ದಸರಾಕ್ಕೂ ಮುನ್ನ ಖಾಸಗಿ ಬಸ್‌ ನಿಲ್ದಾಣ ಸ್ಥಳಾಂತರ

7
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹೇಳಿಕೆ

ದಸರಾಕ್ಕೂ ಮುನ್ನ ಖಾಸಗಿ ಬಸ್‌ ನಿಲ್ದಾಣ ಸ್ಥಳಾಂತರ

Published:
Updated:
Deccan Herald

ಮಡಿಕೇರಿ: ‘ಇಲ್ಲಿನ ರೇಸ್‌ಕೋರ್ಸ್‌ ರಸ್ತೆಯ ಪಕ್ಕ ನಿರ್ಮಾಣ ಮಾಡಲಾಗಿರುವ ಖಾಸಗಿ ಬಸ್‌ ನಿಲ್ದಾಣಕ್ಕೆ ಖಾಸಗಿ ಬಸ್‌ಗಳನ್ನು ದಸರಾಕ್ಕೂ ಮುನ್ನವೇ ಸ್ಥಳಾಂತರ ಮಾಡಲಾಗುವುದು. ಇನ್ನು 15 ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹೇಳಿದರು.

ನಗರಸಭೆಯ ತಮ್ಮ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಖಾಸಗಿ ಬಸ್‌ ಮಾಲೀಕರು ಹಾಗೂ ಚಾಲಕರು ಸ್ಥಳಾಂತರಕ್ಕೆ ಒಪ್ಪಿಗೆ ಸೂಚಿಸಲಿದ್ದಾರೆ ಎಂಬ ಭರವಸೆಯಿದೆ. ಕಳಪೆ ಕಾಮಗಾರಿಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಗುತ್ತಿಗೆದಾರರಿಗೆ ಇನ್ನೂ ₹20 ಲಕ್ಷ ಹಣ ಪಾವತಿಸಬೇಕು. ಕಳಪೆಯಾಗಿದ್ದರೆ ಗುತ್ತಿಗೆದಾರರು ದುರಸ್ತಿ ಮಾಡಿದ ಬಳಿಕವಷ್ಟೇ ಪೂರ್ಣ ಹಣ ಪಾವತಿ ಮಾಡಲಾಗುವುದು’ ಎಂದು ಸ್ಪಷ್ಟನೆ ನೀಡಿದರು.

ತೋಟಗಾರಿಕೆ ಇಲಾಖೆಗೆ ಸೇರಿದ್ದ 3 ಎಕರೆ ಜಾಗವನ್ನು ವಾಪಸ್ ಪಡೆದು ಖಾಸಗಿ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಆರಂಭದಲ್ಲಿ ಬಸಂತ್‌ ಕನ್ಸಲ್‌ಟೆನ್ಸಿ ಅವರಿಂದ ಡಿಪಿಆರ್‌ ಮಾಡಿಸಲಾಗಿತ್ತು. ಬಸ್‌ ಟರ್ಮಿನಲ್‌, ಕಾಂಕ್ರೀಟ್‌ ರಸ್ತೆ, ಕಮರ್ಷಿಯಲ್‌ ಕಾಂಪ್ಲೆಕ್ಸ್‌, ಹೋಟೆಲ್‌ ಕಟ್ಟಡಕ್ಕೆ ₹ 19.37 ಕೋಟಿಯ ಅಂದಾಜು ಪಟ್ಟಿ ತಯಾರಿಸಿತ್ತು. ಖಾಸಗಿ ಸಹಭಾಗಿತ್ವದಲ್ಲಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದೆವು. ಆದರೆ, ಅನುಮತಿ ಸಿಗಲಿಲ್ಲ. ಸರ್ಕಾರ ನೀಡಿದ ಅನುದಾನದಲ್ಲೇ ನಿರ್ಮಾಣಕ್ಕೆ ಮುಂದಾದೆವು ಎಂದು ಮಾಹಿತಿ ನೀಡಿದರು.

₹ 19 ಕೋಟಿ ಅನುದಾನ ಲಭ್ಯವಿಲ್ಲದ ಕಾರಣ ಅಂದಾಜು ವೆಚ್ಚವನ್ನು ₹4.99 ಕೋಟಿಗೆ ಇಳಿಕೆ ಮಾಡಲಾಯಿತು. ಬಸಂತ್‌ ಕನ್ಸಲ್‌ಟೆನ್ಸಿ ಅವರು ತಯಾರಿಸಿದ ಡಿಪಿಆರ್‌ನಂತೆಯೇ ಬಸ್‌ ಟರ್ಮಿನಲ್‌ ಹಾಗೂ ಅವಶ್ಯ ಕಾಮಗಾರಿ ಮಾತ್ರ ಕೈಗೆತ್ತಿಕೊಳ್ಳಲಾಯಿತು. ಅಡಿಪಾಯ ನಿರ್ಮಾಣದ ವೇಳೆ ಅಂತರ್ಜಲ ಸಿಕ್ಕಿತ್ತು. ಮುಂದೆ ಕಟ್ಟಡಕ್ಕೆ ಅಪಾಯವಾಗುವ ಸಾಧ್ಯತೆಯನ್ನು ಕಂಡು ಸುಳ್ಯದ ಪರಿಣತರನ್ನು ಕರೆಸಿ ಪರಿಶೀಲನೆ ನಡೆಸಿದೆವು. ಎಂಜಿನಿಯರ್‌ಗಳು ಮರಳು ಹಾಗೂ ಕಲ್ಲು ತುಂಬಿಸಲು ಸೂಚಿಸಿದ್ದರು. ಮಣ್ಣು ಪರೀಕ್ಷೆ ನಡೆಸಿ ವರದಿ ಆಧಾರದ ಮೇಲೆಯೇ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹೀಗಾಗಿ, ಡಿಪಿಆರ್‌ನಲ್ಲಿನ ನಿಗದಿಗೊಳಿಸಿದ್ದಕ್ಕಿಂತ ಹೆಚ್ಚಿನ ಕಬ್ಬಿಣವನ್ನು ಕಾಮಗಾರಿಗೆ ಅಳವಡಿಸಲಾಗಿದೆ. ವೆಚ್ಚವೂ ಅಧಿಕವಾಯಿತು ಎಂದು ಸ್ಪಷ್ಟನೆ ನೀಡಿದರು.

ಪರಿಣತರ ಸೂಚನೆ ಆಧರಿಸಿಯೇ ಬಸ್‌ ನಿಲ್ದಾಣ ಕಾಮಗಾರಿ ನಡೆಸಲಾಗಿದೆ. ವಿರೋಧ ಪಕ್ಷಗಳು ಕಳಪೆ ಎಂದು ಸುಳ್ಳು ಆರೋಪ ಮಾಡುತ್ತಿವೆ. ಹಂತ ಹಂತವಾಗಿಯೇ ಬಿಲ್‌ ಸಹ ಪಾವತಿಸಲಾಗಿದೆ. ಕಟ್ಟಡದ ಗುಣಮಟ್ಟವನ್ನು ಮೂರನೇ ವ್ಯಕ್ತಿಯಿಂದಲೂ ಪರಿಶೀಲನೆ ನಡೆಸಲಾಗಿದೆ. ಪತ್ರಿಕೆಗಳಲ್ಲಿ ಬಸ್‌ ನಿಲ್ದಾಣ ಕಾಮಗಾರಿಯ ಬಗ್ಗೆ ಬರುತ್ತಿರುವ ಹೇಳಿಕೆಗಳು ನಿರಾಧಾರ ಎಂದು ಹೇಳಿದರು.

ಪ್ರಭಾರ ಪೌರಾಯುಕ್ತ ಗೋಪಾಲಕೃಷ್ಣ ಮಾತನಾಡಿ, ‘ಕೈಗಾರಿಕಾ ಪ್ರದೇಶದಲ್ಲಿ ವಾಹನ ನಿಲುಗಡೆ ನಿರ್ಬಂಧಿಸಿದ ಬಳಿಕ ಬಸ್‌ ಸಂಚಾರ ಆರಂಭಿಸಲಾಗುವುದು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಂಜಿನಿಯರ್‌ ವನಿತಾ ಹಾಜರಿದ್ದರು.   

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !