್ಲಿ ಯಾರೊಬ್ಬರೂ ಪೊಲೀಸರಿಗೆ ದೂರು ನೀಡಲು ಮುಂದೆ ಬಂದಿಲ್ಲ ಎಂದಿದ್ದಾರೆ ಬಿಸ್ವಾಲ್.

ಈ ರೀತಿ ಮೋಸ ಮೋಡಿದ ಜೋಡಿಯಲ್ಲಿ 29 ಹರೆಯದ ಯುವಕನ ಹೆಸರು ಚಿರಂಜೀವಿ. ಈತ ನಿರುದ್ಯೋಗಿಯಾಗಿದ್ದಾನೆ. ಈತನ ಜತೆಗಿದ್ದ 19 ಹರೆಯದ ಯುವತಿಯ ಮಾಹಿತಿ ಬಹಿರಂಗವಾಗಿಲ್ಲ.

ಡೇಟಿಂಗ್ ಸೈಟ್‍ನಲ್ಲಿರುವ ಗಂಡಸರನ್ನು ಮೋಸದಾಟದಲ್ಲಿ ಸಿಲುಕಿಸಲು ಚಿರಂಜೀವಿ ಈ ಯುವತಿಯ ಸಹಾಯ ಪಡೆದಿದ್ದು ಆಕೆಗೆ ದಿನಗೂಲಿಯಾಗಿ 600 ನೀಡುತ್ತಿದ್ದನು ಎಂದು ಡಿಸಿಪಿ ಹೇಳಿದ್ದಾರೆ.

ಜನರಿಂದ ದುಡ್ಡು ಪಡೆಯಲು ಇವರು ಇ-ವ್ಯಾಲೆಟ್ ಬಳಸುತ್ತಿದ್ದರು. ಇದು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಹೊಂದಿದೆ. ನಕಲಿ ದಾಖಲೆ ಪತ್ರಗಳನ್ನು ನೀಡಿ ಇವರು ಬ್ಯಾಂಕ್ ಖಾತೆ ತೆರೆದಿದ್ದರು. ಇವರ ಬಳಿ ಇದ್ದ 5 ಮೊಬೈಲ್ ಫೋನ್, 11 ಸಿಮ್ ಕಾರ್ಡ್‍ಗಳನ್ನು ಪೊಲೀಸರು ವಶ ಪಡಿಸಿದ್ದಾರೆ.

ಮೋಸದಾಟ ಗೊತ್ತಾಗಿದ್ದು ಹೇಗೆ?
ಕಳೆದ ತಿಂಗಳು ಮಹಿಳೆಯೊಬ್ಬರು ತನ್ನ ಫೋಟೊ ಅನುಮತಿಯಿಲ್ಲದೆಯೇ ಡೇಟಿಂಗ್ ಸೈಟ್‍ನಲ್ಲಿ ಬಳಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆಯ ಪರಿಚಿತರೇ ಈ ಫೋಟೊವನ್ನು ಬಳಸಿರಬಹುದು ಎಂದು ಪೊಲೀಸರು ಹೇಳಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಮಹಿಳೆಯ ಫೋಟೊ ದುರ್ಬಳಕೆ ಮಾಡಿದ್ದು ಚಿರಂಜೀವಿ ಎಂದು ತಿಳಿದುಬಂದಿತ್ತು. ಆ ಫೋಟೊವನ್ನು ಅಲ್ಲಿಂದ ತೆಗೆದುಹಾಕುವಂತೆ ಕೇಳಿಕೊಂಡರೂ ಒಪ್ಪದ ಚಿರಂಜೀವಿ, ಮಹಿಳೆಗೆ ಬೆದರಿಕೆಯನ್ನೊಡ್ಡಿದ್ದರು ಎಂದಿದ್ದಾರೆ ಡಿಸಿಪಿ.

ಡೇಟಿಂಗ್ ಸೈಟ್‍ನಲ್ಲಿ ಗಂಡಸರ ಜತೆ ಮಾತನಾಡಬೇಕಾದರೆ ಮಹಿಳೆಯೊಬ್ಬರ ಸಹಾಯ ಆತನಿಗೆ ಬೇಕಿತ್ತು. ಹಾಗಾಗಿ ಮಹಿಳೆಯೊಬ್ಬರ ಸಹಾಯದಿಂದ ಫೋನ್ ಕರೆ ಮಾಡಿಸುತ್ತಿದ್ದು, ಆ ಮಹಿಳೆಗೆ ಸಂಬಳ ನೀಡುತ್ತಿದ್ದ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ. ಡೇಟಿಂಗ್ ಆ್ಯಪ್‍ನಲ್ಲಿ ನೀಡಿದ ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಿದಾಗ ಚಿರಂಜೀವಿಯ ಮೋಸದಾಟ ಬಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT