ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ವೈಯಕ್ತಿಕ ಬದುಕು ಗೌರವಿಸಿ: ಜಿ.ರಾಜೇಂದ್ರ

ಕುಶಾಲನಗರದಲ್ಲಿ ನಡೆದ ‘ಪ್ರೆಸ್‌ಕ್ಲಬ್‌ ಡೇ’, ಸಾಧಕರಿಗೆ ಸನ್ಮಾನ
Last Updated 17 ಫೆಬ್ರುವರಿ 2021, 16:01 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಪ್ರೆಸ್‌ಕ್ಲಬ್‌ನ 21ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಮಹಾಸಭೆಯು ಮಂಗಳವಾರ ಕುಶಾಲನಗರದ ನಿಸರ್ಗ ಟೂರಿಸ್ಟ್ ಸೆಂಟರ್‌ನಲ್ಲಿ ನಡೆಯಿತು. ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು.

ವಾರ್ಷಿಕೋತ್ಸವ ಉದ್ಘಾಟಿಸಿದ ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಮಾತನಾಡಿ, ‘ಈಚೆಗೆ ಇನ್ನೊಬ್ಬರ ತೇಜೋವಧೆ ಮಾಡುವ ಬೆಳವಣಿಗೆ ನಡೆಯುತ್ತಿವೆ. ಇದು ಅತ್ಯಂತ ಅಪಾಯಕಾರಿ. ಪತ್ರಕರ್ತರು ಮತ್ತೊಬ್ಬರ ವೈಯಕ್ತಿಕ ಬದುಕು, ಜೀವನ ಗೌರವಿಸಬೇಕು. ಮತ್ತೊಬ್ಬರ ತೇಜೋವಧೆ ಮಾಡುವ ಅವಕಾಶವನ್ನೂ ಯಾವ ಕಾನೂನು ನಮಗೆ ನೀಡಿಲ್ಲ’ ಎಂದು ಹೇಳಿದರು.

ಕಳೆದ ವರ್ಷ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತವಾಗಿತ್ತು. ಅದಕ್ಕೆ ನೈಜವಾದ ಕಾರಣವನ್ನೂ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.

ಕ್ಲಬ್‌ ಅಧ್ಯಕ್ಷ ರಮೇಶ್‌ ಕುಟ್ಟಪ್ಪ ಮಾತನಾಡಿ, ‘ಸಾಮಾಜಿಕವಾಗಿ ಶೋಷಣೆ ಒಳಗಾದ ಸಮುದಾಯ ಹಾಗೂ ಜನರ ಪರವಾಗಿ ಪತ್ರಕರ್ತ ಕೆಲಸ ಮಾಡಬೇಕಿದೆ. ಅಂತಹ ಅನಿವಾರ್ಯತೆ ಪ್ರಸ್ತುತ ಸೃಷ್ಟಿಯಾಗಿದೆ’ ಎಂದು ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿದರು.

ಪ್ರಶಸ್ತಿ ಪ್ರದಾನ: ಕೆ.ಬಿ.ಮಹಾಂತೇಶ್ ಸ್ಮರಣಾರ್ಥ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ (2019) ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯ ಉಪ ಸಂಪಾದಕ ಕಾಯಪಂಡ ಶಶಿ ಸೋಮಯ್ಯ ಅವರಿಗೆ ಪ್ರದಾನ ಮಾಡಲಾಯಿತು.

ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಾಗೂ ಪ್ರಶಸ್ತಿಗೆ ಭಾಜನರಾದ 19 ಪತ್ರಕರ್ತರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ವರದಿಗೆ ಪ್ರಶಸ್ತಿ ಸ್ವೀಕರಿಸಿರುವ ಪುತ್ತರೀರ ಕರುಣ್ ಕಾಳಯ್ಯ, ಜಿಲ್ಲಾ ಪತ್ರಕರ್ತರ ಸಂಘದಿಂದ ಪ್ರಶಸ್ತಿಗೆ ಭಾಜನರಾಗಿರುವ ಎಚ್.ಕೆ.ಜಗದೀಶ್, ನವೀನ್ ಸುವರ್ಣ, ಎಚ್.ಟಿ.ಅನಿಲ್, ಸುನೀಲ್ ಪೊನ್ನಟ್ಟಿ, ಸಣ್ಣುವಂಡ ಕಿಶೋರ್ ನಾಚಪ್ಪ, ಕುಡೆಕಲ್ ಸಂತೋಷ್, ಹಿರಿಕರ ರವಿ, ವಿಘ್ನೇಶ್ ಎಂ.ಭೂತನಕಾಡು, ಆರ್.ಸುಬ್ರಮಣಿ, ಸತೀಶ್ ನಾರಾಯಣ ಅವರನ್ನು ಸನ್ಮಾನಿಸಲಾಯಿತು.

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಆಶ್ರಯ ನೀಡಿದ ವಿ.ವಿ.ಅರುಣ್‍ಕುಮಾರ್, ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಾಧ್ಯಮ ಕ್ಷೇತ್ರದಿಂದ ಸನ್ಮಾನಕ್ಕೆ ಭಾಜನರಾದ ಎಚ್.ಆರ್.ಹರೀಶ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ಲೈಕ್‌ ಆ್ಯಪ್‍ನಲ್ಲಿ ದಾಖಲೆ ನಿರ್ಮಿಸಿರುವ ವಿಶ್ವ ಕುಂಬೂರು ಅವರನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.

ಕ್ಲಬ್‌ನ ವಾರ್ಷಿಕ ಮಹಾಸಭೆ ನಡೆಯಿತು. ಸದಸ್ಯ ಪ್ರಭು ಮಾತನಾಡಿ, ಕೊರೊನಾದ ಬಳಿಕ ಪತ್ರಕರ್ತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬದುಕು ನಿರ್ವಹಣೆಯೂ ಕಷ್ಟವಾಗಿದೆ. ಪ್ರೆಸ್‌ಕ್ಲಬ್‌ ಅಥವಾ ಸಂಘದಡಿ ಸಹಕಾರ ಸಂಘ ರಚಿಸಿ, ಪತ್ರಕರ್ತರಿಗೆ ನೆರವಾಗಬೇಕು ಎಂದು ಕೋರಿದರು.

ಇದೇ ವೇಳೆ ಪ್ರೆಸ್‌ಕ್ಲಬ್‌ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್‌ ಟೂರ್ನಿಯಲ್ಲಿ ವಿಜೇತರಾದ ತೇಜಸ್‌ ಪಾಪಯ್ಯ ಮಾಲೀಕತ್ವದ ಕೂರ್ಗ್‌ ಮೌಂಟ್‌ ಲಯನ್ಸ್‌ ತಂಡಕ್ಕೆ ಪ್ರಥಮ ಬಹುಮಾನ ನೀಡಲಾಯಿತು. ಲೋಕೇಶ್‌ ಸಾಗರ್‌ ಮಾಲೀಕತ್ವದ ಕಾವೇರಿ ಮಕ್ಕಳು ತಂಡಕ್ಕೆ ದ್ವಿತೀಯ ಬಹುಮಾನ ವಿತರಿಸಲಾಯಿತು. ಬೆಸ್ಟ್‌ ಬ್ಯಾಟ್ಸ್‌ಮನ್‌ ವಿನೋದ್‌ ಕುಶಾಲನಗರ, ಬೆಸ್ಟ್‌ ಕ್ಯಾಚರ್ ಅಲ್ಲಾರಂಡ ವಿಠಲ್‌ ನಂಜಪ್ಪ, ಬೆಸ್ಟ್‌ ಬೌಲರ್‌ ಮಂಜು ಸುವರ್ಣ ಅವರಿಗೆ ವೈಯಕ್ತಿಕ ಪ್ರಶಸ್ತಿ ನೀಡಲಾಯಿತು.

ಆಡಳಿತ ಮಂಡಳಿಯ ರೆಜಿತ್‌ ಕುಮಾರ್‌ ಗುಹ್ಯ, ಆರ್‌.ಸುಬ್ರಮಣಿ, ಡಿ.ಪಿ.ರಾಜೇಶ್‌, ನಾಗರಾಜ್‌ ಶೆಟ್ಟಿ, ಅಜೀಜ್‌ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT